ಜೀರಂ ಘಾಟಿ ನರಮೇಧ ಕೇಸ್​ಗೆ 13 ವರ್ಷಗಳ ಬಳಿಕ ತೆರೆ? ಸೆ.5ಕ್ಕೆ ಎನ್‌ಐಎ ಕೋರ್ಟ್ ತೀರ್ಪು | Jhiram Ghati Case

ಜೀರಂ ಘಾಟಿ ನರಮೇಧ ಪ್ರಕರಣದಲ್ಲಿ 13 ವರ್ಷಗಳ ಬಳಿಕ ಸೆ.5ಕ್ಕೆ ತೀರ್ಪು
ಜೀರಂ ಘಾಟಿ ನರಮೇಧ ಪ್ರಕರಣದಲ್ಲಿ 13 ವರ್ಷಗಳ ಬಳಿಕ ಸೆ.5ಕ್ಕೆ ತೀರ್ಪು
Published on

ಪ್ರಮುಖ ಮುಖ್ಯಾಂಶಗಳು

  • ಸೆ.5ಕ್ಕೆ ಜೀರಂ ಘಾಟಿ ನರಮೇಧ ಪ್ರಕರಣದ ತೀರ್ಪು
  • ಸುಮಾರು 13 ವರ್ಷಗಳಿಂದ ನಡೆಯುತ್ತಿರುವ ಕೇಸ್​
  • ಪ್ರಕರಣದಲ್ಲಿ 10 ಆರೋಪಿಗಳ ವಿರುದ್ಧ ವಿಚಾರಣೆ
Jhiram ghati massacre: ಛತ್ತೀಸ್‌ಗಢದ ರಾಜಕೀಯ ಇತಿಹಾಸವನ್ನೇ ಬೆಚ್ಚಿಬೀಳಿಸಿದ್ದ ಜೀರಂ ಘಾಟಿ ನರಮೇಧ ಪ್ರಕರಣದಲ್ಲಿ ಕೊನೆಗೂ ತೀರ್ಪಿನ ದಿನಾಂಕ ಫಿಕ್ಸ್ ಆಗಿದೆ. ಸುಮಾರು 13 ವರ್ಷಗಳಿಂದ ನಡೆಯುತ್ತಿದ್ದ ಪ್ರಕರಣದಲ್ಲಿ ಸೆಪ್ಟೆಂಬರ್ 5ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ಆದೇಶದತ್ತ ದೇಶದ ಕಣ್ಣು ನೆಟ್ಟಿದೆ.
ಈ ಕೇಸ್​ನಲ್ಲಿ ಒಟ್ಟು 10 ಆರೋಪಿಗಳ ವಿರುದ್ಧ ವಿಚಾರಣೆ ನಡೆದಿದ್ದು, ಆರಂಭದಲ್ಲಿ ಪ್ರಕರಣದಲ್ಲಿ 11 ಆರೋಪಿಗಳಿದ್ದರು. ಆದರೆ ಈ ಪೈಕಿ ಓರ್ವ ಆರೋಪಿ ಮೃತಪಟ್ಟ ಹಿನ್ನೆಲೆಯಲ್ಲಿ ಇದೀಗ 10 ಆರೋಪಿಗಳ ವಿರುದ್ಧದ ವಿಚಾರಣೆ ಮುಂದುವರಿದಿತ್ತು. ವಿಶೇಷ ಎನ್‌ಐಎ ಕೋರ್ಟ್‌ನಲ್ಲಿ ವಿಚಾರಣೆ ಆಗಸ್ಟ್ 20ರಂದು ಪೂರ್ಣಗೊಂಡಿದೆ. ಈ ಹಿಂದೆ ಆಗಸ್ಟ್ 31ರಂದು ತೀರ್ಪು ನೀಡುವ ಸಾಧ್ಯತೆ ಇತ್ತು. ಇದೀಗ ಆ ದಿನಾಂಕವನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ.

2013ರಲ್ಲಿ ನಡೆದಿದ್ದೇನು?

2013ರ ಮೇ 25ರಂದು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ‘ಪರಿವರ್ತನ್ ಯಾತ್ರೆ’ ನಡೆಸುತ್ತಿತ್ತು. ಸುಕ್ಮಾದಿಂದ ಜಗದಲ್‌ಪುರದತ್ತ ಕಾಂಗ್ರೆಸ್ ನಾಯಕರಿದ್ದ ವಾಹನಗಳ ಬೆಂಗಾವಲು ಪಡೆ ಸಾಗುತ್ತಿದ್ದಾಗ, ದರ್ಭಾ-ಜೀರಂ ಘಾಟಿ ಬಳಿ ಹೊಂಚು ಹಾಕಿದ್ದ ನಕ್ಸಲರು ಏಕಾಏಕಿ ಭೀಕರ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಕಾಂಗ್ರೆಸ್‌ನ ಹಲವು ಪ್ರಮುಖ ನಾಯಕರು, ಭದ್ರತಾ ಸಿಬ್ಬಂದಿ, ನಾಗರಿಕರು ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡಿದ್ದರು.

ಘಟನೆಯಲ್ಲಿ ಪ್ರಮುಖ ನಾಯಕರ ಹತ್ಯೆ

ಜೀರಂ ಘಾಟಿ ದಾಳಿಯಲ್ಲಿ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಹತ್ಯೆಗೀಡಾಗಿದ್ದರು. ‘ಬಸ್ತರ್ ಟೈಗರ್’ ಎಂದೇ ಖ್ಯಾತರಾಗಿದ್ದ ಮಹೇಂದ್ರ ಕರ್ಮ, ಅಂದಿನ ಪ್ರದೇಶ ಕಾಂಗ್ರೆಸ್ ಸಮಿತಿ (PCC) ಅಧ್ಯಕ್ಷ ನಂದಕುಮಾರ್ ಪಟೇಲ್, ಹಿರಿಯ ನಾಯಕ ವಿದ್ಯಾಚರಣ್ ಶುಕ್ಲ ಹಾಗೂ ಉದಯ್ ಮುದಲಿಯಾರ್ ಸೇರಿದಂತೆ ಹಲವು ಪ್ರಮುಖರು ಅಸುನೀಗಿದ್ದರು. ನಕ್ಸಲರ ಈ ಭೀಕರ ದಾಳಿ ಇಡೀ ಛತ್ತೀಸ್‌ಗಢದ ರಾಜಕೀಯ ವಲಯವನ್ನೇ ಬೆಚ್ಚಿಬೀಳಿಸಿತ್ತು. ಆ ಕಾಲದ ಕಾಂಗ್ರೆಸ್‌ನ ಪ್ರಮುಖ ರಾಜಕೀಯ ನಾಯಕರ ಒಂದು ಪೀಳಿಗೆಯನ್ನೇ ಬಲಿಪಡೆದಿತ್ತು.

13 ವರ್ಷಗಳ ಬಳಿಕ ತೀರ್ಪು

ಜೀರಂ ಘಾಟಿ ದಾಳಿ ನಡೆದು ಬರೋಬ್ಬರಿ 13 ವರ್ಷಗಳಾಗಿವೆ. ಇಷ್ಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟ ಇದೀಗ ಅಂತಿಮ ಘಟ್ಟ ತಲುಪಿದೆ. ಆಗಸ್ಟ್ 20ರಂದು ವಿಚಾರಣೆ ಮುಕ್ತಾಯಗೊಂಡಿದ್ದು, ಸೆಪ್ಟೆಂಬರ್ 5ರಂದು ಜಗದಲ್‌ಪುರದ ವಿಶೇಷ NIA ಕೋರ್ಟ್ ತೀರ್ಪು ಪ್ರಕಟಿಸಲಿದೆ.
ಈ ತೀರ್ಪು ಜೀರಂ ಘಾಟಿ ದಾಳಿಯ ಪ್ರಕರಣದಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗೆ ಮಹತ್ವದ ತಿರುವು ನೀಡುವ ನಿರೀಕ್ಷೆ ಇದೆ. ಹೀಗಾಗಿ ಸೆಪ್ಟೆಂಬರ್ 5ರಂದು ಕೋರ್ಟ್ ನೀಡಲಿರುವ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net