ಕಳೆದ 10 ವರ್ಷಗಳಲ್ಲಿ 94,000 ಸರ್ಕಾರಿ ಶಾಲೆಗಳು ಬಂದ್! ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 2.26 ಕೋಟಿಗೆ ಇಳಿಕೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ 10 ವರ್ಷಗಳಲ್ಲಿ ರಾಷ್ಟ್ರವ್ಯಾಪಿ ಸುಮಾರು 94,000 ಸರ್ಕಾರಿ ಶಾಲೆಗಳು ಬಂದ್​
  • ಸರಾಸರಿ ದಿನಕ್ಕೆ 25 ಶಾಲೆಗಳಿಗೆ ಬೀಗ ಜಡಿಯಲಾಗುತ್ತಿದೆ
  • ಒಟ್ಟು ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯಲ್ಲೂ 2.26 ಕೋಟಿಯಷ್ಟು ಭಾರಿ ಕುಸಿತ
ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕಳೆದ ಒಂದು ದಶಕದಲ್ಲಿ ಆತಂಕಕಾರಿ ಬದಲಾವಣೆಗಳು ಕಂಡುಬಂದಿದ್ದು, ನೀತಿ ಆಯೋಗದ (NITI Aayog) ಇತ್ತೀಚಿನ ವರದಿಯ ಪ್ರಕಾರ, ಕಳೆದ 10 ವರ್ಷಗಳಲ್ಲಿ ರಾಷ್ಟ್ರವ್ಯಾಪಿ ಸುಮಾರು 94,000 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಅಂದರೆ, ಸರಾಸರಿ ದಿನಕ್ಕೆ 25 ಶಾಲೆಗಳಿಗೆ ಬೀಗ ಹಾಕಲಾಗುತ್ತಿದೆ. ಇದರೊಂದಿಗೆ ಒಟ್ಟು ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯಲ್ಲೂ 2.26 ಕೋಟಿಯಷ್ಟು ಭಾರಿ ಕುಸಿತ ಕಂಡಿದೆ. 
ನೀತಿ ಆಯೋಗ ಬಿಡುಗಡೆಗೊಳಿಸಿರುವ ವರದಿಯಲ್ಲಿ, 2014-15ರಲ್ಲಿ ದೇಶದಲ್ಲಿ 11.07 ಲಕ್ಷವಿದ್ದ ಸರ್ಕಾರಿ ಶಾಲೆಗಳ ಸಂಖ್ಯೆ, 2024-25ರ ವೇಳೆಗೆ 10.13 ಲಕ್ಷಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಅನುದಾನಿತ ಶಾಲೆಗಳ ಸಂಖ್ಯೆಯೂ 83,000ದಿಂದ 79,000ಕ್ಕೆ ಇಳಿಕೆಯಾಗಿದೆ ಎಂದು ಉಲ್ಲೇಖಿಸಿದೆ. ಸರ್ಕಾರಿ ಶಾಲೆಗಳ ಅವನತಿಗೆ ಖಾಸಗಿ ಶಾಲೆಗಳ ಸಂಖ್ಯೆಯಲ್ಲಿ ಏರಿಕೆಯೂ ದೊಡ್ಡ ಪರಿಣಾಮ ಬೀರಿದೆ. ಕಳೆದ ದಶಕದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ 2.88 ಲಕ್ಷದಿಂದ 3.39 ಲಕ್ಷಕ್ಕೆ ಹೆಚ್ಚಾಗಿದೆ. 

ದಾಖಲಾತಿಯಲ್ಲಿ ಭಾರಿ ಕುಸಿತ

ದೇಶದ ಒಟ್ಟು ಶಾಲಾ ದಾಖಲಾತಿ ಸಂಖ್ಯೆ 26.95 ಕೋಟಿಯಿಂದ 24.69 ಕೋಟಿಗೆ ಕುಸಿದಿದೆ. ಇದು ನಿಜಕ್ಕೂ ಕಳವಳಕಾರಿ. ಸರ್ಕಾರಿ ಶಾಲೆಗಳು ತೆರೆದಿದ್ದರೂ ಪಾಠ ಕಲಿಯಲು ಮಕ್ಕಳೇ ದಾಖಲಾಗದಿದ್ದರೇ ಇನ್ನೂ ಶಾಲೆ, ಶಿಕ್ಷಕರ ಗತಿಯೇನು ಎಂಬ ಪ್ರಶ್ನೆ ಬೆಂಬಿಡದೆ ಕಾಡುತ್ತಿದೆ. ನೀತಿ ಆಯೋಗದ ಪ್ರಕಾರ, ಜನನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಶಾಲಾ ವಯಸ್ಸಿನ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎನ್ನಲಾಗಿದೆ. 
ಕೆಲವೊಂದು ಭಾಗಗಳಲ್ಲಿ ಮಕ್ಕಳು ಕಡಿಮೆಯಿರುವ ಹಿನ್ನೆಲೆ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ. ಆ ನಿಟ್ಟಿನಲ್ಲಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲೇ ಅತಿ ಹೆಚ್ಚು ಅಂದರೆ ಸುಮಾರು 40,000 ಶಾಲೆಗಳನ್ನು ವಿಲೀನಗೊಳಿಸಲಾಗಿದೆ. ಸರ್ಕಾರವು ಸಂಪನ್ಮೂಲಗಳ ಸದ್ಬಳಕೆಗಾಗಿ ಶಾಲೆಗಳನ್ನು ಒಟ್ಟುಗೂಡಿಸುತ್ತಿರುವುದಾಗಿ ಹೇಳುತ್ತಿದ್ದರೂ, ಶಿಕ್ಷಣ ಇಲಾಖೆ ಇದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದೆ. ನೆರೆಹೊರೆಯ ಶಾಲೆಗಳು ಮುಚ್ಚುವುದರಿಂದ ದೂರದ ಊರುಗಳಿಗೆ ಹೋಗಲು ಸಾಧ್ಯವಾಗದೆ, ಹಲವು ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಬಿಡುತ್ತಿದ್ದಾರೆ ಎಂದು ವಾದಿಸಿದೆ.

ಡ್ರಾಪ್‌ಔಟ್ ಸಮಸ್ಯೆ ಹೆಚ್ಚಳ

ಪ್ರಾಥಮಿಕ ಹಂತದಲ್ಲಿ ಶಾಲಾ ಶಿಕ್ಷಣ ಬಿಡುವವರ ಪ್ರಮಾಣ ಕೇವಲ ಶೇ.0.3 ರಷ್ಟಿದ್ದರೆ, ಅದು ಮುಂದಿನ ಹಂತದಲ್ಲಿ ಶೇ.3.5ರಷ್ಟು ಮತ್ತು ಪ್ರೌಢಶಾಲಾ ಹಂತದಲ್ಲಿ ಶೇ.11.5ರಷ್ಟು ಏರಿಕೆಯಾಗುತ್ತಿದೆ. ಅಲ್ಲದೆ, ಪ್ರಾಥಮಿಕದಿಂದ ಪ್ರೌಢಶಾಲೆಗೆ ಉತ್ತೀರ್ಣರಾಗುವ ಪ್ರಮಾಣವೂ ಶೇ.91.58ದಿಂದ 86.6ಕ್ಕೆ ಕುಸಿತ ಕಂಡಿದೆ. ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಈ ಪ್ರಮಾಣ ಇನ್ನು ಕಡಿಮೆಯಿದೆ. 

ಕಲಿಕೆ ಆದ್ಯತೆ ಇಲ್ಲ

ಕೇವಲ ದಾಖಲಾತಿ ಮಾತ್ರವಲ್ಲ, ಶಿಕ್ಷಣದ ಗುಣಮಟ್ಟದಲ್ಲೂ ಹಿನ್ನಡೆಯಾಗಿದೆ ಎಂದು ವರದಿ ಒತ್ತಿ ಹೇಳಿದೆ. 9ನೇ ತರಗತಿಯ ಹಲವು ವಿದ್ಯಾರ್ಥಿಗಳಿಗೆ ಬೀಜಗಣಿತ (Algebra), ರೇಖಾಗಣಿತದಂತಹ ಸುಧಾರಿತ ಗಣಿತ ಮಾತ್ರವಲ್ಲದೆ, ಕನಿಷ್ಠ ಶೇಕಡಾವಾರು ಮತ್ತು ಭಿನ್ನರಾಶಿಗಳಂತಹ ಮೂಲಭೂತ ಗಣಿತದ ಜ್ಞಾನವೂ ಇಲ್ಲದಿರುವುದು ಬೆಳಕಿಗೆ ಬಂದಿದೆ. ಮೂಲಸೌಕರ್ಯದ ಕೊರತೆ ಮತ್ತು ಗುಣಮಟ್ಟದ ಶಿಕ್ಷಣದ ಅಭಾವದಿಂದಾಗಿಯೂ ಸರ್ಕಾರಿ ಶಾಲೆಗಳತ್ತ ಪೋಷಕರು ಮತ್ತು ವಿದ್ಯಾರ್ಥಿಗಳು ತಿರುಗಿ ನೋಡುತ್ತಿಲ್ಲ. ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಬಲಪಡಿಸಲು ತುರ್ತು ಕ್ರಮಗಳ ಅಗತ್ಯವಿದೆ ಎಂಬುದಕ್ಕೆ ಈ ವರದಿ ಸ್ಪಷ್ಟ ಉದಾಹರಣೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net