ಸಾರ್ವಕಾಲಿಕ ಎತ್ತರಕ್ಕೆ ನಿಫ್ಟಿ; ಚಿನ್ನ, ಬೆಳ್ಳಿ ಬೆಲೆ ಏರಿಕೆ

ಷೇರುಪೇಟೆ, ಚಿನ್ನ-ಬೆಳ್ಳಿ ಬೆಲೆ
ಷೇರುಪೇಟೆ, ಚಿನ್ನ-ಬೆಳ್ಳಿ ಬೆಲೆ
Published on

ಪ್ರಮುಖ ಮುಖ್ಯಾಂಶಗಳು

  • ಶುಕ್ರವಾರದಂದು ಷೇರುಪೇಟೆ ಪುಟಿದೆದ್ದಿತು
  • ಚಿನ್ನ, ಬೆಳ್ಳಿ ಬೆಲೆ ಏರಿಕೆ

ಮುಂಬೈ: ವಾರದ ವಹಿವಾಟಿನ ಕೊನೆಯ ದಿನವಾದ ಶುಕ್ರವಾರ ದಂದು ಷೇರುಪೇಟೆ ಪುಟಿದೆದ್ದಿತು. ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್​ಇ) ಸೆನ್ಸೆಕ್ಸ್ 573 ಅಂಕಗಳ ಏರಿಕೆ ದಾಖಲಿಸಿ (0.67%), 85,762ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಬಿಎಸ್​ಇ) ನಿಫ್ಟಿ ಸಾರ್ವಕಾಲಿಕ ಏರಿಕೆ ದಾಖಲಿಸಿತು. 

182 ಅಂಕಗಳ ಜಿಗಿತ ಕಂಡ (0.70%) ನಿಫ್ಟಿ 26,238ಕ್ಕೆ ದಿನದ ವಹಿವಾಟು ಕೊನೆಗೊಳಿಸಿತು. ಈ ಹಿಂದೆ, 2024ರ ಸೆಪ್ಟೆಂಬರ್ 26ರಂದು ಗರಿಷ್ಠ ಮಟ್ಟವಾಗಿ 26,216 ಅಂಕಗಳಿಗೆ ತಲುಪಿತ್ತು. ಸೆನ್ಸೆಕ್ಸ್​ನ 30 ಷೇರುಗಳ ಗುಚ್ಛದಲ್ಲಿ 25 ಲಾಭ ಮಾಡಿದರೆ, ಐದು ನಷ್ಟ ಅನುಭವಿಸಿದವು. ನಿಫ್ಟಿಯಲ್ಲಿ ಕೋಲ್ ಇಂಡಿಯಾ (7.15%), ಎನ್​ಟಿಪಿಸಿ (4.56%), ಹಿಂಡಾಲ್ಕೋ (3.56%) ಉತ್ತಮ ಏರಿಕೆ ದಾಖಲಿಸಿದವು. ಐಟಿಸಿ, ಕೋಟಕ್ ಬ್ಯಾಂಕ್, ನೆಸ್ಲೆ ಇಂಡಿಯಾ ಕಂಪನಿಯ ಷೇರುಗಳು ನಷ್ಟ ಅನುಭವಿಸಿದವು. 

ಡಿ.31ರಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 3,268 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು. ಇದೇ ಸಂದರ್ಭದಲ್ಲಿ ದೇಶೀಯ ಹೂಡಿಕೆದಾರರು 1,525 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದರು. ಇಡೀ ಡಿಸೆಂಬರ್ ತಿಂಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 34,349.62 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ದೇಶೀಯ ಹೂಡಿಕೆದಾರರು 79,619.91 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಚಿನ್ನ, ಬೆಳ್ಳಿ ಬೆಲೆ ಏರಿಕೆ

ಇಲ್ಲಿಯ ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯಾಗಿದೆ. 10 ಗ್ರಾಂ ಶುದ್ಧ ಚಿನ್ನದ ದರ 1100 ರೂ. ಹೆಚ್ಚಳವಾಗಿದ್ದು, 1,39,440 ರೂ.ಗೆ ತಲುಪಿದೆ. ಗುರುವಾರ ಇದು 1,38,340 ರೂ. ಇತ್ತು. ಡಿ.31ರಂದು 1,37,700 ರೂ. ಇತ್ತು. ಕೆ.ಜಿ ಬೆಳ್ಳಿ ದರವೂ 4 ಸಾವಿರ ರೂಪಾಯಿ ಭಾರಿ ಜಿಗಿತ ಕಾಣುವ ಮೂಲಕ 2,41,400 ರೂ.ಗೆ ತಲುಪಿದೆ. ಗುರುವಾರ ಈ ಬೆಲೆ 2,37,400 ರೂ. ಹಾಗೂ ಡಿ.31ರಂದು 2,39,000 ರೂ. ಇತ್ತು ಎಂದು ಅಖಿಲ ಭಾರತ ಸರಾಫ್ ಸಂಘ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net