

ಗ್ರಾಹಕರು ಅಂಗಡಿಗಳಲ್ಲಿ ಡಿಜಿಟಲ್ ಮಾದರಿಯಲ್ಲಿ ಹಣ ಪಾವತಿಸಿದಾಗ, ಆ ಸೇವೆಯನ್ನು ಒದಗಿಸಿದ ಬ್ಯಾಂಕ್ಗೆ ಮತ್ತು ಫೋನ್ಪೇ, ಗೂಗಲ್ ಪೇಯಂಥ ಪೇಮೆಂಟ್ ಆಪ್ಗಳಿಗೆ ವ್ಯಾಪಾರಸ್ಥರು ನೀಡಬೇಕಾದ ಸೇವಾ ಶುಲ್ಕವೇ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್). ಇದುವರೆಗೆ ಯುಪಿಐ ವಹಿವಾಟುಗಳಿಗೆ ಶೂನ್ಯ ಎಂಡಿಆರ್ ನಿಯಮವಿತ್ತು.
ಸಾಮಾನ್ಯ ಗ್ರಾಹಕರು: ವ್ಯಕ್ತಿಯಿಂದ ವ್ಯಕ್ತಿಗೆ (ಪಿ2ಪಿ) ಕಳುಹಿಸುವ ಹಣ ಅಥವಾ ಮನೆ ಬಾಡಿಗೆ ಯಂತಹ ಸಾಮಾನ್ಯ ಪಾವತಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಗ್ರಾಹಕರ ಮೇಲೆ ನೇರ ಶುಲ್ಕವಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದ ಹಿಂದೆ ವಿದೇಶಿ ಹಿತಾಸಕ್ತಿಗಳ ಒತ್ತಡವಿದೆ ಎಂಬ ಚರ್ಚೆಯೂ ಜೋರಾಗಿದೆ. ಅಮೆರಿಕ ಮೂಲದ ವೀಸಾ, ಮಾಸ್ಟರ್ಕಾರ್ಡ್ನಂತಹ ಕ್ರೆಡಿಟ್ ಕಾರ್ಡ್ ದೈತ್ಯ ಕಂಪನಿಗಳು ಭಾರತದ ‘ಶೂನ್ಯ ಶುಲ್ಕ’ದ ಯುಪಿಐ ನೀತಿಯಿಂದಾಗಿ ಭಾರಿ ಮಾರುಕಟ್ಟೆ ನಷ್ಟ ಅನುಭವಿಸುತ್ತಿವೆ. ಉಚಿತ ಯುಪಿಐ ಸೌಲಭ್ಯದಿಂದಾಗಿ ಕ್ರೆಡಿಟ್/ಡೆಬಿಟ್ ಕಾರ್ಡ್ಗಳ ಬಳಕೆ ಕಡಿಮೆಯಾಗಿದೆ. ಈ ಬಗ್ಗೆ ಅಮೆರಿಕ ಸರ್ಕಾರ ಮತ್ತು ಈ ಕಂಪನಿಗಳು ಜಾಗತಿಕ ವೇದಿಕೆಗಳಲ್ಲಿ ಕಳವಳ ವ್ಯಕ್ತಪಡಿಸಿದ್ದವು. ಭಾರತದಲ್ಲಿ ಯುಪಿಐ ಮೇಲೆಯೂ ಶುಲ್ಕ ವಿಧಿಸುವುದರಿಂದ ತಮ್ಮ ಕಾರ್ಡ್ಗಳಿಗೆ ಸ್ಪರ್ಧಾತ್ಮಕ ವಾತಾವರಣ ನಿರ್ವಣವಾಗುತ್ತದೆ ಎಂಬುದು ಅವರ ನಿರೀಕ್ಷೆ. ಹೀಗಾಗಿ, ಯುಪಿಐ ಶುಲ್ಕದ ಹಿಂದೆ ಅಂತಾರಾಷ್ಟ್ರೀಯ ಲಾಬಿಯ ಕೈವಾಡವಿದೆ ಎಂಬ ವಾದವನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ.
ಗ್ರಾಹಕರಿಗೆ ಯುಪಿಐ ಉಚಿತ ಎಂದು ಸರ್ಕಾರ ಹೇಳಿದ್ದರೂ, ಮಾರುಕಟ್ಟೆಯ ವಾಸ್ತವವೇ ಬೇರೆ ಇರುತ್ತದೆ. ದೊಡ್ಡ ಉದ್ಯಮಗಳು ತಮಗಾಗುವ ಈ 0.25%ರಿಂದ 0.5%ವರೆಗಿನ ಎಂಡಿಆರ್ ವೆಚ್ಚವನ್ನು ಪರೋಕ್ಷವಾಗಿ ಸರಕು-ಸೇವೆಗಳ ಬೆಲೆ ಹೆಚ್ಚಿಸುವ ಮೂಲಕ ಅಥವಾ ಪ್ರೋಮೋ ಕೋಡ್, ಡಿಸ್ಕೌಂಟ್ ಕಡಿತಗೊಳಿಸುವ ಮೂಲಕ ಗ್ರಾಹಕರ ಮೇಲೆಯೇ ವರ್ಗಾಯಿಸುತ್ತವೆ. ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಈ ಹೊರೆ ಗ್ರಾಹಕನ ಮೇಲೇ ಬೀಳುತ್ತದೆ ಎನ್ನುವುದು ಹಲವರ ವಾದ.