ರಾಜೀನಾಮೆ ಕೊಟ್ರೆ ಪುತ್ರಿ ಬದುಕಿ ಬರ್ತಾಳಾ? ನೀಟ್​ ಲೀಕ್​ಗೆ ಕಾರಣರಾದ ಆರೋಪಿಗಳನ್ನು ಗಲ್ಲಿಗೇರಿಸಿ! ಕಣ್ಣೀರಿಟ್ಟ ತಾಯಿ

ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ
ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ
Published on

ಪ್ರಮುಖ ಮುಖ್ಯಾಂಶಗಳು

  • ನೀಟ್​ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮಗಳು ಆತ್ಮಹತ್ಯೆ
  • ಪ್ರಧಾನ್ ರಾಜೀನಾಮೆ ನಿರ್ಧಾರವೂ ಮಗಳನ್ನು ವಾಪಾಸ್​ ಜೀವಂತವಾಗಿ ತರುವುದಿಲ್ಲ
  • ಗಂಡನಿಗೆ ಸ್ಟ್ರೋಕ್​ ಆಗಿದೆ, ನಮ್ಮ ಕುಟುಂಬ ಸಾಕುವವರು ಯಾರೂ ಇಲ್ಲ
NEET Aspriant Parents: ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಎನ್​ಟಿಎ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಕಿತ್ತುಬಿಸಾಡಿದರೂ ವಿದ್ಯಾರ್ಥಿಗಳು ಮತ್ತು ಸಿಜೆಪಿ ನಿರಂತರ ಧರಣಿಗೆ ಮಣಿದು ಕಡೆಗೂ ಕೇಂದ್ರ ಶಿಕ್ಷಣ ಸಚಿವ ಸ್ಥಾನದಿಂದ ಧರ್ಮೇಂದ್ರ ಪ್ರಧಾನ್​ರನ್ನು ಕೆಳಗಿಳಿಸಲಾಯಿತು. ಇಷ್ಟಾದರೂ ನೀಟ್​ ಲೀಕ್​ನಿಂದ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಪೋಷಕರ ಕಣ್ಣೀರು ಮಾತ್ರ ನಿಂತಿಲ್ಲ.  

ಗಲ್ಲು ಶಿಕ್ಷೆಗೆ ಒಳಪಡಿಸಿ 

ಧರ್ಮೇಂದ್ರ ರಾಜೀನಾಮೆ ಕೊಟ್ಟರೆ ಅಥವಾ ಸರ್ಕಾರದ ಯಾವ ನಿರ್ಧಾರವೂ ನಮ್ಮ ಮಗಳನ್ನು ವಾಪಾಸ್​ ಜೀವಂತವಾಗಿ ತರುವುದಿಲ್ಲ. ನೀಟ್​ ಸೋರಿಕೆ ಪ್ರಕರಣದಲ್ಲಿ ಯಾರೆಲ್ಲ ತಪ್ಪಿತಸ್ಥರು ಎಂದು ಸಾಬೀತಾಗುತ್ತದೆಯೋ ಅವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ಮೃತ ಅಭ್ಯರ್ಥಿ ಆಕಾಂಕ್ಷಾ ಚತುರ್ವೇದಿ ಅವರ ತಾಯಿ ನೀಲಂ ಚತುರ್ವೇದಿ ಅಳಲು ತೋಡಿಕೊಂಡಿದ್ದಾರೆ. 
ನೀಟ್ ಪೇಪರ್ ಸೋರಿಕೆಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥರಿಗೆ ಮರಣದಂಡನೆಯೊಂದೇ ಸೂಕ್ತ ಶಿಕ್ಷೆ ಎಂದಿರುವ ತಾಯಿ, ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಯಾವುದೇ ಬದಲಾವಣೆ ಇಲ್ಲ. ಪೇಪರ್ ಸೋರಿಕೆ ಹಿಂದಿರುವ ಅಸಲಿ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಅನೇಕ ವಿದ್ಯಾರ್ಥಿಗಳು ಸಹ ದನಿಗೂಡಿಸಿದ್ದಾರೆ. 

ನಮಗೆ ತೃಪ್ತಿ ಇಲ್ಲ

ಮೇ.20ರಂದು ನಾಗ್ಪುರದಲ್ಲಿ ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮನನೊಂದ ಆಕಾಂಕ್ಷಾ ಚತುರ್ವೇದಿ (18) ಆತ್ಮಹತ್ಯೆಗೆ ಶರಣಾದರು. ಮತ್ತೆ ಪರೀಕ್ಷೆ ಬರೆಯುವ ಧೈರ್ಯ ನನಗಿಲ್ಲ ಎಂದು ಡೆತ್​ನೋಟ್​ ಬರೆದಿಟ್ಟು ನೇಣಿಗೆ ಕೊರಳೊಡ್ಡಿದರು. ಮಗಳ ಸಾವಿನ ಕುರಿತು ಪ್ರತಿಕ್ರಿಯಿಸಿದ ನೀಲಂ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಿಂದ ನಮಗೆ ತೃಪ್ತಿ ಇಲ್ಲ. ಮತ್ತು ರಾಜೀನಾಮೆಯಿಂದ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ ಎಂದರು.

ಪತಿಗೆ ಎರಡು ಬಾರಿ ಹೃದಯಾಘಾತ

ವಿದ್ಯಾರ್ಥಿಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆ, ಪೇಪರ್ ಸೋರಿಕೆಯೊಂದಿಗೆ ಲಕ್ಷಾಂತರ ಜನರ ಭವಿಷ್ಯದೊಂದಿಗೆ ಆಟವಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು, ಮರಣದಂಡನೆ ವಿಧಿಸಲೇಬೇಕು. ಸೋರಿಕೆಯಾದ ವಿಷಯ ತಿಳಿದು ಭಾರಿ ಆತಂಕಕ್ಕೊಳಗಾದ ಮಗಳು ಮಾತನಾಡುವುದನ್ನೇ ನಿಲ್ಲಿಸಿ, ಖಿನ್ನತೆಗೆ ಒಳಗಾದಳು. ಸಣ್ಣ ರೈತರ ಕುಟುಂಬ ನಮ್ಮದು. ನಾಗಪುರದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು ಆಕೆಯ ತಂದೆ. ಮಗಳ ಶಿಕ್ಷಣಕ್ಕಾಗಿ ಸಾಲ ಕೂಡ ಮಾಡಿದ್ದರು. ಎರಡು ಬಾರಿ ಗಂಡನಿಗೆ ಹೃದಯಾಘಾತವಾಗಿದೆ ಎಂದರು. 
ಪಾರ್ಶ್ವವಾಯು ಸಮಸ್ಯೆಯೂ ಇದೆ. ಪುತ್ರಿ ಚೆನ್ನಾಗಿ ಓದಿ ವೈದ್ಯೆ ಆಗುತ್ತಾಳೆ ಎಂದು ನಂಬಿದ್ವಿ. ಆದರೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ. ಮೊದಲ ಪ್ರಯತ್ನದಲ್ಲಿಯೇ ಉತ್ತಮ ಅಂಕ ಗಳಿಸಿದ್ದೆ. ಈಗ ಮತ್ತೆ ಇಷ್ಟು ಚೆನ್ನಾಗಿ ಬರೆಯುತ್ತೇನೆ ಎಂಬ ಗ್ಯಾರಂಟಿ ಇಲ್ಲ. ಕ್ಷಮಿಸಿ ಎಂದು ಹೇಳಿ ಮಗಳು ಸಾವಿಗೀಡಾದಳು. ಅವಳು ಬದುಕಿದ್ದರೆ ನಮ್ಮ ಸಂಸಾರಕ್ಕೆ ಆಸರೆಯಾಗುತ್ತಿದ್ದಳು. ಈಗ ನಮನ್ನು ಯಾರು ಸಾಕುತ್ತಾರೆ ಎಂದು ತಾಯಿ ಕಣ್ಣೀರಾಕಿ ಗೋಳಾಡಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net