Nitin Nabin | ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತಿನ್...ಮುಂದಿನ ರಾಷ್ಟ್ರೀಯ ಅಧ್ಯಕ್ಷರಾಗೋದು ಪಕ್ಕಾನಾ.? ಏನು ಹೇಳುತ್ತೆ ಇತಿಹಾಸ..?

 ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷನಿತಿನ್ ನಬಿನ್
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷನಿತಿನ್ ನಬಿನ್
Published on
ಪಟನಾ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿಹಾರದ ಸಚಿವ ನಿತಿನ್ ನಬಿನ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಸಂಪುಟದಲ್ಲಿ ರಸ್ತೆ ನಿರ್ಮಾಣ, ನಗರಾಭಿವೃದ್ಧಿ ಮತ್ತು ವಸತಿ ಖಾತೆಯನ್ನು ನಿಭಾಯಿಸುತ್ತಿದ್ದರು.
ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್​ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಅವರ ಸಂಘಟನಾ ಕೌಶಲ್ಯವು ಪಕ್ಷದ ಸಾರ್ವಜನಿಕ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಪ್ರಯಾಣಕ್ಕೆ ಹೊಸ ದಿಕ್ಕನ್ನು ಒದಗಿಸುತ್ತದೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ. ನಬಿನ್​ರನ್ನು ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಷಾ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ಅನೇಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ನಬಿನ್ ನೇಮಕದ ಬಗ್ಗೆ ನಡ್ಡಾ ಹೇಳಿದ್ದೇನು..?

ಪಕ್ಷದ ಪ್ರಮುಖ ಹುದ್ದೆಯ ವಹಿಸಿಕೊಂಡಿದ್ದಕ್ಕಾಗಿ ನಬಿನ್ ಅವರಿಗೆ ಅಭಿನಂದನೆ ಸಲ್ಲಿಸಿದ ನಡ್ಡಾ, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕಾರ್ಯಕಾರಿ ಅಧ್ಯಕ್ಷರು ಬಿಜೆಪಿಯ ಸಾರ್ವಜನಿಕ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಪ್ರಯಾಣಕ್ಕೆ ಹೊಸ ದಿಕ್ಕನ್ನು ಒದಗಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು. ನೀವು ಬಿಜೆಪಿ ಸರ್ಕಾರದ ಸಾರ್ವಜನಿಕ ಕಲ್ಯಾಣ ನೀತಿಗಳು ಮತ್ತು ಸಂಘಟನೆಯ ವಿಚಾರಗಳನ್ನು ಇನ್ನೂ ಹೆಚ್ಚಿನ ಸಂಕಲ್ಪದೊಂದಿಗೆ ಜನರಿಗೆ ತಲುಪಿಸುವಿರಿ. ನಿಮ್ಮ ಹೊಸ ಜವಾಬ್ದಾರಿಗಳು ಮತ್ತು ಯಶಸ್ವಿ ಅಧಿಕಾರಾವಧಿಗೆ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಯಾರು ನಿತಿನ್ ನಬಿನ್?

ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿರುವ 45 ವರ್ಷದ ನಬಿನ್, ಭಾನುವಾರ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇವರೇ ಮುಂಬರುವ ರಾಷ್ಟ್ರೀಯ ಅಧ್ಯಕ್ಷರಾಗುವ ಸಾಧ್ಯತೆ ಇದ್ದು, ಕಳೆದ ಸಲ ನಡ್ಡಾ ರಾಷ್ಟ್ರೀಯ ಅಧ್ಯಕ್ಷರಾಗುವ ಮುನ್ನ ಅಮಿತ್​ ಷಾ ನೇತೃತ್ವದಲ್ಲಿ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದರು.
ಬಿಜೆಪಿಯ ಹಿರಿಯ ಮತ್ತು ಮಾಜಿ ಶಾಸಕ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರ ನಬಿನ್​​ರನ್ನು ಕ್ರಿಯಾಶೀಲ, ಸೈದ್ಧಾಂತಿಕವಾಗಿ ಬೇರೂರಿರುವ ಮತ್ತು ಸಂಘಟನೆಗೆ ಆಳವಾಗಿ ಬದ್ಧರಾಗಿರುವ ವ್ಯಕ್ತಿ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿನ್ನೆಲೆಯಿಂದ ಬಂದವರಾಗಿದ್ದು, ಐದು ಬಾರಿ ಶಾಸಕರಾಗಿರುವ ನಬಿನ್ ಪಾಟ್ನಾದ ಬಂಕಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಎರಡು ಬಾರಿ ಬಿಹಾರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net