ನೀಟ್ ಮರುಪರೀಕ್ಷೆ ಯಶಸ್ವಿ: ನಮ್ಮ ಲೋಪಗಳನ್ನು ಸರಿಪಡಿಸಿದ್ದೇವೆ ಎಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್! Dharmendra Pradhan

ನೀಟ್ ಮರುಪರೀಕ್ಷೆ ಯಶಸ್ವಿ: ನಮ್ಮ ಲೋಪಗಳನ್ನು ಸರಿಪಡಿಸಿದ್ದೇವೆ ಎಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್!
ನೀಟ್ ಮರುಪರೀಕ್ಷೆ ಯಶಸ್ವಿ: ನಮ್ಮ ಲೋಪಗಳನ್ನು ಸರಿಪಡಿಸಿದ್ದೇವೆ ಎಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್!
Published on

ಪ್ರಮುಖ ಮುಖ್ಯಾಂಶಗಳು

  • ಹಿಂದಿನ ಲೋಪಗಳನ್ನು ಒಪ್ಪಿಕೊಂಡು ಸರಿಪಡಿಸಿದ್ದೇವೆ" ಎಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್.
  • ವ್ಯವಸ್ಥೆ ಈಗ ಟ್ರ್ಯಾಕ್‌ಗೆ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ರಾಜಿ ಇಲ್ಲ; ಎಚ್ಚೆತ್ತುಕೊಂಡು ಸಿಸ್ಟಮ್ ಸರಿಪಡಿಸಿದ ಕೇಂದ್ರ ಸರ್ಕಾರ.
  • 'ಪೇಪರ್ ಮಾಫಿಯಾ'ಗೆ ಭೀತಿ: ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಶೀಘ್ರದಲ್ಲೇ ‘ಫಾಸ್ಟ್ ಟ್ರ್ಯಾಕ್ ಕೋರ್ಟ್’ ಸ್ಥಾಪನೆ!
  • ಯುವಕರ ಭವಿಷ್ಯಕ್ಕಾಗಿ ವಾಯುಪಡೆ ಹಾಗೂ ಸಶಸ್ತ್ರ ಪಡೆಗಳನ್ನು ಬಳಸಿಕೊಂಡರೆ ತಪ್ಪೇನು?" ಎಂದು ಪ್ರಶ್ನಿಸಿದ ಸಚಿವರು.
ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಮತ್ತು ಭಾರಿ ವಿವಾದದ ಕಾರಣದಿಂದಾಗಿ ರದ್ದಾಗಿದ್ದ 2026ರ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ (NEET-UG) ಮರುಪರೀಕ್ಷೆಯನ್ನು ದೇಶಾದ್ಯಂತ ಅತ್ಯಂತ ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ನಡೆಸಿ ಮುಗಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಬುಧವಾರ ಪ್ರಕಟಿಸಿದ್ದಾರೆ.
ಈ ಹಿಂದೆ ನಡೆದಿದ್ದ ಪರೀಕ್ಷೆಯಲ್ಲಿ ನಮ್ಮ ಕಡೆಯಿಂದಲೂ ಕೆಲವು ಲೋಪದೋಷಗಳಾಗಿದ್ದವು ಎಂಬುದನ್ನು ಮುಕ್ತವಾಗಿ ಒಪ್ಪಿಕೊಂಡಿರುವ ಸಚಿವರು, ಕೇಂದ್ರ ಸರ್ಕಾರವು ತಕ್ಷಣವೇ ಎಚ್ಚೆತ್ತುಕೊಂಡು ಆ ತಪ್ಪುಗಳನ್ನು ಸರಿಪಡಿಸಿದೆ. ಭವಿಷ್ಯದಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಯಶಸ್ವಿಯಾಗಿ ಮರುಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ತಪ್ಪು ಒಪ್ಪಿಕೊಳ್ಳುತ್ತೇವೆ, ಸಿಸ್ಟಮ್ ಈಗ ಟ್ರ್ಯಾಕ್‌ಗೆ ಬಂದಿದೆ- ಸಚಿವ ಪ್ರಧಾನ್

ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಹಿಂದಿನ ಪರೀಕ್ಷೆಯ ಸಂದರ್ಭದಲ್ಲಿ ನಮ್ಮ ಕಡೆಯಿಂದ ಲೋಪಗಳಾಗಿದ್ದು ನಿಜ, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಜನರ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಸ್ಪಷ್ಟವಾಗಿ ಸೂಚಿಸಿದ್ದರು. ಅದರಂತೆ ನಾವು ಇಡೀ ವ್ಯವಸ್ಥೆಯನ್ನು ಮರುಪರಿಶೀಲಿಸಿ, ಲೋಪಗಳನ್ನು ಸರಿಪಡಿಸಿ ಸಿಸ್ಟಮ್ ಅನ್ನು ಮತ್ತೆ ಹಿದಿರಿಗೆ ತಂದಿದ್ದೇವೆ ಎಂದಿದ್ದಾರೆ.
ನೀಟ್ ಆಕಾಂಕ್ಷಿಗಳು ಮತ್ತು ಅವರ ಪೋಷಕರಿಗೆ ಧೈರ್ಯ ತುಂಬಿದ ಸಚಿವರು, ಯಾರೂ ಧೃತಿಗೆಡಬೇಕಾಗಿಲ್ಲ. ದೇಶದ ವ್ಯವಸ್ಥೆಯ ಮೇಲೆ ಭರವಸೆ ಇಡಿ, ಸದಾ ಸಕಾರಾತ್ಮಕವಾಗಿ ಯೋಚಿಸಿ. ಯುವ ಪೀಳಿಗೆಯ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಸರ್ಕಾರ ಬದ್ಧವಾಗಿದೆ. ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ದೇಶದ ಎಲ್ಲಾ ರಾಜ್ಯ ಸರ್ಕಾರಗಳು ನಮಗೆ ಭಾರಿ ಬೆಂಬಲ ನೀಡಿವೆ ಎಂದು ಧನ್ಯವಾದ ಅರ್ಪಿಸಿದ್ದಾರೆ.

ಪೇಪರ್ ಮಾಫಿಯಾ ವಿರುದ್ಧ ಫಾಸ್ಟ್ ಟ್ರ್ಯಾಕ್ ಕೋರ್ಟ್; ಸೇನೆ ಬಳಕೆಗೆ ಸಮರ್ಥನೆ

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಜಾಲ ಅಥವಾ ಪೇಪರ್ ಮಾಫಿಯಾಗಳ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಎಚ್ಚರಿಸಿದ್ದಾರೆ. ಈ ಹಗರಣಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಅತ್ಯಂತ ವೇಗವಾಗಿ ನಡೆಸಲು ಪ್ರತ್ಯೇಕ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಲಾಗುವುದು ಎಂದು ಧರ್ಮೇಂದ್ರ ಘೋಷಿಸಿದ್ದಾರೆ.
ಇದೇ ವೇಳೆ, ಪರೀಕ್ಷಾ ಕೇಂದ್ರಗಳಿಗೆ ಭದ್ರತೆ ಒದಗಿಸಲು ಮತ್ತು ಪ್ರಶ್ನೆ ಪತ್ರಿಕೆಗಳ ರಕ್ಷಣೆಗೆ ಭಾರತೀಯ ವಾಯುಪಡೆ (IAE) ಹಾಗೂ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು (CAPF) ಬಳಸಿಕೊಂಡಿದ್ದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ಎತ್ತಿರುವುದನ್ನು ಸಚಿವರು ತಳ್ಳಿಹಾಕಿದ್ದಾರೆ. ದೇಶದ ಯುವಕರ ಭವಿಷ್ಯವನ್ನು ರಕ್ಷಿಸುವ ಪರೀಕ್ಷೆಗಾಗಿ ವಾಯುಪಡೆ ಮತ್ತು ಸಶಸ್ತ್ರ ಪಡೆಗಳನ್ನು ಬಳಸಿಕೊಂಡರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಧಾನ್​ ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ರಾಜಕೀಯ ವಾಗ್ದಾಳಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳಲ್ಲಿ ಅನಗತ್ಯ ಗೊಂದಲ ಮತ್ತು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ. ವಿರೋಧ ಪಕ್ಷಗಳು ಮತ್ತು ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಭವಿಷ್ಯದ ವಿಷಯದಲ್ಲಿ ರಾಜಕೀಯ ಮಾಡಬಾರದು. ರಾಹುಲ್ ಅವರು ನೀಟ್ ಆಕಾಂಕ್ಷಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೊಸ ಪೀಳಿಗೆಯ ಮನಸ್ಸಿನಲ್ಲಿ ಭಯ ಬಿತ್ತಬೇಡಿ, ಅವರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರೀಕ್ಷೆಗೆ ಕೆಲವೇ ದಿನಗಳ ಮುನ್ನ ರಾಜಸ್ಥಾನದ ಕೋಟಾದಲ್ಲಿ ವಿಪಕ್ಷಗಳು ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದ್ದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ: ಕಟ್ಟುನಿಟ್ಟಿನ ಹೈಟೆಕ್ ಕಾವಲು!

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ದೇಶದ 5,440 ಕೇಂದ್ರಗಳು ಹಾಗೂ ವಿದೇಶದ 14 ಕೇಂದ್ರಗಳು ಸೇರಿದಂತೆ ಒಟ್ಟು ಭಾರಿ ಸಂಖ್ಯೆಯ ಕೇಂದ್ರಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ನೀಟ್ 2026ರ ಮರುಪರೀಕ್ಷೆಗೆ ಹಾಜರಾಗಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್ ಒಳಗೊಂಡಂತೆ ಒಟ್ಟು 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿದೆ.
ಈ ಬಾರಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಬಯೋಮೆಟ್ರಿಕ್ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನ, ಸಿಸಿಟಿವಿ ಕಣ್ಗಾವಲು, ಮೊಬೈಲ್ ಜಾಮರ್‌ಗಳು ಹಾಗೂ ರಾಜ್ಯ ಪೊಲೀಸರ ಸಹಾಯದೊಂದಿಗೆ ಎರಡು ಹಂತದ ತೀವ್ರ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿತ್ತು ಎಂದು ಎನ್‌ಟಿಎ ತಿಳಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net