ಜಿ7 ವೇದಿಕೆಯಲ್ಲಿ ಭಾರತ-ಅಮೆರಿಕ ಸ್ನೇಹದ ಹೊಸ ಅಧ್ಯಾಯ?ಏನೆಲ್ಲ ಚರ್ಚೆ? | G7 Summit
G7 Summit
Published on:
Copied
Follow Us
ಪ್ಯಾರಿಸ್: ಜಿ7 ಶೃಂಗಸಭೆಯ(G7 Summit) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ, ರಕ್ಷಣಾ ಸಹಕಾರ, ಇಂಧನ ಭದ್ರತೆ ಹಾಗೂ ಜಾಗತಿಕ ಬೆಳವಣಿಗೆಗಳು ಈ ಸಭೆಯ ಪ್ರಮುಖ ವಿಷಯಗಳಾಗಿವೆ.
ಫ್ರಾನ್ಸ್‌ನ ಎವಿಯನ್-ಲೆ-ಬೈನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಮೋದಿ ಮತ್ತು ಟ್ರಂಪ್ ಮಂಗಳವಾರ ಭೇಟಿಯಾಗಿ ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದ್ದರು. ಕಳೆದ 16 ತಿಂಗಳ ಬಳಿಕ ಇಬ್ಬರು ನಾಯಕರು ಮುಖಾಮುಖಿಯಾಗಿ ಭೇಟಿಯಾಗಿರುವುದು ವಿಶೇಷವಾಗಿದೆ. ಇದಕ್ಕೂ ಮುನ್ನ 2025ರ ಫೆಬ್ರವರಿಯಲ್ಲಿ ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಇಬ್ಬರೂ ಭೇಟಿಯಾಗಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಅಮೆರಿಕದ ಸಂಬಂಧದಲ್ಲಿ ಕೆಲವು ಸವಾಲುಗಳು ಎದುರಾಗಿದ್ದವು. ಭಾರತಕ್ಕೆ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿದ್ದು, ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ತಾನು ಪಾತ್ರ ವಹಿಸಿದ್ದೇನೆ ಎಂದು ಟ್ರಂಪ್ ಹಲವು ಬಾರಿ ಹೇಳಿಕೆ ನೀಡಿದ್ದರು. ಆದರೆ ಭಾರತ ಈ ಹೇಳಿಕೆಯನ್ನು ನಿರಾಕರಿಸಿತ್ತು.
ಇದರ ಜೊತೆಗೆ ಅಮೆರಿಕದ ಹೊಸ ವಲಸೆ ನೀತಿ ಹಾಗೂ H-1B ವೀಸಾ ಶುಲ್ಕ ಹೆಚ್ಚಳವೂ ಭಾರತದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೂ ಎರಡೂ ರಾಷ್ಟ್ರಗಳು ಸಂಬಂಧ ಸುಧಾರಿಸಲು ಪ್ರಯತ್ನ ಮುಂದುವರಿಸಿವೆ. ಪರಸ್ಪರ ಲಾಭದಾಯಕ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆಗಳು ವೇಗ ಪಡೆದಿವೆ.
ಕಳೆದ ವಾರ ಮತ್ತೊಂದು ಬೆಳವಣಿಗೆ ಸಂಬಂಧಗಳ ಮೇಲೆ ಪರಿಣಾಮ ಬೀರಿತ್ತು. ಓಮನ್ ಕರಾವಳಿ ಸಮೀಪ ಅಮೆರಿಕದ ಸೇನಾ ಕಾರ್ಯಾಚರಣೆಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮೂರು ವಾಣಿಜ್ಯ ಹಡಗುಗಳು ಗುರಿಯಾಗಿದ್ದು, ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರು. ಈ ಘಟನೆಯ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಜಿ7 ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಮುದ್ರ ಮಾರ್ಗಗಳ ಸುರಕ್ಷತೆ ಬಹಳ ಮುಖ್ಯ ಎಂದು ಒತ್ತಿ ಹೇಳಿದ್ದಾರೆ. ನಾವಿಕರು ಯಾವುದೇ ಭಯವಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸುವಂತ ವಾತಾವರಣ ಇರಬೇಕು ಎಂದು ಅವರು ತಿಳಿಸಿದ್ದಾರೆ.
ಬುಧವಾರದ ಮೋದಿ-ಟ್ರಂಪ್ ಸಭೆಯಲ್ಲಿ ಉಭಯ ದೇಶಗಳ ವ್ಯಾಪಾರ ಮಾತುಕತೆಗಳ ಪ್ರಗತಿ, ರಕ್ಷಣಾ ಸಹಕಾರ ಹೆಚ್ಚಿಸುವ ಕ್ರಮಗಳು ಹಾಗೂ ಇಂಧನ ಭದ್ರತೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಜೊತೆಗೆ ಪಶ್ಚಿಮ ಏಷ್ಯಾದ ಪರಿಸ್ಥಿತಿ, ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಚರ್ಚೆಯಾಗಲಿದೆ.
ಸ್ಲೋವಾಕಿಯಾ ಪ್ರವಾಸ ಮುಗಿಸಿ ಮೋದಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಫ್ರಾನ್ಸ್‌ಗೆ ಆಗಮಿಸಿದ್ದಾರೆ. ಭಾರತ ಜಿ7 ಸದಸ್ಯ ರಾಷ್ಟ್ರವಲ್ಲದಿದ್ದರೂ ವಿಶೇಷ ಆಹ್ವಾನಿತ ರಾಷ್ಟ್ರವಾಗಿ ಸಭೆಯಲ್ಲಿ ಭಾಗವಹಿಸುತ್ತಿದೆ.
ಜಿ7 ಗುಂಪಿನಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಸೇರಿವೆ. ಜಾಗತಿಕ ಆರ್ಥಿಕತೆ, ಭದ್ರತೆ ಹಾಗೂ ಪ್ರಮುಖ ಅಂತಾರಾಷ್ಟ್ರೀಯ ಸವಾಲುಗಳ ಕುರಿತು ಚರ್ಚೆ ನಡೆಸುವ ಪ್ರಮುಖ ವೇದಿಕೆಯಾಗಿ ಜಿ7 ಗುರುತಿಸಿಕೊಂಡಿದೆ,(ಏಜೆನ್ಸೀಸ್).