

ಡಿಜಿಟಲ್ ಬಂಧನದ ಪ್ರಕರಣಗಳಿಂದ ಜನರು ಹಣವಷ್ಟೇ ಕಳೆದುಕೊಂಡಿಲ್ಲ, ನೆಮ್ಮದಿಯನ್ನೂ ಕಳೆದುಕೊಂಡು ಖಿನ್ನತೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಡಿಜಿಟಲ್ ಬಂಧನದ ಹೆಚ್ಚು ಪ್ರಕರಣಗಳು ಬಿಹಾರ ಮತ್ತು ಕರ್ನಾಟಕದಲ್ಲಿ ದಾಖಲಾಗಿವೆ. ಹೆಚ್ಚಾಗಿ ಹಿರಿಯ ನಾಗರಿಕರನ್ನು ಗುರಿಯಾಗಿಸಲಾಗುತ್ತಿದೆ. 78%ರಿಂದ 82% ಸಂತ್ರಸ್ತರು 60 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಹೊರದೇಶಗಳಿಂದಲೂ ಈ ಜಾಲಗಳು ಕಾರ್ಯನಿರ್ವಹಿಸುತ್ತಿದ್ದು, ಡಿಜಿಟಲ್ ಯುಗದ ಈ ನವಪಿಡುಗಿನ ವಿರುದ್ಧ ಈಗ ಪರಿಣಾಮಕಾರಿ ಹೋರಾಟ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಕೇಂದ್ರ ಸರ್ಕಾರ ಹೊಸ ಕಾನೂನು ತರಲು ಸಿದ್ಧತೆ ನಡೆಸಿದ್ದು, ಈ ಕುರಿತಾದ ವಿವರ ಇಲ್ಲಿದೆ.
ಡಿಜಿಟಲ್ ಅರೆಸ್ಟ್ ಅನ್ನು ಪ್ರತ್ಯೇಕ ಅಪರಾಧವೆಂದು ಪರಿಗಣಿಸಿ ಕಠಿಣ ಶಿಕ್ಷೆ ನಿಗದಿಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಡಿಜಿಟಲ್ ಅರೆಸ್ಟ್ ಮತ್ತು ಡೀಪ್ಫೇಕ್ ತಡೆಗೆ ಸಂಬಂಧಿಸಿದಂತೆ ಕರಡು ಕಾಯ್ದೆ ಸಿದ್ಧಗೊಳ್ಳುತ್ತಿದ್ದು, ಪ್ರಸ್ತುತ ಸಂಸತ್ ಅಧಿವೇಶನದಲ್ಲೇ ಮಂಡನೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಗೃಹ ಸಚಿವಾಲಯ ಜಂಟಿಯಾಗಿ ಪ್ರತ್ಯೇಕ ಕರಡು ಮಸೂದೆಯನ್ನು ಸಿದ್ಧಪಡಿಸುತ್ತಿದ್ದು, ಪ್ರಸಕ್ತ ಸಂಸತ್ ಅಧಿವೇಶನದಲ್ಲೇ ಮಂಡಿಸಲು ತಯಾರಿ ನಡೆಸಿವೆ.
ಅಲ್ಲದೆ, ಡಿಜಿಟಲ್ ಅರೆಸ್ಟ್ನಲ್ಲಿ ತೊಡಗಿರುವ ಅಂತಾರಾಷ್ಟ್ರೀಯ ಮತ್ತು ದೇಶೀಯ ಸಿಂಡಿಕೇಟ್ಗಳ ಜಾಲವನ್ನು ಗುರಿಯಾಗಿಸಿಕೊಂಡು ಇಂಡಿಯನ್ ಸೈಬರ್ ಕ್ರೖೆಮ್ ಕೋಆರ್ಡಿನೇಷನ್ ಸೆಂಟರ್ ಮೂಲಕ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಮಾತ್ರವಲ್ಲ, ವಿದೇಶಗಳಿಂದ ಬರುವ ಕರೆಯನ್ನು ಭಾರತೀಯ ಮೂಲದ ಸಂಖ್ಯೆಗಳಂತೆ ತೋರಿಸಿ ವಂಚಿಸುವ ವ್ಯವಸ್ಥೆಯನ್ನು ತಡೆಯಲು ಟೆಲಿಕಾಂ ಆಪರೇಟರ್ಗಳ ಸಹಯೋಗದೊಂದಿಗೆ ನೂತನ ಕಾಲರ್ ಐಡೆಂಟಿಫಿಕೇಶನ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.
ಕಳೆದ 6 ವರ್ಷಗಳಲ್ಲಿ ಸೈಬರ್ ವಂಚನೆಯಿಂದ 52,976 ಕೋಟಿ ರೂ. ನಷ್ಟ ಸಂಭವಿಸಿದ್ದು, ಅದರಲ್ಲಿ 4,238 ಕೋಟಿ ರೂ. ಹಣವನ್ನು ಡಿಜಿಟಲ್ ಅರೆಸ್ಟ್ ಮೂಲಕ ದೋಚಲಾಗಿದೆ. ಹೊಸ ಕಾನೂನು ಬಂದಲ್ಲಿ ಅಪರಾಧದ ನಿರ್ದಿಷ್ಟ ವ್ಯಾಖ್ಯಾನ, ನಿಗದಿತ ಶಿಕ್ಷೆ ಹಾಗೂ ದೇಶಾದ್ಯಂತ ಏಕರೂಪದ ಕಾನೂನು ಕ್ರಮಕ್ಕೆ ಬಲವಾದ ತಳಹದಿ ಸಿಗಲಿದೆ. ನಕಲಿ ಕರೆ ಮಾಡುವವರು, ನಕಲಿ ದಾಖಲೆ ಅಥವಾ ಡೀಪ್ಫೇಕ್ ವಿಡಿಯೋ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
ವಿಶಿಷ್ಟ ಅಪರಾಧವಾಗಿ ವರ್ಗೀಕರಣ: ಪ್ರಸ್ತುತ ಸಾಮಾನ್ಯ ವಂಚನೆ ಅಥವಾ ಬೆದರಿಕೆ ಕಾಯ್ದೆಯಡಿ ಬರುವ ಡಿಜಿಟಲ್ ಅರೆಸ್ಟ್ ಹಾಗೂ ಡೀಪ್ಫೇಕ್ ಕೃತ್ಯಗಳನ್ನು ಪ್ರತ್ಯೇಕ ಮತ್ತು ಸಂಘಟಿತ ಅಪರಾಧ ಎಂದು ಕಾನೂನಿನಲ್ಲಿ ನಿರೂಪಿಸಲಾಗುತ್ತದೆ.
ಜಾಮೀನು ರಹಿತ ಕಠಿಣ ಶಿಕ್ಷೆ: ಈ ಅಪರಾಧಗಳಿಗೆ ಯಾವುದೇ ಸಡಿಲಿಕೆಯಿಲ್ಲದಂತೆ ದೀರ್ಘಾವಧಿಯ ಜೈಲು ಶಿಕ್ಷೆ ಹಾಗೂ ಭಾರಿ ಮೊತ್ತದ ದಂಡವನ್ನು ನಿಗದಿಪಡಿಸುವ ಪ್ರಸ್ತಾಪವಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಅಸಾಧಾರಣ ಆಧಾರಗಳಿಲ್ಲದೆ ಆರೋಪಿ ಗಳಿಗೆ ಜಾಮೀನು ನೀಡದಿರಲು ಕಾನೂನು ಚೌಕಟ್ಟು ರಚಿಸಲಾಗುತ್ತಿದೆ.
ಎಐ ದುರ್ಬಳಕೆ ತಡೆಗೆ ನಿಯಮ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಗಣ್ಯರ, ಪೊಲೀಸ್ ಅಧಿಕಾರಿಗಳ ಅಥವಾ ನ್ಯಾಯಾಧೀಶರ ಮುಖ ಮತ್ತು ಧ್ವನಿಯನ್ನು ಅನುಕರಿಸಿ ವಂಚಿಸಿದರೆ ಕಠಿಣ ಜೈಲು ಶಿಕ್ಷೆ ಮತ್ತು ಸಾಕ್ಷ್ಯ ಕಾಯ್ದೆಯಡಿ ಪ್ರತ್ಯೇಕ ತನಿಖಾ ನಿಯಮ ಜಾರಿಯಾಗಲಿದೆ.
ಸಾಮಾಜಿಕ ಜಾಲತಾಣಗಳ ಹೊಣೆಗಾರಿಕೆ: ಯಾವುದೇ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ಡೀಪ್ಫೇಕ್ ವಿಷಯಗಳು ಅಥವಾ ಡಿಜಿಟಲ್ ಅರೆಸ್ಟ್ ಕರೆ ಜಾಲಗಳು ಸಕ್ರಿಯವಾಗಿದ್ದರೆ, ಸೂಚನೆ ಬಂದ ಕೆಲವೇ ಗಂಟೆಗಳಲ್ಲಿ ಅವುಗಳನ್ನು ತೆರವುಗೊಳಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ.
ಏಕರೂಪದ ತನಿಖೆ: ದೇಶದ ಯಾವುದೇ ರಾಜ್ಯದಲ್ಲಾದರೂ ಡಿಜಿಟಲ್ ಅರೆಸ್ಟ್ ಪ್ರಕರಣ ದಾಖಲಾದರೆ, ದೇಶಾದ್ಯಂತ ಒಂದೇ ಮಾದರಿಯ ಕಠಿಣ ಕಾನೂನು ಪ್ರಕ್ರಿಯೆ ಜಾರಿಯಾಗುವುದರಿಂದ ತನಿಖೆಗೆ ವೇಗ ಸಿಗಲಿದೆ.
ವಂಚಕರ ಜಾಲಕ್ಕೆ ನಡುಕ: ಕರೆ ಮಾಡಿದವರಷ್ಟೇ ಅಲ್ಲದೆ, ನಕಲಿ ನೋಟಿಸ್ ಸೃಷ್ಟಿಸಿದವರು, ವಂಚನೆಗೆ ಬ್ಯಾಂಕ್ ಖಾತೆ ಒದಗಿಸಿದವರು ಹಾಗೂ ಡೀಪ್ಫೇಕ್ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದವರೂ ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾರೆ.
ಹಣ ಮರಳಿಸುವ ಪ್ರಮಾಣ ಹೆಚ್ಚಳ: ಕಾಯ್ದೆಯಡಿ ಬ್ಯಾಂಕ್ಗಳು ಮತ್ತು ತನಿಖಾ ಸಂಸ್ಥೆಗಳ ನಡುವೆ ನೇರ ಸಂಪರ್ಕ ಸಾಧಿಸುವುದರಿಂದ, ಬಾಧಿತರ ಖಾತೆಯಿಂದ ಹೋದ ಹಣವನ್ನು ತಕ್ಷಣ ಫ್ರೀಜ್ ಮಾಡಿ ಮರಳಿ ಪಡೆಯುವ ಸಾಧ್ಯತೆ ಹೆಚ್ಚುತ್ತದೆ.
ಸೈಬರ್ ಗಡಿ ದಾಟಿದ ಅಪರಾಧಿಗಳು: ಹೆಚ್ಚಿನ ಡಿಜಿಟಲ್ ಅರೆಸ್ಟ್ ಜಾಲಗಳು ವಿದೇಶಗಳಿಂದ (ಆಗ್ನೇಯ ಏಷ್ಯಾ ದೇಶಗಳಿಂದ) ಕಾರ್ಯಾಚರಿಸುತ್ತಿರುವುದರಿಂದ, ಹೊಸ ಕಾನೂನನ್ನು ವಿದೇಶಿ ಅಪರಾಧಿಗಳ ವಿರುದ್ಧ ಜಾರಿಗೆ ತರುವುದು ಮತ್ತು ಅವರನ್ನು ಗಡಿಪಾರು ಮಾಡುವುದು ದೊಡ್ಡ ಸವಾಲಾಗಿ ಉಳಿಯಲಿದೆ.
ತಂತ್ರಜ್ಞಾನದ ವೇಗ: ಡೀಪ್ಫೇಕ್ ಮತ್ತು ಎಐ ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿರುವುದರಿಂದ, ಕಾನೂನು ಕೂಡ ಕಾಲಕಾಲಕ್ಕೆ ತಾಂತ್ರಿಕವಾಗಿ ನವೀಕರಣಗೊಳ್ಳಬೇಕಾಗುತ್ತದೆ.
ಪ್ರಕರಣದ ಗಂಭೀರತೆಗೆ ಅನುಗುಣವಾಗಿ ವಂಚನೆ, ಸರ್ಕಾರಿ ಅಧಿಕಾರಿಯಂತೆ ನಟಿಸುವುದು, ಬೆದರಿಕೆ ಹಾಗೂ ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗುತ್ತಿದೆ. ಜೊತೆಗೆ, ಗುರುತು ಕಳುವು ಮತ್ತು ಕಂಪ್ಯೂಟರ್ ಮೂಲದ ವಂಚನೆಗಾಗಿ ಐಟಿ ಕಾಯ್ದೆಯ ಸೆಕ್ಷನ್ 66ಇ ಮತ್ತು 66ಈ ಅಡಿಯಲ್ಲಿಯೂ ಕೇಸು ದಾಖಲಿಸಲಾಗುತ್ತಿದೆ.
ವಂಚಕರು ಪೊಲೀಸ್, ಸಿಬಿಐ, ಇಡಿ, ತೆರಿಗೆ ಇಲಾಖೆ ಅಥವಾ ನ್ಯಾಯಾಲಯದ ಅಧಿಕಾರಿಗಳಂತೆ ನಟಿಸಿ ವಿಡಿಯೋ ಕರೆ ಮಾಡುತ್ತಾರೆ. ಕರೆಯಲ್ಲಿ ಗಂಭೀರ ಆರೋಪಗಳ ಬೆದರಿಕೆಯೊಡ್ಡಿ, ವ್ಯಕ್ತಿಯನ್ನು ಕ್ಯಾಮರಾ ಮುಂಭಾಗದಲ್ಲೇ ಬಂಧಿಸಿಟ್ಟಂತೆ ಭಯ ಹುಟ್ಟಿಸಿ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಾರೆ.
ಗುಜರಾತ್ ಸರ್ಕಾರವು ಇ-ಜೀರೋ ಎಫ್ಐಆರ್ ಸೇವೆಯನ್ನು ಆರಂಭಿಸಿದೆ. ಇದರೊಂದಿಗೆ ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಬರ್ ಹಣಕಾಸು ವಂಚನೆಯ ದೂರುಗಳು ಈಗ ಸ್ವಯಂಚಾಲಿತವಾಗಿ ಎಫ್ಐಆರ್ ಆಗಿ ಪರಿವರ್ತನೆಗೊಳ್ಳಲಿವೆ.
ಇದು ಸೈಬರ್ ಹಣಕಾಸು ವಂಚನೆಗೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ದಾಖಲಾಗುವ ಆರಂಭಿಕ ಎಫ್ಐಆರ್ ಆಗಿದೆ. ಘಟನೆಯು ಯಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎಂಬುದು ನಿಗದಿಯಾಗದಿದ್ದರೂ ಇದನ್ನು ದಾಖಲಿಸಬಹುದು.
ವಂಚನೆಗೊಳಗಾದ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ನಲ್ಲಿ ದೂರು ನೀಡಬೇಕು. ಅರ್ಹ ದೂರುಗಳು ಸಿಸ್ಟಮ್ ಮೂಲಕ ರಾಜ್ಯದ ಇ-ಕ್ರೖೆಮ್ ಪೊಲೀಸ್ ಠಾಣೆಯಲ್ಲಿ ಇ-ಜೀರೋ ಎಫ್ಐಆರ್ ಆಗಿ ಬದಲಾಗುತ್ತವೆ.
ಪ್ರತಿಯೊಂದು ದೂರು ಸ್ವಯಂಚಾಲಿತವಾಗಿ ಎಫ್ಐಆರ್ ಆಗಿ ದಾಖಲಾಗುತ್ತದೆಯೇ?
-ಇಲ್ಲ. ಎಷ್ಟು ಮೊತ್ತದ ವಂಚನೆಗೆ ಸ್ವಯಂಚಾಲಿತ ಎಫ್ಐಆರ್ ದಾಖಲಾಗಬೇಕು ಎಂಬುದರ ಮಿತಿಯನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವತಂತ್ರವಾಗಿ ನಿರ್ಧರಿಸುತ್ತವೆ.
ಎಫ್ಐಆರ್ ದಾಖಲಾದ ನಂತರ ಏನಾಗುತ್ತದೆ?
-ದಾಖಲಾದ ಇ-ಜೀರೋ ಎಫ್ಐಆರ್ ಅನ್ನು ಸಂಬಂಧಪಟ್ಟ ಪ್ರದೇಶದ ಸೈಬರ್ ಠಾಣೆಗೆ ಕಳುಹಿಸಲಾಗುತ್ತದೆ ಮತ್ತು ಪೊಲೀಸರು ಸಂತ್ರಸ್ತರನ್ನು ಸಂರ್ಪಸುತ್ತಾರೆ. ದೂರುದಾರರು 3 ದಿನಗಳ ಒಳಗಾಗಿ ಪೊಲೀಸ್ ಠಾಣೆಗೆ ತೆರಳಿ ಅದನ್ನು ಸಾಮಾನ್ಯ (ನಿಯಮಿತ) ಎಫ್ಐಆರ್ ಆಗಿ ಪರಿವರ್ತಿಸಬೇಕಾಗುತ್ತದೆ.
-ಆರಂಭದಲ್ಲಿ ಎಫ್ಐಆರ್ ದಾಖಲಿಸಲು ಪೊಲೀಸ್ ಠಾಣೆ ಅಲೆಯುವ ಅಗತ್ಯವಿರುವುದಿಲ್ಲ. ಪೊಲೀಸರು, ಬ್ಯಾಂಕ್ಗಳು ಮತ್ತು ಪಾವತಿ ಸಂಸ್ಥೆಗಳು ತಕ್ಷಣವೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದರಿಂದ, ಕಳೆದುಕೊಂಡ ಹಣವನ್ನು ಫ್ರೀಜ್ ಮಾಡಲು ಅಥವಾ ಮರುಪಡೆಯಲು ಹೆಚ್ಚಿನ ಅವಕಾಶ ಸಿಗುತ್ತದೆ.
-ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಚಂಡೀಗಢ, ಗೋವಾ, ಅಸ್ಸಾಂ, ಉತ್ತರಾಖಂಡ, ಪಶ್ಚಿಮ ಬಂಗಾಳ, ಒಡಿಶಾ, ಹರಿಯಾಣ, ಗುಜರಾತ್, ತ್ರಿಪುರಾ, ಮಹಾರಾಷ್ಟ್ರ, ಜಮ್ಮು-ಕಾಶ್ಮೀರ, ತಮಿಳುನಾಡು, ತೆಲಂಗಾಣ, ಬಿಹಾರ ಮತ್ತು ಅಂಡಮಾನ್-ನಿಕೋಬಾರ್ಗಳಲ್ಲಿ ಇದು ಜಾರಿಯಲ್ಲಿದೆ. ಈ ಪ್ರದೇಶಗಳಲ್ಲಿ ಇದುವರೆಗೆ 12,257 ಇ-ಜೀರೋ ಎಫ್ಐಆರ್ಗಳು ದಾಖಲಾಗಿವೆ.