ಮೋದಿ-ಯೋಗಿ ಜೋಡಿಯಿಂದ ಯುಪಿ ಈಗ ಉತ್ತಮ ಪ್ರದೇಶ!...ಲಖನೌದಲ್ಲಿ ಶಂಖನಾದ ಮೊಳಗಿಸಿದ ಬಿಜೆಪಿ ಬಾಸ್ ನಿತೀನ್ ನವೀನ್ | Nitin Nabin

Nitin Nabin | ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್
Nitin Nabin | ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್
Published on
ಲಖನೌ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಆಡಳಿತಾರೂಢ ಬಿಜೆಪಿ, ಮುಂಬರುವ ಚುನಾವಣೆಯಲ್ಲೂ ಭರ್ಜರಿ ಜಯ ಸಾಧಿಸಿ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ (Nitin Nabin)​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿನ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಎರಡು ದಿನಗಳ ಪ್ರವಾಸಕ್ಕಾಗಿ ಶನಿವಾರ ಲಖನೌಗೆ ತೆರಳಿರುವ ನವೀನ್​, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರ ಜೋಡಿ ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶವನ್ನಾಗಿ ಪರಿವರ್ತಿಸಿದೆ ಎಂದರು.
ಲಖನೌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಿತಿನ್ ನವೀನ್​ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ಬ್ರಜೇಶ್ ಪಾಠಕ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಂಕಜ್ ಚೌಧರಿ ಮತ್ತು ಹಲವು ಸಚಿವರು ಆತ್ಮೀಯವಾಗಿ ಬರಮಾಡಿಕೊಂಡರು. ಇದರ ಬೆನ್ನಲ್ಲೇ ವಿಮಾನ ನಿಲ್ದಾಣದಿಂದ ಬಿಜೆಪಿ ಪ್ರಧಾನ ಕಚೇರಿಯವರೆಗೆ ಭವ್ಯ ರೋಡ್ ಶೋ ನಡೆಸಲಾಯಿತು. ದಾರಿಯುದ್ದಕ್ಕೂ ಜಮಾಯಿಸಿದ್ದ ಸಾವಿರಾರು ಕಾರ್ಯಕರ್ತರು ನವೀನ್​ ಅವರ ಮೇಲೆ ಹೂಮಳೆ ಸುರಿದು ಅದ್ಧೂರಿ ಸ್ವಾಗತ ಕೋರಿದರು.

ಕಾಶಿ, ಅಯೋಧ್ಯೆ, ಮಥುರಾದಲ್ಲಿ ಮತ್ತೆ ಅರಳಲಿದೆ ಕಮಲ!

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಮೋದಿ-ಯೋಗಿ ಡಬಲ್ ಇಂಜಿನ್ ಸರ್ಕಾರ ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಾಯಿಸಿದೆ. ಕಾಶಿ ವಿಶ್ವನಾಥ, ಅಯೋಧ್ಯೆ ಮತ್ತು ಮಥುರಾದಂತಹ ಪವಿತ್ರ ನಗರಿಗಳನ್ನು ಹೊಂದಿರುವ ಉತ್ತರ ಪ್ರದೇಶದ ನೆಲದಲ್ಲಿ ಮತ್ತೊಮ್ಮೆ ಕಮಲ ಅರಳುವುದು ನಿಶ್ಚಿತ. ಇಂದು ಲಖನೌ ಸೇರಿದಂತೆ ಇಡೀ ರಾಜ್ಯದಾದ್ಯಂತ ಕಾರ್ಯಕರ್ತರಲ್ಲಿ ಕಂಡುಬಂದ ಉತ್ಸಾಹವನ್ನು ನೋಡಿದರೆ, 2027ರ ಚುನಾವಣೆಗೆ ಬಿಜೆಪಿ ಪಡೆ ಸಂಪೂರ್ಣ ಸಜ್ಜಾಗಿದೆ ಎಂದು ನಾವು ಖಂಡಿತವಾಗಿ ಹೇಳಬಹುದು ಎಂದರು.
ಈ ಎರಡು ದಿನಗಳ ಭೇಟಿಯಲ್ಲಿ ನಿತಿನ್ ನವೀನ್​ ಅವರ ಕಾರ್ಯಸೂಚಿ ಅತ್ಯಂತ ಸ್ಪಷ್ಟವಾಗಿದ್ದು, ಮುಂಬರುವ ಚುನಾವಣಾ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಇದರೊಂದಿಗೆ ಉಪಮುಖ್ಯಮಂತ್ರಿಗಳಾದ ಮೌರ್ಯ, ಪಾಠಕ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ. ಅಲ್ಲದೆ, ರಾಜ್ಯದ ಪ್ರಮುಖ ಬುದ್ಧಿಜೀವಿಗಳು, ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು ಮತ್ತು ವಿವಿಧ ಮೋರ್ಚಾಗಳ ಮುಖ್ಯಸ್ಥರನ್ನು ಭೇಟಿ ಮಾಡಿ ತಳಮಟ್ಟದ ವರದಿಯನ್ನು ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ ಯೋಗಿ ಪಡೆ!

ದೇಶದಲ್ಲೇ ಅತಿ ಹೆಚ್ಚು ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವುದು ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದೆ. 2017ರ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದ ಬಿಜೆಪಿ, 2022ರಲ್ಲಿ 255 ಸ್ಥಾನಗಳಿಗೆ ಕುಸಿದಿದ್ದರೂ ಸುಲಭವಾಗಿ ಬಹುಮತ ಪಡೆದು ಎರಡನೇ ಬಾರಿಗೆ ಸರ್ಕಾರ ರಚಿಸಿತ್ತು. ಈಗ 2027ರಲ್ಲೂ ವಿಪಕ್ಷಗಳಿಗೆ ಶಾಕ್ ನೀಡಿ, ಮೂರನೇ ಬಾರಿಗೆ ಸಿಂಹಾಸನ ಏರಲು ಕೇಸರಿ ಪಡೆ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net