ಕ್ರಿಕೆಟ್ ಇತಿಹಾಸದಲ್ಲೇ ಇಂಥಾ ಗಿಫ್ಟ್ ಕೊಟ್ಟಿಲ್ಲ; ಮ್ಯಾನ್ ಆಫ್ ದಿ ಮ್ಯಾಚ್ ಬಹುಮಾನವಾಗಿ ಜೀವಂತ ಕೋಳಿ ಪಡೆದ ಆಟಗಾರ! Cricket
ಟ್ರೋಫಿ ಬದಲು ಕೋಳಿ ಹಿಡಿದಿರುವ ಆಟಗಾರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಕ್ರೀಡೆಯಲ್ಲ
ಪಂದ್ರ ಶ್ರೇಷ್ಠ ಆಟಗಾರನಿಗೆ ಕೋಳಿ ಕೊಟ್ಟ ಆಯೋಜಕರು
ದೊಡ್ಡ ದೊಡ್ಡ ಸ್ಟೇಡಿಯಂಗಳಲ್ಲಿ ಸಿಗದ ಮಜಾ ನಮ್ಮ ಹಳ್ಳಿ ಕ್ರಿಕೆಟ್‌ನಲ್ಲಿ ಸಿಗುತ್ತದೆ
ಲಕ್ನೋ: ಭಾರತದಲ್ಲಿ ಕ್ರಿಕೆಟ್ ಅಂದರೆ ಅದು ಕೇವಲ ಒಂದು ಆಟವಲ್ಲ ಬದಲಿಗೆ ಭಾವನಾತ್ಮಕವಾದ ಕ್ರೀಡೆಯಾಗಿದೆ. ಗಲ್ಲಿ ಕ್ರಿಕೆಟ್ (Cricket) ಇರಲಿ ಅಥವಾ ಐಪಿಎಲ್ ಇರಲಿ, ಭಾರತೀಯರ ಕ್ರಿಕೆಟ್ ಕ್ರೇಜ್ ಬೇರೆಯದ್ದೇ ಮಟ್ಟದಲ್ಲಿರುತ್ತದೆ.
ಸಾಮಾನ್ಯವಾಗಿ ಪಂದ್ಯ ಗೆದ್ದ ಆಟಗಾರರಿಗೆ ದೊಡ್ಡ ಟ್ರೋಫಿ, ಚೆಕ್ ಅಥವಾ ಮೋಟಾರ್‌ಸೈಕಲ್ ನೀಡುವುದನ್ನು ನಾವು ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಆಯೋಜಕರು ನೀಡಿದ ಬಹುಮಾನ ನೋಡಿ ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳು ನಗೆಗಡಲಲ್ಲಿ ತೇಲುತ್ತಿವೆ ಎಂದರೆ ಸುಳ್ಳಾಗದು.
ಟ್ರೋಫಿ ಬದಲು ಕೋಳಿ!
ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಪಠಾರ್ದೇವ ಎಂಬಲ್ಲಿ ಎಂಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಪಂದ್ಯ ಮುಗಿದ ನಂತರ ಎಲ್ಲರೂ ಆಟಗಾರ ಟ್ರೋಫಿ ಹಿಡಿಯುತ್ತಾನೆ ಎಂದು ಕಾಯುತ್ತಿದ್ದರೆ, ವೇದಿಕೆ ಮೇಲೆ ಬಂದ ಆಟಗಾರನ ಕೈಗೆ ಆಯೋಜಕರು ಜೀವಂತ ಕೋಳಿಯೊಂದನ್ನು ನೀಡಿದ್ದಾರೆ.
ಹೌದು, ಆ ಪಂದ್ಯಾವಳಿಯಲ್ಲಿ ಅದ್ಭುತವಾಗಿ ಆಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರನಿಗೆ ಕೈಗೆ ಸೀದಾ ಒಂದು ಗರಿಗರಿಯಾದ ಕೋಳಿಯನ್ನು ಇಡಲಾಯಿತು. ಆಟಗಾರನೂ ಕೂಡ ಅಷ್ಟೇ ಸಂಭ್ರಮದಿಂದ ಆ ಕೋಳಿಯನ್ನು ಎತ್ತಿ ಹಿಡಿದು ಫೋಸ್ ನೀಡಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದು ಚಿಕನ್ ಪ್ರೀಮಿಯರ್ ಲೀಗ್!
ಎಕ್ಸ್ (ಟ್ವಿಟ್ಟರ್) ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಪ್ರಕಾಶ್ ಯಾದವ್ ಎಂಬುವವರು ಈ ವಿಡಿಯೋ ಶೇರ್ ಮಾಡಿ, ಇಂಡಿಯಾ ಅಂದ್ರೆ ಸುಮ್ನೆನಾ? ಇಲ್ಲಿ ಆಯೋಜಕರು ಮ್ಯಾನ್ ಆಫ್ ದಿ ಮ್ಯಾಚ್‌ಗೆ ಶುದ್ಧ ದೇಸಿ ಕೋಳಿ ಕೊಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ನೋಡಿ ಜನ ಸುಮ್ಮನಿರುತ್ತಾರೆಯೇ? ಒಬ್ಬ ಬಳಕೆದಾರ, ಇದು ಲೋಕಲ್ ಪ್ರೀಮಿಯರ್ ಲೀಗ್ ಅಲ್ಲಪ್ಪಾ, ಚಿಕನ್ ಪ್ರೀಮಿಯರ್ ಲೀಗ್ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು, ಪಾಪ, ಆ ಆಟಗಾರ ಸಸ್ಯಾಹಾರಿ ಆಗಿದ್ರೆ ಅವನ ಕಥೆ ಏನಾಗುತ್ತಿತ್ತು? ಎಂದು ಕಾಲೆಳೆದಿದ್ದಾರೆ.
ಗ್ರಾಮೀಣ ಭಾಗದ ಕ್ರಿಕೆಟ್ ಪಂದ್ಯಾವಳಿಗಳು ಯಾವಾಗಲೂ ಇಂತಹ ವಿಭಿನ್ನ ಆಚರಣೆಗಳಿಗೆ ಹೆಸರುವಾಸಿ. ಟ್ರೋಫಿ ಎನ್ನುವುದು ಕೇವಲ ಶೋಕೇಸ್‌ನಲ್ಲಿ ಇಡಲು ಮಾತ್ರ ಸೀಮಿತ, ಆದರೆ ಈ ಕೋಳಿ ಬಹುಮಾನ ಮನೆಯಲ್ಲಿ ಎಲ್ಲರೂ ಸೇರಿ ಹಬ್ಬ ಮಾಡಲು ಸಹಾಯ ಮಾಡುತ್ತದೆ ಎಂಬುದು ಆಯೋಜಕರ ದೂರದೃಷ್ಟಿ' ಇರಬಹುದು ಎಂದು ಜನ ಚರ್ಚಿಸುತ್ತಿದ್ದಾರೆ. ಏನೇ ಇರಲಿ, ದೊಡ್ಡ ದೊಡ್ಡ ಸ್ಟೇಡಿಯಂಗಳಲ್ಲಿ ಸಿಗದ ಮಜಾ ನಮ್ಮ ಹಳ್ಳಿ ಕ್ರಿಕೆಟ್‌ನಲ್ಲಿ ಸಿಗುತ್ತದೆ ಎಂಬುದಕ್ಕೆ ಈ ಕೋಳಿ ಪ್ರಶಸ್ತಿಯೇ ಸಾಕ್ಷಿಯಾಗಿದೆ. ಈ ವಿಡಿಯೋ ಈಗ ಲಕ್ಷಾಂತರ ವೀಕ್ಷಣೆ ಪಡೆದುಕೊಳ್ಳುತ್ತಿದೆ,(ಏಜನ್ಸೀಸ್).