ಆಫ್ ದಿ ರೆಕಾರ್ಡ್​ ಹೆಸರಲ್ಲಿ ಸಚಿವ-ಡಿಸಿ ನಡುವೆ ಅಫೇರ್ ಸುದ್ದಿ ಪ್ರಸಾರ: ಪ್ರಸಿದ್ದ ಸುದ್ದಿವಾಹಿನಿಯ ಮೂವರು ಪತ್ರಕರ್ತರ ಬಂಧನ | Arrested

ಬಂಧಿತ ಮೂವರು ಪತ್ರಕರ್ತರು
ಬಂಧಿತ ಮೂವರು ಪತ್ರಕರ್ತರು
Published on
ಹೈದರಾಬಾದ್​: ಆಫ್​ ದಿ ರೆಕಾರ್ಡ್ ಹೆಸರಿನಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕಚೇರಿಯ ಅಧಿಕಾರಿ ಆಡಿಯೋ ಸುದ್ದಿ ಮತ್ತು ನಲ್ಗೊಂಡ ಜಿಲ್ಲೆಯ ಸಚಿವ ಕೋಮಟಿರೆಡ್ಡಿ ಹಾಗೂ ಐಎಎಸ್​ ಅಧಿಕಾರಿಯೊಬ್ಬರ ಬಗೆಗಿನ ನಕಲಿ ಸುದ್ದಿ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿರುವ ಪ್ರಸಿದ್ದ ತೆಲುಗು ಸುದ್ದಿ ವಾಹಿನಿಯೊಂದರ ಮೂವರು ಪತ್ರಕರ್ತರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ನಕಲಿ ಸುದ್ದಿಗಳ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಕೋಮಟಿರೆಡ್ಡಿ ವೆಂಕಟರೆಡ್ಡಿ ಮತ್ತು ಮಹಿಳಾ ಐಎಎಸ್ ಅಧಿಕಾರಿ ಪರವಾಗಿ ಐಎಎಸ್ ಅಧಿಕಾರಿಗಳ ಸಂಘ ದೂರು ದಾಖಲಿಸಿದೆ. ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸರ್ಕಾರ, ಡಿಜಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಿ ತನಿಖೆಗೆ ಆದೇಶ ನೀಡಿದ್ದು, ಎರಡೂ ದಿನಗಳ ಬಳಿಕ ಪತ್ರಕರ್ತರಾದ ದೊಂತು ರಮೇಶ್, ಇನ್ಪುಟ್ ಸಂಪಾದಕ ರಮೇಶ್ ಹಾಗೂ ಹಿರಿಯ ವರದಿಗಾರ ದಾಸರಿ ಸುಧೀರ್ ಎಂಬ ಮೂವರನ್ನು ಬಂಧಿಸಲಾಗಿದೆ.
ದೋಂತು ರಮೇಶ್ ಅವರು ತಮ್ಮ ಕುಟುಂಬದೊಂದಿಗೆ ರಜೆಯ ಮೇಲೆ ಬ್ಯಾಂಕಾಕ್‌ಗೆ ಹಾರಲು ಹೊರಟಿದ್ದಾಗ ಹೈದರಾಬಾದ್ ವಿಮಾನ ನಿಲ್ದಾಣದಿಂದ ಅವರನ್ನು ಬಂಧಿಸಲಾಗಿದೆ. ಮತ್ತಿಬ್ಬರನ್ನು ಸುದ್ದಿವಾಹಿನಿಯ ಸ್ಟುಡಿಯೋಗೆ ನುಗ್ಗಿ ಬಂಧಿಸಲಾಗಿದೆ. ಮೊದಲು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಮೂವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿ ವಶಕ್ಕೆ ಪಡೆದಿದ್ದಾರೆ.

ಮಹಿಳಾ ಐಎಎಸ್ ಅಧಿಕಾರಿ ಮತ್ತು ಸಚಿವರ ನಡುವೆ ಸಂಬಂಧದ ಬಗ್ಗೆ ನಕಲಿ ಸುದ್ದಿಗೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಗಳ ಸಂಘವು ಸುದ್ದಿ ಸುಳ್ಳಿನಿಂದ ಕೂಡಿದ್ದು, ಮಹಿಳಾ ಐಎಎಸ್ ಅಧಿಕಾರಿಯ ಗೌಪ್ಯತೆಯ ಉಲ್ಲಂಘನೆ ಮತ್ತು ಅವರ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ದೂರು ದಾಖಲಿಸಿದೆ. ಈ ದೂರಿನ ಪ್ರಕಾರ ಸಿಸಿಎಸ್ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 75, 78, 79, 351(1), 352, 61(2) ಮತ್ತು 238, ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು 1986 ರ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಇನ್ನು ಮೂವರು ಪತ್ರಕರ್ತರ ಬಂಧನಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ಬಿಆರ್​​ಎಸ್, ಬಿಜೆಪಿ ನಾಯಕರು ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪತ್ರಕರ್ತರ ಬಂಧನವನ್ನು ಖಂಡಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net