ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮತ್ತೊಮ್ಮೆ ಸಿಬ್ಬಂದಿ ಕಡಿತದ ಅಲೆ ಕಾಣಿಸಿಕೊಂಡಿದೆ. ಒರಾಕಲ್, ಪೇಪಾಲ್, ಫೋಕ್ಸ್ವ್ಯಾಗನ್, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಉಬರ್ ಮಾತ್ರವಲ್ಲದೆ ಅಮೆಜಾನ್, ಮೈಕ್ರೋಸಾಫ್ಟ್, ಇಂಟೆಲ್ ಸೇರಿದಂತೆ ಹಲವು ದಿಗ್ಗಜ ಕಂಪನಿಗಳು ದೊಡ್ಡ ಪ್ರಮಾಣದ ಆಂತರಿಕ ಮರುಸಂರಚನೆ ಹಿನ್ನೆಲೆಯಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಕಡಿತ ಮಾಡಿವೆ. ಈ ವರ್ಷದ ಸೆ. 5ರ ವೇಳೆಗೆ ವಿವಿಧ ಕಂಪನಿಗಳಲ್ಲಿ 365 ಲೇಆಫ್ಗಳು ನಡೆದಿದ್ದು, 6,23,529ಕ್ಕೂ ಹೆಚ್ಚು ಜನ ಕೆಲಸ ಕಳೆದುಕೊಂಡಿದ್ದಾರೆ.
ಇದು ಎಲ್ಲ ಕಂಪನಿಗಳ ಸಂಪೂರ್ಣ ಚಿತ್ರವಲ್ಲ. ಕಂಪನಿಗಳು ಅಧಿಕೃತವಾಗಿ ಪ್ರಕಟಿಸಿರುವ ಮತ್ತು ಲೇಆಫ್ ಟ್ರ್ಯಾಕರ್ ಸಂಸ್ಥೆಗಳು ಪತ್ತೆ ಹಚ್ಚಿ ವರದಿ ಮಾಡಿರುವ ಪ್ರಮುಖ ಕಡಿತಗಳನ್ನು ಆಧರಿಸಿದ ಅಂಕಿಅಂಶ. ಹೀಗಾಗಿ ಇದನ್ನು ಜಾಗತಿಕವಾಗಿ ಕಡಿತಗೊಂಡ ಉದ್ಯೋಗಗಳ ಅಂತಿಮ ನಿಖರ ಸಂಖ್ಯೆ ಎಂದು ಪರಿಗಣಿಸಲಾಗದು. ತಂತ್ರಜ್ಞಾನ ಕ್ಷೇತ್ರವೊಂದರಲ್ಲೇ ಈ ವರ್ಷದಲ್ಲಿ ಇದುವರೆಗೆ 1.22 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಕಡಿತಗೊಂಡಿವೆ ಎಂದು ‘ಲೇಆಫ್ಸ್ ಡಾಟ್ ಎಫ್ವೈಐ’ ಸಂಸ್ಥೆ ವರದಿ ಮಾಡಿದೆ.
ಫೋಕ್ಸ್ವ್ಯಾಗನ್ನಲ್ಲಿ 50 ಸಾವಿರ!
ಜರ್ಮನಿಯ ಫೋಕ್ಸ್ ವ್ಯಾಗನ್ ಒಟ್ಟು 1 ಲಕ್ಷ ಉದ್ಯೋಗ ಕಡಿತ ಘೊಷಿಸಿದ್ದು, ಈಗಾಗಲೇ 50 ಸಾವಿರ ನೌಕರರನ್ನು ಮನೆಗೆ ಕಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಹಂತದಲ್ಲಿ ಜಾಗತಿಕವಾಗಿ ಸುಮಾರು 50 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆಗೂ ಕಂಪನಿ ಇತ್ತೀಚೆಗೆ ಅನುಮೋದನೆ ನೀಡಿದೆ. ಚೀನಾದ ಕಾರು ತಯಾರಕರ ತೀವ್ರ ಸ್ಪರ್ಧೆ, ಯುರೋಪ್ನಲ್ಲಿ ಸುಮಾರು 5 ಲಕ್ಷ ವಾಹನಗಳ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ, ಅಮೆರಿಕದ ಸುಂಕ ಮತ್ತು ವಿದ್ಯುತ್ಚಾಲಿತ ವಾಹನಗಳ ಹೆಚ್ಚಿನ ವೆಚ್ಚ ಇದಕ್ಕೆ ಪ್ರಮುಖ ಕಾರಣಗಳು. ಲಾಭ ಪ್ರಮಾಣದ ಕುಸಿತವೂ ಕಂಪನಿಯ ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ.
ಜಾಗ್ವಾರ್ ಲ್ಯಾಂಡ್ ರೋವರ್ನಲ್ಲಿ 4 ಸಾವಿರ
ಟಾಟಾ ಮೋಟಾರ್ಸ್ ಒಡೆತನದ ಜಾಗ್ವಾರ್ ಲ್ಯಾಂಡ್ ರೋವರ್ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 4 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ತಿಳಿಸಿದೆ. ಈ ಮೂಲಕ ಸುಮಾರು 1.7 ಶತಕೋಟಿ ಪೌಂಡ್ ವೆಚ್ಚ ಕಡಿಮೆ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ. ಕಂಪನಿಯ ಈ ನಿರ್ಧಾರಕ್ಕೆ ಪ್ರಮುಖ ಕಾರಣಗಳು- ಚೀನಾದ ಸ್ಪರ್ಧೆ, ಅಮೆರಿಕದ ಸುಂಕ, ಮಾರಾಟ ಪ್ರಮಾಣ ಕುಸಿತ ಇತ್ಯಾದಿ.
ಒರಾಕಲ್ನಲ್ಲಿ ಮತ್ತೆ 3 ಸಾವಿರ
ಒರಾಕಲ್ ಕಂಪನಿಯ ಜಾಗತಿಕ ಸಿಬ್ಬಂದಿ ಸಂಖ್ಯೆ 2026ರ ಹಣಕಾಸು ವರ್ಷದಲ್ಲಿ ಸುಮಾರು 21 ಸಾವಿರದಷ್ಟು (ಶೇ. 13) ಕಡಿಮೆಯಾಗಿದೆ. ಮೇ 31ಕ್ಕೆ 1.41 ಲಕ್ಷ ಸಿಬ್ಬಂದಿ ಇದ್ದರೆ, ಹಿಂದಿನ ವರ್ಷ ಇದೇ ಸಮಯದಲ್ಲಿ 1.62 ಲಕ್ಷ ಇದ್ದರು. ಎಐ ಮೂಲಸೌಕರ್ಯಕ್ಕಾಗಿ ಭಾರಿ ಹೂಡಿಕೆ ಮಾಡುತ್ತಿರುವ ಕಂಪನಿ ಮತ್ತಷ್ಟು ವೆಚ್ಚ ಕಡಿತಕ್ಕೆ ಮುಂದಾಗಬಹುದು ಎನ್ನಲಾಗುತ್ತಿದೆ. ಭಾರತದಲ್ಲೂ ಇದರ ಪರಿಣಾಮ ದೊಡ್ಡದಾಗಿದೆ. ಸುಮಾರು 10 ಸಾವಿರ ಭಾರತೀಯ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ. ಮತ್ತೊಂದು ಸುತ್ತಿನಲ್ಲಿ 3 ಸಾವಿರ ಹುದ್ದೆ ಕಡಿತ ಮಾಡುವ ಸಾಧ್ಯತೆ ಇದೆ.
ಉಬರ್ನಲ್ಲಿ 3,300
ಜಾಗತಿಕವಾಗಿ ಸುಮಾರು 3,300 ಉದ್ಯೋಗಗಳನ್ನು, ಅಂದರೆ ತನ್ನ ಸಿಬ್ಬಂದಿಯ ಶೇ. 10ರಷ್ಟನ್ನು ಕಡಿತಗೊಳಿಸಲು ಉಬರ್ ಕಂಪನಿ ಮುಂದಾಗಿದೆ. ಆದರೆ ಇದನ್ನು ನೇರವಾಗಿ ಎಐ ಕಾರಣದಿಂದಾದ ಕಡಿತ ಎಂದು ಹೇಳಲಾಗದು. ನಿರ್ವಹಣೆಯ ಹಂತಗಳನ್ನು ಕಡಿಮೆ ಮಾಡುವುದು, ತಂಡಗಳನ್ನು ವಿಲೀನಗೊಳಿಸುವುದು ಮತ್ತು ನಿರ್ಧಾರ ತೆಗೆದುಕೊಳ್ಳುವ ವೇಗ ಹೆಚ್ಚಿಸುವುದು ಪ್ರಮುಖ ಉದ್ದೇಶ. ಸ್ವಯಂಚಾಲಿತ ವಾಹನ ಮತ್ತು ರೋಬೋಟ್ಯಾಕ್ಸಿ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುವುದೂ ಇದರ ಹಿಂದಿನ ಇನ್ನೊಂದು ಉದ್ದೇಶ.
ಪೇಪಾಲ್ನಲ್ಲಿ 220
ಭಾರತದಲ್ಲಿ ಸುಮಾರು 220 ಉದ್ಯೋಗಗಳನ್ನು ಪೇಪಾಲ್ ಕಂಪನಿ ಕಡಿತಗೊಳಿಸಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಕಚೇರಿಗಳ ತಂತ್ರಜ್ಞಾನ, ಎಂಜಿನಿಯರಿಂಗ್, ಕಾರ್ಯಾಚರಣೆ, ಪಾವತಿ ಮತ್ತು ಹಣಕಾಸು ತಂಡಗಳ ಮೇಲೆ ಇದು ಪರಿಣಾಮ ಬೀರಿದೆ. ಕಂಪನಿಯ ಮರುಸಂರಚನಾ ಯೋಜನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ವೆಚ್ಚ ಕಡಿಮೆ ಮಾಡಿ ಕಾರ್ಯಾಚರಣೆಯನ್ನು ಸರಳಗೊಳಿಸುವುದು ಅದರ ಉದ್ದೇಶ.
ಇದಕ್ಕೆಲ್ಲ ಎಐ ಕಾರಣವೇ?
ಲೇಆಫ್ಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಮತ್ತು ಆಟೋಮೇಷನ್ ತಂತ್ರಜ್ಞಾನ ಒಂದು ಕಾರಣವಾದರೆ, ವೆಚ್ಚ ಕಡಿತ, ಬೇಡಿಕೆ ಕೊರತೆ, ಹೆಚ್ಚಿನ ಬಡ್ಡಿ ದರ, ಚೀನಾ ಸ್ಪರ್ಧೆ, ಅಮೆರಿಕದ ಸುಂಕ, ಹೆಚ್ಚುತ್ತಿರುವ ಮೂಲಸೌಕರ್ಯ ವೆಚ್ಚ ಮತ್ತು ಹೂಡಿಕೆದಾರರ ಲಾಭದ ಒತ್ತಡ ಮುಂತಾದ ಅಂಶಗಳೂ ಕಾರಣಗಳಾಗಿವೆ. ಇದರ ಜತೆಗೆ ‘ಕಡಿಮೆ ಸಿಬ್ಬಂದಿ, ಹೆಚ್ಚು ಉತ್ಪಾದಕತೆ’ ಎಂಬ ಹೊಸ ಪ್ರವೃತ್ತಿ ಬೆಳೆಯುತ್ತಿದೆ. ಕಂಪನಿಗಳು ಮಿಡ್ ಮ್ಯಾನೇಜರಿಯಲ್ ಹಂತಗಳನ್ನು ತೆಗೆದುಹಾಕಿ, ಕಡಿಮೆ ಸಂಖ್ಯೆಯ ಸಿಬ್ಬಂದಿಯಿಂದ ಹೆಚ್ಚಿನ ಕೆಲಸ ಮಾಡಿಸಲು ಪ್ರಯತ್ನಿಸುತ್ತಿವೆ.
ಭಾರತದ ಮೇಲೇನು ಪರಿಣಾಮ?
ಭಾರತದ ಮೇಲೆ ಎರಡು ರೀತಿಯಲ್ಲಿ ಪರಿಣಾಮವಾಗಲಿದೆ. ಮೊದಲನೆಯದು, ಜಾಗತಿಕ ಕಂಪನಿಗಳ ಭಾರತೀಯ ಕಚೇರಿಗಳಲ್ಲೇ ನೇರ ಉದ್ಯೋಗ ಕಡಿತ. ಎರಡನೆಯದು, ಅಮೆರಿಕ ಮತ್ತು ಯುರೋಪ್ನ ಕಂಪನಿಗಳು ವೆಚ್ಚ ಕಡಿಮೆ ಮಾಡಿದರೆ ಭಾರತೀಯ ಮಾಹಿತಿ ತಂತ್ರಜ್ಞಾನ ಸೇವೆಗಳ ಮೇಲೂ ಪರಿಣಾಮವಾಗುತ್ತದೆ. ಹೊಸ ಯೋಜನೆಗಳು ಮುಂದೂಡಿಕೆಯಾದರೆ ನೇಮಕಾತಿ ಕಡಿಮೆಯಾಗುತ್ತದೆ. ಆದರೆ ಇದಕ್ಕೆ ಮತ್ತೊಂದು ಆಯಾಮವೂ ಇದೆ. ತಮ್ಮ ಕಾರ್ಯಾಚರಣೆ ವೆಚ್ಚ ಕಡಿಮೆ ಮಾಡಲು ಜಾಗತಿಕ ಕಂಪನಿಗಳು ಭಾರತದಲ್ಲಿನ ಕಡಿಮೆ ವೆಚ್ಚದ ಎಂಜಿನಿಯರಿಂಗ್, ತಂತ್ರಜ್ಞಾನ ಸೇವೆ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ ಇನ್ನಷ್ಟು ಕೆಲಸವನ್ನು ವರ್ಗಾಯಿಸುವ ಸಾಧ್ಯತೆಯೂ ಇದೆ.
ಕೆಲಸ ಉಳಿಸಿಕೊಳ್ಳುವುದು ಹೇಗೆ?
ಈ ಲೇಆಫ್ ಪರ್ವ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಯಾವ ಕೆಲಸ ಬೇಕು, ಯಾವುದು ಬೇಡ, ಯಾವುದನ್ನು ಎಐ ಮಾಡಬಹುದು, ಯಾವ ದೇಶದಲ್ಲಿ ಮಾಡುವುದು ಅಗ್ಗ ಮತ್ತು ಯಾವ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಬೇಕು ಎಂಬ ಬಗ್ಗೆ ಕಂಪನಿಗಳು ಚಿಂತನೆ ಮಾಡಿ ನಿರ್ಧಾರಗಳನ್ನು ಕೈಗೊಳ್ಳುತ್ತಿವೆ. ಹೀಗಾಗಿ ಇದು ಉದ್ಯೋಗ ಕಡಿತ ಎನ್ನುವುದಕ್ಕಿಂತ, ಉದ್ಯೋಗಗಳ ಸ್ವರೂಪ ಬದಲಾವಣೆ ಎನ್ನಬಹುದು. ಎಐ ಬಳಸಬಲ್ಲ, ಹೊಸ ತಂತ್ರಜ್ಞಾನ ಕಲಿಯಬಲ್ಲ ಮತ್ತು ಹೆಚ್ಚಿನ ಮೌಲ್ಯ ಸೃಷ್ಟಿಸುವ ಕೌಶಲ ಹೊಂದಿರುವವರಿಗೆ ಬೇಡಿಕೆ ಹೆಚ್ಚುತ್ತಿದೆ. ಪುನರಾವರ್ತಿತ ಕೆಲಸಗಳು, ಆಟೋಮೇಷನ್ನಿಂದ ಮಾಡಬಹುದಾದ ಕೆಲಸಗಳು ಹೆಚ್ಚು ಅಪಾಯದಲ್ಲಿವೆ. ಅಂದರೆ, ಉದ್ಯೋಗಿಗಳು ಬದಲಾಗಬೇಕಾದ ಕಾಲ ಇದು.