ನೀಟ್ನಂಥ ರಾಷ್ಟ್ರಮಟ್ಟದ ಪರೀಕ್ಷೆಗಳು ರದ್ದಾದಾಗ ಅಥವಾ ಮರುಪರೀಕ್ಷೆ ನಿಗದಿಯಾದಾಗ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಎದುರಿಸುವ ತೊಂದರೆಗಳು ನಿಜಕ್ಕೂ ಗಂಭೀರವಾದವು. ಇದು ಕೇವಲ ಒಂದು ಪರೀಕ್ಷೆಯ ಪ್ರಶ್ನೆಯಲ್ಲ, ಲಕ್ಷಾಂತರ ವಿದ್ಯಾರ್ಥಿಗಳ ಕನಸು ಮತ್ತು ಶ್ರಮದ ಜತೆ ವ್ಯವಸ್ಥೆ ಚೆಲ್ಲಾಟವಾಡಿದಂತೆ. ಈ ಬಾರಿ 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ಬರೆದಿದ್ದರು. ತಮ್ಮದಲ್ಲದ ತಪ್ಪಿಗೆ ಈ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಶಿಕ್ಷೆ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳು ಈ ಪರೀಕ್ಷೆಗಾಗಿ ವರ್ಷಗಟ್ಟಲೇ ಹಗಲಿರುಳು ಶ್ರಮಿಸಿರುತ್ತಾರೆ. ಪರೀಕ್ಷೆ ಮುಗಿದ ನಂತರ ನಿರಾಳವಾಗಿದ್ದ ಸಮಯದಲ್ಲಿ ‘ಪರೀಕ್ಷೆ ರದ್ದಾಗಿದೆ’ ಎಂಬ ಸಂಗತಿಯೇ ತೀವ್ರ ಆಘಾತವನ್ನು ಮತ್ತು ಎನ್ಟಿಎ ವಿರುದ್ಧ ಆಕ್ರೋಶವನ್ನು ಹುಟ್ಟುಹಾಕಿದೆ. ಮರು ಪರೀಕ್ಷೆಗಾಗಿ ಮತ್ತೆ ಓದಬೇಕು ಎಂಬುದು ಮಾನಸಿಕವಾಗಿ ದೊಡ್ಡ ಹೊರೆಯಾಗುತ್ತದೆ. ಪರೀಕ್ಷೆ ಮುಗಿದ ಮೇಲೆ ಹೆಚ್ಚಿನ ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಪ್ರಯತ್ನಿಸುತ್ತಿರುತ್ತಾರೆ. ಹೀಗಿರುವಾಗ, ಇದ್ದ ಕ್ಕಿದ್ದಂತೆ ಜೂನ್ನಲ್ಲಿ ಪರೀಕ್ಷೆ ಎಂದರೆ, ಮತ್ತೆ ಹಳೆಯ ವೇಗಕ್ಕೆ, ಲಯಕ್ಕೆ ಮರಳುವುದು ಕಷ್ಟವಾಗುತ್ತದೆ. ನೆನಪಿನ ಶಕ್ತಿ ಮತ್ತು ವಿಷಯಗಳ ಮೇಲಿನ ಹಿಡಿತ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ಅನೇಕ ವಿದ್ಯಾರ್ಥಿಗಳು ದೂರದ ಊರುಗಳಿಂದ ಪರೀಕ್ಷಾ ಕೇಂದ್ರಗಳಿಗೆ ಬರಬೇಕಾಗುತ್ತದೆ. ಮರುಪರೀಕ್ಷೆ ಎಂದರೆ ಮತ್ತೆ ಪ್ರಯಾಣ ಮತ್ತು ಉಳಿದುಕೊಳ್ಳುವ ವೆಚ್ಚ ಭರಿಸಬೇಕಾಗುತ್ತದೆ. ಮರುಪರೀಕ್ಷೆಗಾಗಿ ಮತ್ತೆ ಕ್ರಾ್ಯಶ್ ಕೋರ್ಸ್ಗಳು ಅಥವಾ ಟೆಸ್ಟ್ ಸೀರೀಸ್ಗಳಿಗೆ ಸೇರಬೇಕಾಗಿ ಬಂದರೆ ಪಾಲಕರಿಗೆ ಆರ್ಥಿಕ ಹೊರೆ. ಪರೀಕ್ಷೆ ತಡವಾಗಿ ನಡೆದಷ್ಟೂ ಫಲಿತಾಂಶ ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆ ವಿಳಂಬವಾಗುತ್ತದೆ. ಇದರಿಂದ ವೈದ್ಯಕೀಯ ಕಾಲೇಜುಗಳ ಮೊದಲ ವರ್ಷದ ತರಗತಿಗಳು ತಡವಾಗಿ ಆರಂಭವಾಗುತ್ತವೆ. ಇದು ಇಡೀ ಶೈಕ್ಷಣಿಕ ವರ್ಷದ ಮೇಲೆ ಪರಿಣಾಮ ಬೀರುತ್ತದೆ.