ನವದೆಹಲಿ: ದೇಶದ ಜೇಮ್ಸ್ ಬಾಂಡ್ ಎಂದೇ ಖ್ಯಾತಿಗಳಿಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು, ಕುಟುಂಬ ಮತ್ತು ಇತರೆ ದೇಶದ ಜನರೊಟ್ಟಿಗೆ ಮಾತನಾಡುವುದು ಬಿಟ್ಟು, ಮತ್ಯಾವುದಕ್ಕೂ ತಾವು ಮೊಬೈಲ್ ಮತ್ತು ಇಂಟರ್ನೆಟ್ ಬಳಸುವುದಿಲ್ಲ ಎಂದು ಹೇಳಿದ್ದಾರೆ.
ಶನಿವಾರ(ಜ. 10) ನಡೆದ ವಿಕ್ಷಿತ್ ಭಾರತ್ ಯುವ ನಾಯಕರ ಸಂವಾದ 2026ರ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ್ದು, ಈ ವೇಳೆ ಸಭಾಂಗಣದಲ್ಲಿದ ವಿದ್ಯಾರ್ಥಿಗಳು ನೀವು ಇಂಟರ್ನೆಟ್, ಮೊಬೈಲ್ ಬಳಸುವುದಿಲ್ಲ ಎಂಬ ವಿಚಾರದ ಬಗ್ಗೆ ಅದು ನಿಜವೇ ಎಂದು ಕೇಳಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಹೌದು ನಾನು ಇಂಟರ್ನೆಟ್ ಬಳಸಲ್ಲ ಎಂಬುದು ನಿಜ. ನನ್ನ ಕುಟುಂಬದ ವಿಷಯ ಮತ್ತು ವಿದೇಶಿ ನಾಯಕರೊಂದಿಗೆ ಮಾತನಾಡುವುದನ್ನು ಹೊರತುಪಡಿಸಿ ಮೊಬೈಲ್ ಬಳಸಲ್ಲ. ಅದು ನನ್ನ ಕೆಲಸಕ್ಕೆ ಅವಶ್ಯಕ. ಸಂವಹನಕ್ಕೆ ಇನ್ನೂ ಹಲವು ಮಾರ್ಗಗಳಿವೆ. ಜನರಿಗೆ ತಿಳಿದಿಲ್ಲದ ಕೆಲವು ಹೆಚ್ಚುವರಿ ವಿಧಾನಗಳನ್ನು ವ್ಯವಸ್ಥೆಯಿದೆ ಎಂದು ತಿಳಿಸಿದ್ದಾರೆ.
ಅಜಿತ್ ದೋವಲ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಈ ಹುದ್ದೆಯನ್ನು ಅಲಂಕರಿಸಿದ ಐದನೇ ವ್ಯಕ್ತಿ. ಕೇರಳ ಕೇಡರ್‌ನ ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಅವರು, ದಶಕಗಳ ಕಾಲ ಗುಪ್ತಚರ, ಆಂತರಿಕ ಭದ್ರತೆ ಮತ್ತು ಭಯೋತ್ಪಾದನಾ ನಿಗ್ರಹ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಉತ್ತರಾಖಂಡ್ನಲ್ಲಿ 1945ರಲ್ಲಿ ಜನಸಿದ ದೋವಲ್, 1968ರಲ್ಲಿ ಐಪಿಎಸ್ ಅಧಿಕಾರಿಯಾದರು. ತಮ್ಮ ವೃತ್ತಿಜೀವನದುದ್ದಕ್ಕೂ, ಮಿಜೋರಾಂ, ಪಂಜಾಬ್ ಹಾಗೂ ಈಶಾನ್ಯದಲ್ಲಿ ಬಂಡಾಯ ಕಾರ್ಯಾಚರಣೆಗಳಲ್ಲಿ ವ್ಯಾಪಕವಾಗಿ ಕೆಲಸ ಮಾಡಿರುವ ಅವರ ಶೌರ್ಯಕ್ಕಾಗಿ ಕೀರ್ತಿ ಚಕ್ರ ಪ್ರಶಸ್ತಿಯನ್ನು ಪಡೆದಿದ್ದಾರೆ (ಏಜೆನ್ಸೀಸ್).