ನೀಟ್ ಪರೀಕ್ಷೆ ರದ್ದು: ಪ್ರಶ್ನೆ ಪತ್ರಿಕೆ ಲೀಕ್ ಬೆನ್ನಲ್ಲೇ ಕೇಂದ್ರದ ಬಿಗ್ ನಿರ್ಧಾರ, ಸಿಬಿಐ ತನಿಖೆಗೆ ಆದೇಶ!

ನೀಟ್​ ಪರೀಕ್ಷೆ ರದ್ದು
ನೀಟ್​ ಪರೀಕ್ಷೆ ರದ್ದು
Published on

ಪ್ರಮುಖ ಮುಖ್ಯಾಂಶಗಳು

  • ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಿನ್ನೆಲೆ ಪರೀಕ್ಷೆ ರದ್ದು
  • ಹೊಸದಾಗಿ ಪರೀಕ್ಷೆ ನಡೆಸಲು ರಾಷ್ಟ್ರೀಯ ಟೆಸ್ಟಿಂಗ್​ ಏಜೆನ್ಸಿ ಸೂಚನೆ
  • ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಆದೇಶ
ನವದೆಹಲಿ: ರಾಜಸ್ಥಾನದಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಿನ್ನೆಲೆ ಇದೇ ಮೇ.03ರಂದು ನಡೆಸಲಾದ ಯುಜಿ ನೀಟ್​ (NEET UG 2026) ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಇದೀಗ ರದ್ದುಗೊಳಿಸಿದೆ.
ರಾಜಸ್ಥಾನದ ಸೀಕರ್​ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಹಿನ್ನೆಲೆ ಮರು ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಪರೀಕ್ಷೆ ಬರೆದಿದ್ದ 22,05,035 ವಿದ್ಯಾರ್ಥಿಗಳಿಗೆ ಇದೀಗ ಬಿಗ್​ ಶಾಕ್​ ಎದುರಾಗಿದ್ದೇ ಆದರೂ ಯಾವ ವಿದ್ಯಾರ್ಥಿಗೂ ಅನ್ಯಾಯವಾಗದಿರಲಿ ಎಂಬ ನಿಟ್ಟಿನಲ್ಲಿ ಸದ್ಯ ಎನ್​ಟಿಎ ಈ ನಿರ್ಧಾರವನ್ನು ಕೈಗೊಂಡಿರುವುದು ಸ್ಪಷ್ಟ. ಸೋರಿಕೆಯ ಪ್ರಕರಣವನ್ನು ಗಮನಿಸಿದ ಕೇಂದ್ರ ಸರ್ಕಾರ ಸಿಬಿಐಗೆ ತನಿಖೆ ನಡೆಸುವಂತೆ ಆದೇಶಿಸಿದೆ.
ಪ್ರತ್ಯೇಕವಾಗಿ ನಿಗದಿಪಡಿಸಿದ ದಿನಾಂಕಗಳಲ್ಲಿ ಪರೀಕ್ಷೆಯನ್ನು ಮತ್ತೆ ನಡೆಸಲಾಗುವುದು ಎಂದು ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ ಅಧಿಕೃತವಾಗಿ ತಿಳಿಸಿದೆ. ಕೇಂದ್ರ ಸಂಸ್ಥೆಗಳ ಸಮನ್ವಯ ಮತ್ತು ಕಾನೂನು ಜಾರಿ ಅಧಿಕಾರಿಗಳು ನೀಡಿದ ತನಿಖಾ ಮಾಹಿತಿಗಳನ್ನು ಪರಿಶೀಲಿಸಿದ ಬಳಿಕ ಕೇಂದ್ರ ಸರ್ಕಾರದ ಅನುಮೋದನೆ ನಂತರವೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಎನ್​ಟಿಎ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಮುಖ್ಯವಾಗಿ, ಪ್ರಸ್ತುತ ಪರೀಕ್ಷಾ ಪ್ರಕ್ರಿಯೆಯನ್ನು ನಿಲ್ಲಿಸುವ ಮಾತಿಲ್ಲ ಎಂದು ಒತ್ತಿ ಹೇಳಿದೆ.

ಮರು ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟ

ಹೊಸ ಪರೀಕ್ಷಾ ದಿನಾಂಕಗಳು ಮತ್ತು ಪರಿಷ್ಕೃತ ಹಾಲ್​ಟಿಕೆಟ್​ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಅಭ್ಯರ್ಥಿಗಳು ಮತ್ತು ಪೋಷಕರು ಅಧಿಕೃತ ಅಧಿಸೂಚನೆಗಳನ್ನು ಮತ್ತು ಸುತ್ತೋಲೆಗಳನ್ನು ಮಾತ್ರ ಪರಿಗಣಿಸಬೇಕು. ಈ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಜಾಲತಾಣಗಳಲ್ಲಿ ಪ್ರಸಾರವಾಗುವ ದಿಕ್ಕು ತಪ್ಪಿಸುವಂತ ವರದಿಗಳನ್ನು ನಂಬಬಾರದು ಎಂದು ಹೇಳಿದೆ.

ಏನಿದು ಪ್ರಕರಣ?

ಮೇ.03ರಂದು ನಡೆದ ದೇಶದ 551 ನಗರಗಳು ಮತ್ತು ವಿದೇಶದ 14 ನಗರಗಳಲ್ಲಿ, 5,432ಕ್ಕೂ ಅಧಿಕ ಕೇಂದ್ರಗಳಲ್ಲಿ, ಸುಮಾರು 22.79 ಲಕ್ಷ ಅಭ್ಯರ್ಥಿಗಳು ನೀಟ್​ ಪರೀಕ್ಷೆಯನ್ನು ಬರೆದಿದ್ದರು. ಆದರೆ, ಈ ರಾಜಸ್ಥಾನ ಮೂಲದ ಎಂಬಿಬಿಎಸ್​ ವಿದ್ಯಾರ್ಥಿಯೊಬ್ಬ, ಮಾದರಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಆರೋಪ ಕೇಳಿಬಂದ ಬೆನ್ನಲ್ಲೇ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರಕರಣ ಬೆನ್ನತ್ತಿದ ಎನ್​ಟಿಎ, ಹಲವು ಅಂಕಿ-ಅಂಶಗಳು ಮತ್ತು ದಾಖಲೆಗಳ ಬಳಿಕ ಪರೀಕ್ಷೆಯನ್ನು ರದ್ದುಗೊಳಿಸಿ, ಹೊಸ ಪರೀಕ್ಷೆಯ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ. ಈ ಮೂಲಕ ಲಕ್ಷಾಂತರ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವ ಭರವಸೆಯನ್ನು ನೀಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net