ಭರ್ಜರಿ ಬಹುಮತದತ್ತ ಎನ್​ಡಿಎ! ಸಿಎಂ ಪಟ್ಟಕ್ಕೆ ಮತ್ತೊಮ್ಮೆ ನಿತೀಶ್​? ಸಿಗದಿದ್ರೆ ಲೆಕ್ಕಾಚಾರವೇ ಬದಲು?

ನಿತೀಶ್ ಕುಮಾರ್​
ನಿತೀಶ್ ಕುಮಾರ್​
Published on

ಪ್ರಮುಖ ಮುಖ್ಯಾಂಶಗಳು

  • ಬಿಹಾರದಲ್ಲಿ ಎನ್​ಡಿಎ ಭರ್ಜರಿ ಮುನ್ನಡೆ
  • ಎನ್‌ಡಿಎ ಇದುವರೆಗೆ ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ
  • ಸಿಎಂ ಸ್ಥಾನ ಸಿಗದಿದ್ರೆ 'ಪಲ್ಟಿ ರಾಮ'​?
ಪಟನಾ: ಇಡೀ ದೇಶದ ಗಮನ ಸೆಳೆದಿರುವ ಬಿಹಾರ ವಿಧಾನಸಭೆಯ ಚನಾವಣೆಯ ( Bihar Assembly Election ) ಮತಎಣಿಕೆ ಪ್ರಕ್ರಿಯೆ ಇಂದು ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಸೇರಿದಂತೆ ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಭರ್ಜರಿ ಮುನ್ನಡೆಯನ್ನು ಸಾಧಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮ್ಯಾಜಿಕ್ ಫಿಗರ್ ದಾಟಿದ್ದು, ಸಂಜೆಯೊಳಗೆ ಪೂರ್ಣ ಫಲಿತಾಂಶಗಳು ಹೊರಬೀಳಲಿವೆ. ಭಾರೀ ಮುನ್ನಡೆ ಸಾಧಿಸಿರುವ ಎನ್​ಡಿಎ ಪಕ್ಷದಿಂದ ಮತ್ತೊಮ್ಮೆ ನಿತೀಶ್ ಕುಮಾರ್ ಅವರೇ ಬಿಹಾರದ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾತುಗಳು ಸದ್ಯ ರಾಜಕೀಯ ವಲಯದಲ್ಲಿ ಬಿರುಸಾಗಿ ಚರ್ಚೆಯಾಗುತ್ತಿದೆ. ಆದರೆ, ಎನ್‌ಡಿಎ ಇದುವರೆಗೆ ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಪಕ್ಷದಿಂದ ಯಾರು ಸಿಎಂ ಆಗಲಿದ್ದಾರೆ ಎಂಬುದರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಹಲವಾರು ಬಾರಿ ಪ್ರಶ್ನಿಸಲಾಯಿತು. ಆದರೆ, ಇದಕ್ಕೆ ಸಚಿವರಿಂದ ಎಲ್ಲಿಯೂ ಸ್ಪಷ್ಟ ಉತ್ತರ ಸಿಗಲಿಲ್ಲ. ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ ಎಂದಿದ್ದ ಅಮಿತ್ ಶಾ, ಅವರೇ ಮತ್ತೆ ಬಿಹಾರದ ಸಿಎಂ ಆಗಲಿದ್ದಾರೆ ಎಂದು ಎಲ್ಲಿಯೂ ಹೇಳಲಿಲ್ಲ. ಶಾ ಮಾತ್ರವಲ್ಲದೇ ಎನ್‌ಡಿಎಯ ಯಾವುದೇ ಹಿರಿಯ ನಾಯಕರು ಕೂಡ ನಿತೀಶ್ ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರಲಿದ್ದಾರೆ ಎಂದು ಹೇಳಿಲ್ಲ.
ವರದಿ ಪ್ರಕಾರ, ಈ ಬಾರಿ ಬಿಜೆಪಿ ಮತ್ತು ಜೆಡಿಯು ಬಹುತೇಕ ಸಮಾನ ಸಂಖ್ಯೆಯ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಹಲವು ವರ್ಷಗಳಿಂದ ನಿತೀಶ್ ಕುಮಾರ್‌ಗೆ ಸಿಎಂ ಹುದ್ದೆ ನೀಡುತ್ತಾ ಬಂದಿರುವ ಬಿಜೆಪಿ, ಈ ಬಾರಿ ಅದೇ ಹಾದಿಯನ್ನು ಹಿಡಿಯಲು ಯೋಜಿಸಿಲ್ಲ ಎನ್ನಲಾಗಿದೆ. ಇದಲ್ಲದೆ, ನಿತೀಶ್ ಕೆಲವು ಸಮಯದಿಂದ ದೈಹಿಕವಾಗಿ ಚೈತನ್ಯಶೀಲರಾಗಿಯೂ ಅಖಾಡದಲ್ಲಿಲ್ಲ. ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ಸ್ಪಷ್ಟವಾಗಿದೆ. ಹೀಗಿರುವಾಗ, ಅವರಿಗೆ ಮತ್ತೊಮ್ಮೆ ಸಿಎಂ ಸ್ಥಾನ ಕೊಡುವುದು ಅನುಮಾನವೇ.
ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ, ಬಿಜೆಪಿ 190 ಸ್ಥಾನಗಳಲ್ಲಿ, ಎನ್‌ಡಿಎ 50 ಸ್ಥಾನಗಳಲ್ಲಿ, ಮಹಾಘಟಬಂಧನ್ 3 ಸ್ಥಾನಗಳಲ್ಲಿ ಮತ್ತು ಇತರರು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪಕ್ಷವಾರು, ಇಂದು ಬೆಳಗ್ಗೆ 11.30ರ ಹೊತ್ತಿಗೆ ಬಿಜೆಪಿ 84 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಜೆಡಿಯು 75 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಆರ್‌ಜೆಡಿ 34 ಸ್ಥಾನಗಳಲ್ಲಿ, ಕಾಂಗ್ರೆಸ್ 7, ಜೆಎಸ್‌ಪಿ 0, ಮತ್ತು ಇತರರು 43 ಸ್ಥಾನಗಳಲ್ಲಿ (ಎನ್‌ಡಿಎ, ಮಹಾಘಟಬಂಧನ್) ಮುನ್ನಡೆಯಲ್ಲಿದ್ದಾರೆ.

ಸಿಎಂ ಸ್ಥಾನ ಸಿಗದಿದ್ರೆ 'ಪಲ್ಟಿ ರಾಮ'​?

ಎನ್​ಡಿಎ ಸರ್ಕಾರ ರಚಿಸಿ, ಸಿಎಂ ಗದ್ದುಗೆ ಏರುವ ನಿತೀಶ್ ಕುಮಾರ್​, ಅದೇ ಅಧಿಕಾರ ಸಿಗದಿದ್ದಾಗ ಮತ್ತೊಂದು ಪಕ್ಷಕ್ಕೆ ಜಿಗಿಯುವುದು ಹೊಸದೇನಲ್ಲ. ಹೀಗಾಗಿಯೇ, ಬಿಹಾರ ರಾಜಕೀಯದಲ್ಲಿ ಅವರಿಗೆ "ಪಲ್ಟಿ ರಾಮ" ಎಂಬ ಹಣೆಪಟ್ಟಿ ಸಿಕ್ಕಿದೆ. ಹಲವಾರು ವರ್ಷಗಳಿಂದ ಕುತಂತ್ರದಿಂದ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದಾರೆ, ಸಾಧ್ಯವಾದರೆ ಬಿಜೆಪಿಯೊಂದಿಗೆ ಮತ್ತು ಇಲ್ಲದಿದ್ದರೆ ಆರ್‌ಜೆಡಿಯೊಂದಿಗೆ ಕೈಜೋಡಿಸುತ್ತಿದ್ದಾರೆ. ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದಾಗ, ಅವರು ಆರ್‌ಜೆಡಿಯೊಂದಿಗೆ. ಮತ್ತು ಆರ್‌ಜೆಡಿ ಜತೆಗೆ ಭಿನ್ನಾಭಿಪ್ರಾಯಗಳಿದ್ದಾಗ, ಬಿಜೆಪಿಯೊಂದಿಗೆ ಸೇರುವುದು ಪಲ್ಟಿ ರಾಮ ಹೆಸರಿಗೆ ಮುಖ್ಯ ಕಾರಣವಾಗಿದೆ. ಆದಾಗ್ಯೂ, ಮುಖ್ಯಮಂತ್ರಿ ಸ್ಥಾನವನ್ನು ಇಲ್ಲಿಯವರೆಗೆ ತಾವೇ ನಿಭಾಯಿಸುವಲ್ಲಿ ಅವರು ಯಶಸ್ವಿಯಾಗಿರುವುದು ಗಮನಾರ್ಹವೇ ಸರಿ.

ಬಿಟ್ಟುಕೊಡುವ ಮಾತೇ ಇಲ್ಲ

ಈ ಬಾರಿ, ಬಿಜೆಪಿ ನಾಯಕರೊಬ್ಬರಿಗೆ ಸಿಎಂ ಸ್ಥಾನ ಸಿಗುತ್ತದೆ ಎಂಬ ಅದಾಗಲೇ ಪ್ರಾರಂಭವಾಗಿವೆ. ವರ್ಷಗಳಿಂದ, ವಿಜಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಬಿಹಾರದ ಉಪಮುಖ್ಯಮಂತ್ರಿಗಳಾಗಿದ್ದಾರೆ. ಬಿಜೆಪಿ ನಾಯಕರೊಬ್ಬರಿಗೆ ಸಿಎಂ ಸ್ಥಾನ ಸಿಕ್ಕರೆ, ಅವರಲ್ಲಿ ಒಬ್ಬರಿಗೆ ಸಿಎಂ ಸ್ಥಾನ ನೀಡಲಾಗುತ್ತದೆಯೇ? ಎಂಬ ಪ್ರಶ್ನೆಗಳು ಸಹ ಉದ್ಭವಿಸುತ್ತಿವೆ. ಇದೆಲ್ಲದರ ಮಧ್ಯೆ, ಆರೋಗ್ಯದ ಬಗ್ಗೆ ಗಮನಹರಿಸಿರುವ ನಿತೀಶ್ ಕುಮಾರ್, ಸಿಎಂ ಹುದ್ದೆಯನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net