'3 ಈಡಿಯಟ್ಸ್'​ ಚಿತ್ರಕ್ಕೆ ವಾಂಗ್​ಚುಕ್​ ಸ್ಫೂರ್ತಿಯಲ್ಲ! ಅಮೀರ್ ಮಾತಿಗೆ ಹಳೆಯ ವಿಡಿಯೋ ಸಾಕ್ಷಿ ಮುಂದಿಟ್ಟು ನೆಟ್ಟಿಗರು ಛೀಮಾರಿ

ಸೋನಮ್​ ವಾಂಗ್​ಚುಕ್​ ಬಗ್ಗೆ ಅಮೀರ್​ ಖಾನ್​ ಆಡಿದ ಮಾತೀಗ ವಿವಾದಕ್ಕೆ ಗುರಿ
ಸೋನಮ್​ ವಾಂಗ್​ಚುಕ್​ ಬಗ್ಗೆ ಅಮೀರ್​ ಖಾನ್​ ಆಡಿದ ಮಾತೀಗ ವಿವಾದಕ್ಕೆ ಗುರಿ
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಕಾರ್ಯಕರ್ತ ಸೋನಮ್​ ವಾಂಗ್​​ಚುಕ್ ಹೋರಾಟ ಮುಂದುವರಿಕೆ
  • ದಿನದಿಂದ ದಿನಕ್ಕೆ ಹದಗೆಟ್ಟ ಅವರ ಆರೋಗ್ಯ ಸ್ಥಿತಿ
  • 3 ಈಡಿಯಟ್ಸ್​ ಚಿತ್ರಕ್ಕೆ ವಾಂಗ್​ಚುಕ್​ ಸ್ಫೂರ್ತಿಯಲ್ಲ ಎಂದ ಅಮೀರ್ ಖಾನ್
  • ಅಮೀರ್ ಮಾತಿಗೆ ವಿಡಿಯೋ ಸಾಕ್ಷಿ ಮುಂದಿಟ್ಟು ನೆಟ್ಟಿಗರು ಛೀಮಾರಿ
Aamir Khan: ದೆಹಲಿಯ ಜಂತರ್​ ಮಂತರ್​ನಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಬಿಡದಂತೆ ಮುಂದುವರಿಸಿರುವ ಸಾಮಾಜಿಕ ಕಾರ್ಯಕರ್ತ ಸೋನಮ್​ ವಾಂಗ್​​ಚುಕ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸರಾಗಿರುವ ಬಾಲಿವುಡ್​ ನಟ ಅಮೀರ್​ ಖಾನ್​ಗೆ ಸದ್ಯ ನೆಟ್ಟಿಗರು ಛೀಮಾರಿಗಳ ಸುರಿಮಳೆ ಸುರಿಸಿದ್ದಾರೆ.
ಬಾಲಿವುಡ್​ನ ಬ್ಲಾಕ್​ಬಸ್ಟರ್ '3 ಈಡಿಯಟ್ಸ್' ಚಿತ್ರದಲ್ಲಿ ಅಮೀರ್​ ಖಾನ್, ಒಬ್ಬ ಶಿಕ್ಷಣ ವ್ಯವಸ್ಥೆಯ ವಿರುದ್ಧ ಹೋರಾಡಿದ ಅಸಾಧಾರಣ ಬುದ್ಧಿಜೀವಿ ಫುನ್ಸುಖ್ ವಾಂಗ್ಡು ಅವರ ಪಾತ್ರವನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದು. ಈ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ ಅಮೀರ್, ಸಿನಿಮಾ ನೋಡಿದವರ ಕಣ್ಣಂಚಲ್ಲಿ ನೀರು ತರಿಸಿದ್ದರು. ಅವರ ಪಾತ್ರಕ್ಕೆ ಸಿನಿಪ್ರಿಯರಿಂದ ನಿರೀಕ್ಷೆಗೂ ಮೀರಿದ ಮೆಚ್ಚುಗೆಗಳು ಹರಿದುಬಂದವು. ಈ ಪಾತ್ರವು ಕೇವಲ ಸಿನಿಮಾಗೆ ಕಾಲ್ಪನಿಕವಾಗಿ ರೂಪಿಸಿದ್ದಲ್ಲ. ಬದಲಿಗೆ ವಾಂಗ್​ಚುಕ್​ ಅವರ ಬದುಕನ್ನೇ ಆಧರಿಸಿದ್ದು ಎಂಬುದಕ್ಕೆ ಸಾಕಷ್ಟು ವರದಿಗಳಿವೆ. ಹೀಗಿರುವಾಗಲೇ, ಸೋನಮ್​ ಅವರ ಹೋರಾಟದ ಮಧ್ಯೆ ಅವರ ಕಥೆ ಚಿತ್ರಕ್ಕೆ ಸ್ಫೂರ್ತಿ ನೀಡಿಲ್ಲ ಎಂಬ ಖಾನ್​ ಮಾತು ನೆಟ್ಟಿಗರ ಪಿತ್ತ ನೆತ್ತಿಗೇರಿಸಿದೆ.
3 ಈಡಿಯಟ್ಸ್​ ಚಿತ್ರದ ಮತ್ತೊಬ್ಬ ಕಲಾವಿದ ಚತುರ್​ ಹೇಳಿರುವುದು ತಪ್ಪು. ನಮ್ಮ ಸಿನಿಮಾ ಸೋನಮ್ ವಾಂಗ್ಚುಕ್ ಅವರಿಂದ ಸ್ಫೂರ್ತಿ ಪಡೆದಿಲ್ಲ. ಇದಕ್ಕೂ ಮೊದಲು ನಮಗೆ ಅವರಾರು ಎಂಬುದೇ ಸರಿಯಾಗಿ ಗೊತ್ತಿರಲಿಲ್ಲ. ಕಥೆ ಬರೆಯುವಾಗ ನಮ್ಮವರಿಗೆ ಅವರ ಜೀವನದ ಅಥವಾ ವಾಂಗ್​ಚುಕ್ ಹಿನ್ನೆಲೆಯ ಬಗ್ಗೆ ಕಿಂಚಿತ್ತು ಮಾಹಿತಿ ಇರಲಿಲ್ಲ ಎಂದು ಹೇಳಿದರು. ಅಮೀರ್​ ಖಾನ್​ರಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಕೆಂಡಾಮಂಡಲಗೊಂಡ ನೆಟ್ಟಿಗರು, 2008ರಲ್ಲೇ ನಿಮಗೆ ಆ ವ್ಯಕ್ತಿ ಯಾರೆಂಬುದು ಗೊತ್ತಿತ್ತು ಎಂದು ಹಳೆಯ ವಿಡಿಯೋ ಮುಂದಿಟ್ಟು ಛೀಮಾರಿ ಹಾಕಿದ್ದಾರೆ.
ಸೋನಮ್​ ವಾಂಗ್​ಚುಕ್​ ಅವರ ಹಳೆಯ ಸಂದರ್ಶನಗಳ ತುಣಕನ್ನು ಮುನ್ನೆಲೆಗೆ ತಂದಿರುವ ನೆಟ್ಟಿಗರು, 2009ರಲ್ಲಿ ಚಿತ್ರ ರಿಲೀಸ್​ ಆಗುವ ಮೊದಲೇ ನಿರ್ಮಾಪಕರಿಗೆ ಮತ್ತು ನಿಮ್ಮ ಇಡೀ ಚಿತ್ರತಂಡಕ್ಕೆ ಅವರ ಕೆಲಸದ ಬಗ್ಗೆ ಸರಿಯಾದ ಮಾಹಿತಿ ಇತ್ತು ಎಂದು 2008ರ ವಿಡಿಯೋಗಳನ್ನು ವೈರಲ್ ಮಾಡುವ ಮೂಲಕ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಮತ್ತೊಬ್ಬರು ಕಮೆಂಟ್​ ಮಾಡಿ, ಓಡಿ ಹೋಗೋದು ಎಂದರೆ ನಿಮ್ಮಿಂದ ನೋಡಿ ಕಲಿಯಬೇಕು ಎಂದಿದ್ದಾರೆ.
ಸೋನಮ್ ವಾಂಗ್​ಚುಕ್​ ಅವರ ಕಥೆಯನ್ನು ತಮ್ಮ ಚಿತ್ರವು ಆಧರಿಸಿದೆ ಎಂಬ ಅಂಶವನ್ನು ಅಮೀರ್ ಖಾನ್ ಒಪ್ಪಿಕೊಳ್ಳಲು ನಿರಾಕರಿಸುವುದು ಕೀಳುಮಟ್ಟದ್ದಾಗಿದೆ. ನಿಜಕ್ಕೂ ಸಿನಿಮಾ ನಿರ್ಮಾಣದ ಸಮಯದಲ್ಲೇ ನಿಮಗೆ ಆ ವ್ಯಕ್ತಿ ಯಾರೆಂಬುದು ಗೊತ್ತಿರಲಿಲ್ಲವೇ ಅಮೀರ್​? ಈ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಲಡಾಖ್‌ನಲ್ಲಿರುವ ವಾಂಗ್​ಚುಕ್​ ಅವರ ಶಾಲೆಯಲ್ಲಿ ಶೂಟ್​ ಮಾಡಿಲ್ವಾ ಹೇಳಿ ನೋಡೋಣ? ಎಂದು ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net