26 ಸಾವಿರದ ಗಡಿ ದಾಟಿದ ನಿಫ್ಟಿ

ಷೇರುಪೇಟೆ
ಷೇರುಪೇಟೆ
Published on

ಮುಂಬೈ: ದೇಶದ ಕಂಪನಿಗಳು ಸೆಪ್ಟೆಂಬರ್ ತ್ರೖೆಮಾಸಿಕದಲ್ಲಿ ಉತ್ತಮ ಗಳಿಕೆ ಕಂಡಿರುವುದು ಮತ್ತು ದೇಶೀಯ ಹೂಡಿಕೆದಾರರಿಂದ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ. ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್​ಇ) 388 ಅಂಕ ಹೆಚ್ಚಳವಾಗಿ, 84,950ಕ್ಕೆ ಸ್ಥಿರಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್​ಎಸ್​ಇ) ನಿಫ್ಟಿ 104 ಅಂಶ ಏರಿಕೆಯಾಗಿ 26,013ಕ್ಕೆ ದಿನದ ವಹಿವಾಟು ಮುಗಿಸಿತು. ಎಟರ್ನಲ್, ಮಾರುತಿ ಸುಜುಕಿ ಇಂಡಿಯಾ, ಕೋಟಕ್ ಮಹೀಂದ್ರ ಬ್ಯಾಂಕ್, ಮಹೀಂದ್ರ ಆಂಡ್ ಮಹೀಂದ್ರ, ಟೆಕ್ ಮಹೀಂದ್ರ, ಟೈಟನ್, ಎಚ್​ಡಿಎಫ್​ಸಿ ಬ್ಯಾಂಕ್, ಪವರ್​ಗ್ರಿಡ್, ಬಜಾಜ್ ಫಿನ್​ಸರ್ವ್, ಎಚ್​ಸಿಎಲ್ ಟೆಕ್ನಾಲಜೀಸ್, ಬಜಾಜ್ ಫೈನಾನ್ಸ್ ಮತ್ತು ಎಲ್ ಆಂಡ್ ಟಿ ಷೇರಿನ ಮೌಲ್ಯದಲ್ಲಿ ಏರಿಕೆ ಕಂಡುಬಂತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರದ ವಹಿವಾಟಿನಲ್ಲಿ 4,968 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ವೇಳೆ ದೇಶಿಯ ಹೂಡಿಕೆದಾರರು 8,461 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಸೋಮವಾರ ಏಷ್ಯಾದ ಮಾರುಕಟ್ಟೆಯಲ್ಲಿ ಹಾಂಗ್​ಕಾಂಗ್, ಶಾಂಘೈ, ಜಪಾನ್ ನಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿವೆ. ದಕ್ಷಿಣ ಕೊರಿಯಾ ಮಾರುಕಟ್ಟೆ ಸಕಾರಾತ್ಮಕ ವಹಿವಾಟು ಕಂಡಿತು. ಬ್ರೆಂಟ್ ಕಚ್ಚಾ ತೈಲ ಬೆಲೆಯು ಜಾಗತಿಕ ಮಾರುಕಟ್ಟೆಯಲ್ಲಿ ಶೇ.0.70ರಷ್ಟು ಇಳಿಕೆಯಾಗಿದೆ. ಪ್ರತೀ ಬ್ಯಾರೆಲ್ ದರವು 63.94 ಡಾಲರ್ ಆಗಿದೆ.

ಚಿನ್ನದ ಆಮದು ಹೆಚ್ಚಳ

ದೇಶದ ಚಿನ್ನದ ಆಮದು ಅಕ್ಟೋಬರ್ ತಿಂಗಳಿನಲ್ಲಿ ಶೇ.200ರಷ್ಟು ಹೆಚ್ಚಳವಾಗಿದ್ದು, 1.30 ಲಕ್ಷ ಕೋಟಿ ರೂ. ಗಳಷ್ಟಾಗಿದೆ. ಬೆಳ್ಳಿಯ ಆಮದು ಶೇ.528ರಷ್ಟು ಏರಿಕೆಯಾಗಿದ್ದು, 24 ಸಾವಿರ ಕೋಟಿ ರೂ. ಆಗಿದೆ ಎಂದು ಸರ್ಕಾರ ಸೋಮವಾರ ತಿಳಿಸಿದೆ. ಹಬ್ಬದ ಋತು ಹಾಗೂ ಮದುವೆ ಅಂಗವಾಗಿ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಳವಾಯಿತು. ಇದರಿಂದ ಆಮದು ಏರಿಕೆ ಯಾಗಿದೆ. 2024ರ ಅಕ್ಟೋಬರ್​ನಲ್ಲಿ 43,588 ಕೋಟಿ ರೂ. ಮೌಲ್ಯದ ಚಿನ್ನ ಆಮದಾಗಿತ್ತು.

25 ಲಕ್ಷ ಕೋಟಿ ರೂ. ಸಂಗ್ರಹದ ಗುರಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ನೇರ ತೆರಿಗೆ ಮೂಲಕ 25.20 ಲಕ್ಷ ಕೋಟಿ ರೂ. ಸಂಗ್ರಹದ ಗಆುರಿ ಹೊಂದಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ನವೆಂಬರ್ 12ರವರೆಗೆ 12.92 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.6.99ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷ ರವಿ ಅಗರ್ವಾಲ್ ಸೋಮವಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net