ರೈಲಿನ ಬಾಗಿಲ ಬಳಿ ನಿಲ್ಲುವ ಮುನ್ನ ಎಚ್ಚರ: ಮದ್ವೆಯಾದ ಎರಡೇ ತಿಂಗಳಿಗೆ ನವದಂಪತಿ ದುರ್ಮರಣ! Newlywed Couple

ರೈಲಿನಿಂದ ಕೆಳಗೆ ಬಿದ್ದ ನವದಂಪತಿ ದುರ್ಮರಣ
ರೈಲಿನಿಂದ ಕೆಳಗೆ ಬಿದ್ದ ನವದಂಪತಿ ದುರ್ಮರಣ
Published on

ಪ್ರಮುಖ ಮುಖ್ಯಾಂಶಗಳು

  • ರೈಲಿನ ಬಾಗಿಲುಗಳಲ್ಲಿ ನಿಂತು ಪ್ರಯಾಣಿಸುವುದು ಅಪಾಯಕಾರಿ ಎಂಬುದು ನಿಮಗೆ ತಿಳಿದಿರಲಿ
  • ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಒಂದು ದುರಂತ ಘಟನೆ ತೆಲಂಗಾಣದಲ್ಲಿ ನಡೆದಿದೆ
  • ಆಕಸ್ಮಿಕವಾಗಿ ರೈಲಿನಿಂದ ಬಿದ್ದು ನವವಿವಾಹಿತ ದಂಪತಿ ದುರಂತವಾಗಿ ಸಾವಿಗೀಡಾಗಿದ್ದಾರೆ
  • ಮದುವೆಯಾಗಿ ಎರಡು ತಿಂಗಳು ಪೂರ್ಣಗೊಳ್ಳುವ ಮೊದಲೇ ಈ ಭೀಕರ ದುರಂತ ಸಂಭವಿಸಿದೆ
Newlywed Couple : ರೈಲು ಪ್ರಯಾಣ ಎಷ್ಟು ಸುರಕ್ಷಿತವೋ ರೈಲಿನ ಬಾಗಿಲುಗಳಲ್ಲಿ ನಿಂತು ಪ್ರಯಾಣಿಸುವುದು ಅಷ್ಟೇ ಅಪಾಯಕಾರಿ. ಎಷ್ಟೇ ಹೇಳಿದರೂ ಕೆಲವರು ರೈಲಿನ ಬಾಗಿಲುಗಳಲ್ಲಿ ನಿಂತು ಪ್ರಯಾಣಿಸುವುದನ್ನು ನಾವು ನೋಡಿದ್ದೇವೆ. ಆದರೆ, ಇದು ಸಾವಿನ ಜತೆ ಪ್ರಯಾಣ ಮಾಡಿದಂತೆ. ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಒಂದು ದುರಂತ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯ ವಂಗಪಲ್ಲಿ-ಅಲೇರು ರೈಲು ಮಾರ್ಗದಲ್ಲಿ ಆಕಸ್ಮಿಕವಾಗಿ ರೈಲಿನಿಂದ ಬಿದ್ದು ನವವಿವಾಹಿತ ದಂಪತಿ ಮೃತಪಟ್ಟಿದ್ದಾರೆ. ಮದುವೆಯಾಗಿ ಎರಡು ತಿಂಗಳು ಪೂರ್ಣಗೊಳ್ಳುವ ಮೊದಲೇ ಈ ಭೀಕರ ದುರಂತ ಸಂಭವಿಸಿದ್ದು, ಎರಡೂ ಕುಟುಂಬಸ್ಥರನ್ನೂ ಆಘಾತಕ್ಕೆ ದೂಡಿದೆ.
ರೈಲ್ವೆ ಪೊಲೀಸರು ನೀಡಿರುವ ವಿವರಗಳ ಪ್ರಕಾರ, ಆಂಧ್ರಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಗುರುಗುಬಿಲ್ಲಿ ಮಂಡಲದ ರಾವ್ಪಲ್ಲಿ ಗ್ರಾಮದ ಸಿಂಹಾಚಲಂ (25) ಎರಡು ತಿಂಗಳ ಹಿಂದೆ ಅದೇ ಜಿಲ್ಲೆಯ ಅಂಕಾವರಂ ಗ್ರಾಮದ ಭವಾನಿ (19) ಅವರನ್ನು ವಿವಾಹವಾದರು.
ಸಿಂಹಾಚಲಂ, ಹೈದರಾಬಾದ್‌ನ ಖಾಸಗಿ ಕೆಮಿಕಲ್​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಪತ್ನಿಯ ಜತೆ ಜಗದ್ಗಿರಿಗುಟ್ಟದ ಗಾಂಧಿನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ದಂಪತಿ, ಗುರುವಾರ ರಾತ್ರಿ ಸಿಕಂದರಾಬಾದ್‌ನಿಂದ ಮಚಲಿಪಟ್ನಂ ಎಕ್ಸ್‌ಪ್ರೆಸ್ ರೈಲಿನಲ್ಲಿ ವಿಜಯವಾಡದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೊರಟರು.
ರೈಲು ವಂಗಪಲ್ಲಿ ರೈಲು ನಿಲ್ದಾಣವನ್ನು ದಾಟಿದ ನಂತರ ಈ ದುರಂತ ಘಟನೆ ಸಂಭವಿಸಿದೆ. ರೈಲಿನ ಬಾಗಿಲಲ್ಲಿ ನಿಂತಿದ್ದಾಗ, ಇಬ್ಬರೂ ಇದ್ದಕ್ಕಿದ್ದಂತೆ ರೈಲಿನಿಂದ ಜಾರಿ, ಹಳಿಯ ಬದಿಗೆ ಬಿದ್ದರು. ಈ ವೇಳೆ ರೈಲು ಅತಿ ವೇಗದಲ್ಲಿ ಚಲಿಸುತ್ತಿದ್ದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಮಧ್ಯರಾತ್ರಿ ನಡೆದಿದ್ದರಿಂದ ಯಾರಿಗೂ ತಕ್ಷಣ ಮಾಹಿತಿ ಸಿಗಲಿಲ್ಲ.
ಶುಕ್ರವಾರ ಬೆಳಗ್ಗೆ ಕರ್ತವ್ಯದಲ್ಲಿದ್ದ ಟ್ರ್ಯಾಕ್‌ಮೆನ್, ರೈಲು ಹಳಿಗಳ ಪಕ್ಕದಲ್ಲಿ ಬಿದ್ದಿದ್ದ ಎರಡು ಶವಗಳನ್ನು ಗಮನಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಟ್ರ್ಯಾಕ್​ಮೆನ್​ ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಇದಾದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶವಗಳನ್ನು ಪರೀಕ್ಷಿಸಿ, ಗುರುತಿನ ವಿವರಗಳನ್ನು ಸಂಗ್ರಹಿಸಿದ ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಮದುವೆಯಾಗಿ ಸಂತೋಷದ ಜೀವನ ನಡೆಸಬೇಕಿದ್ದ ಮಕ್ಕಳು ಇದೀಗ ಹೆಣವಾಗಿ ಮನೆಗೆ ಮರಳಿರುವುದನ್ನು ಕಂಡು ಎರಡು ಕುಟುಂಬಗಳು ಶೋಕ ಸಾಗರದಲ್ಲಿ ಮುಳುಗಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net