

ನವದೆಹಲಿ: ರಕ್ಷಣಾ ವಲಯ, ಕಡಲ ಯಾನ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆಗಳಿಗಾಗಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅತ್ಯಾಧುನಿಕ ಸ್ಯಾಟಲೈಟ್ ಫೋನ್ ಸೇವೆ ಪ್ರಾರಂಭಿಸುತ್ತಿರುವುದಾಗಿ ಗುರುವಾರ ಪ್ರಕಟಿಸಿದೆ. ಈ ಫೋನ್ನ ಬೆಲೆಯನ್ನು ಎಲ್ಲ ತೆರಿಗೆಗಳು ಸೇರಿ 1,34,166 ರೂ.ಗೆ ನಿಗದಿಪಡಿಸಲಾಗಿದೆ.
ಸಾಮಾನ್ಯ ಮೊಬೈಲ್ ನೆಟ್ವರ್ಕ್ಗಳು ತಲುಪದ ಅತ್ಯಂತ ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ಈ ಫೋನ್ ವಾಯ್ಸ್ ಕಾಲ್ ಮತ್ತು ಎಸ್ಎಂಎಸ್ ಸೌಲಭ್ಯವನ್ನು ಒದಗಿಸಲಿದೆ. ರಕ್ಷಣೆ, ಗಣಿಗಾರಿಕೆ, ಕಡಲ ಯಾನ, ವಿಪತ್ತು ಸ್ಪಂದನಾ ತಂಡಗಳು ಮತ್ತು ಸಾಹಸ ಪ್ರವಾಸ ಕೈಗೊಳ್ಳುವವರಿಗೆ ಇದು ಅತ್ಯಂತ ಸೂಕ್ತ ಸಂವಹನ ಸಾಧನವಾಗಿದೆ.
ನಿಯಮ-ನಿಬಂಧನೆಗಳು: ಕೇಂದ್ರ ದೂರಸಂಪರ್ಕ ಇಲಾಖೆಯ ನಿರ್ದೇಶನದಂತೆ, ಸಾಮಾನ್ಯ ಮೊಬೈಲ್ ಸಂಪರ್ಕಗಳಿಗೆ ಇರುವ ಗ್ರಾಹಕರ ಪರಿಶೀಲನಾ ಪ್ರಕ್ರಿಯೆಗಳೇ ಸ್ಯಾಟಲೈಟ್ ಫೋನ್ಗಳಿಗೂ ಅನ್ವಯಿಸುತ್ತವೆ. ಗ್ರಾಹಕರು ಈ ಹ್ಯಾಂಡ್ಸೆಟ್ ಬಳಸುವ ಸ್ಥಳ, ಬಳಕೆಯ ಅವಧಿ ಮತ್ತು ಉದ್ದೇಶದ ಸಂಪೂರ್ಣ ವಿವರಗಳನ್ನು ಬಿಎಸ್ಸೆನ್ನೆಲ್ಗೆ ಲಿಖಿತವಾಗಿ ನೀಡಬೇಕಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಈ ಗ್ಲೋಬಲ್ ಸ್ಯಾಟಲೈಟ್ ಫೋನ್ ಸರ್ವಿಸ್ (ಜಿಎಸ್ಪಿಎಸ್) ಮೂಲಕ ನಡೆಯುವ ಸಂವಹನಗಳು ಸಂಪೂರ್ಣವಾಗಿ ಎನ್ಕ್ರಿಪ್ಟ್ ಮಾದರಿಯಲ್ಲಿರುತ್ತವೆ.
ಪ್ರಸ್ತುತ ಭಾರತದಲ್ಲಿ ವಾಣಿಜ್ಯಿಕವಾಗಿ ಸ್ಯಾಟಲೈಟ್ ಫೋನ್ ಹ್ಯಾಂಡ್ಸೆಟ್ ಮತ್ತು ಪೂರ್ಣ ಪ್ರಮಾಣದ ಕರೆ ಸೇವೆಯನ್ನು ಬಿಎಸ್ಸೆನ್ನೆಲ್ ಮಾತ್ರ ಇನ್ಮಾರ್ಸ್ಯಾಟ್ ಉಪಗ್ರಹ ನೆಟ್ವರ್ಕ್ ಬಳಸಿ ಒದಗಿಸುತ್ತಿದೆ. ಭಾರತದಲ್ಲಿ ಸುರಕ್ಷತಾ ಕಾರಣಗಳಿಗಾಗಿ ಸ್ಯಾಟಲೈಟ್ ಫೋನ್ ಬಳಕೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ. ಆಸಕ್ತ ಅರ್ಹ ಗ್ರಾಹಕರು ಸಮೀಪದ ಬಿಎಸ್ಸೆನ್ನೆಲ್ ಕಚೇರಿಯನ್ನು ಸಂರ್ಪಸಬಹುದು.
ಪೋಸ್ಟ್ಪೇಯ್ಡ್ ಪ್ಲಾನ್ಗಳು: ಸರ್ಕಾರಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ 3,500 ರೂ., 5,835 ರೂ. ಮತ್ತು 11,670 ರೂ. ಗಳ ಮಾಸಿಕ ಶುಲ್ಕದ ಪ್ಲಾನ್ಗಳು ಲಭ್ಯವಿದ್ದು, ಇವುಗಳಲ್ಲಿ ಕ್ರಮವಾಗಿ 16, 30 ಮತ್ತು 60 ನಿಮಿಷ ಗಳ ಉಚಿತ ಟಾಕ್ಟೈಮ್ ಸಿಗಲಿದೆ.
ಪ್ರಿಪೇಯ್ಡ್ ಪ್ಲಾನ್ಗಳು: ಸರ್ಕಾರಿ ಸಂಸ್ಥೆಗಳಿಗೆ 3,500 ರೂ. ಮಾಸಿಕ (20 ನಿಮಿಷ ಉಚಿತ) ಅಥವಾ 38,500 ರೂ. ವಾರ್ಷಿಕ ಪ್ಲಾನ್ ಲಭ್ಯವಿದೆ. ವಾಣಿಜ್ಯ ಸಂಸ್ಥೆಗಳಿಗೆ 5,835 ರೂ. ಮಾಸಿಕ (30 ನಿಮಿಷ ಉಚಿತ) ಅಥವಾ 64,185 ರೂ. ಗಳ ವಾರ್ಷಿಕ ಪ್ಲಾನ್ ಸಿಗಲಿದೆ.
ಹೆಚ್ಚುವರಿ ಶುಲ್ಕ: ಉಚಿತ ನಿಮಿಷಗಳು ಮುಗಿದ ನಂತರ ಸರ್ಕಾರಿ ಸಂಸ್ಥೆಗಳಿಗೆ ಪ್ರತಿ ನಿಮಿಷ ಅಥವಾ ಎಸ್ಎಂಎಸ್ಗೆ 18 ರೂ. ಹಾಗೂ ವಾಣಿಜ್ಯ ಸಂಸ್ಥೆಗಳಿಗೆ 25 ರೂ. ಶುಲ್ಕ ಅನ್ವಯಿಸುತ್ತದೆ. ಪ್ರಿಪೇಯ್ಡ್ ಗ್ರಾಹಕರಿಗೆ 200 ರೂ.ನಿಂದ 10,000 ರೂ.ವರೆಗಿನ ಟಾಪ್ಅಪ್ ರೀಚಾರ್ಜ್ಗಳು ಲಭ್ಯವಿವೆ.