ಬಿಹಾರ ವಿಧಾನಸಭಾ ಚುನಾವಣೆ: ಮುನ್ನಡೆಯಲ್ಲಿ ಮ್ಯಾಜಿಕ್​ ನಂಬರ್​ ದಾಟಿದ ಎನ್​ಡಿಎ! NDA

ಜೆಡಿಯು ನಾಯಕ ನಿತೀಶ್​ ಕುಮಾರ್​ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​
ಜೆಡಿಯು ನಾಯಕ ನಿತೀಶ್​ ಕುಮಾರ್​ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​
Published on
ಪಟನಾ: ಬಿಹಾರ ವಿಧಾನಸಭಾ ಚುನಾವಣೆಯ ಮತಎಣಿಕೆಯ ಮೇಲೆ ದೇಶದ ಚಿತ್ತ ನೆಟ್ಟಿದೆ. ಬಿಹಾರದ ಗದ್ದುಗೆ ಯಾರು ಏರಲಿದ್ದಾರೆ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಸದ್ಯ ಮತಎಣಿಕೆ ಭರದಿಂದ ಸಾಗಿದ್ದು, ಆಡಳಿತಾರೂ ಎನ್​ಡಿಎ ( NDA ) 142 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆಯೊಂದಿಗೆ ಮ್ಯಾಜಿಕ್​ ನಂಬರ್​ ಅನ್ನು ದಾಟಿದೆ. ಮಹಾಘಟ್​ಬಂಧನ್​ ಕೂಡ ಎನ್​ಡಿಎಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ.
ಬೆಳಗ್ಗೆ 9.28 ರ ಹೊತ್ತಿಗೆ, ಬಿಜೆಪಿ ನೇತೃತ್ವದ ಎನ್‌ಡಿಎ 122 ಸ್ಥಾನಗಳ ಮ್ಯಾಜಿಕ್​ ನಂಬರ್​ ಅನ್ನು ದಾಟಿದೆ. ಪ್ರಸ್ತುತ 142 ಸ್ಥಾನಗಳಲ್ಲಿ ಎನ್​ಡಿಎ ಮುನ್ನಡೆ ಸಾಧಿಸಿದೆ. ಇನ್ನು ಇದೇ ಸಂದರ್ಭದಲ್ಲಿ ಆರ್‌ಜೆಡಿ 66 ಸ್ಥಾನಗಳೊಂದಿಗೆ ಮಹಾಘಟಬಂಧನ್‌ನಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಕೇವಲ 18 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟಾರೆ, ಮಹಾಘಟ್​ಬಂಧನ್​ 92 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಎನ್​ಡಿಎಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ.
ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ರಾಘೋಪುರ ವಿಧಾನಸಭೆಯಲ್ಲಿ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಗೆ ಪಾದಾರ್ಪಣೆ ಮಾಡುತ್ತಿರುವ ಗಾಯಕಿ ಮೈಥಿಲಿ ಠಾಕೂರ್ ಅಲಿನಗರದಲ್ಲಿ ಮುನ್ನಡೆಯಲ್ಲಿದ್ದಾರೆ.
243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ನವೆಂಬರ್ 6ರಂದು ಮೊದಲ ಹಂತದಲ್ಲಿ 121 ಮತ್ತು ನವೆಂಬರ್ 11ರಂದು ಎರಡನೇ ಹಂತದಲ್ಲಿ 122 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಎರಡೂ ಹಂತಗಳೂ ಸೇರಿ ದಾಖಲೆಯ 67.13 ರಷ್ಟು ಮತದಾನ ನಡೆದಿದೆ. 2,616 ಅಭ್ಯರ್ಥಿಗಳ ಭವಿಷ್ಯವನ್ನು ಮತಯಂತ್ರದಲ್ಲಿ ದಾಖಲಾಗಿದ್ದು, ಇಂದು ಭವಿಷ್ಯ ನಿರ್ಧಾರವಾಗಲಿದೆ.
39 ಜಿಲ್ಲೆಗಳಲ್ಲಿ 42 ಮತ ಎಣಿಕೆ ಕೇಂದ್ರಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಕೇಂದ್ರ ಸಶಸ್ತ್ರ ಅರೆಸೈನಿಕ ಪಡೆಗಳನ್ನು ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net