ಮಾಜಿ ಪ್ರಧಾನಿ ಪುತ್ರನಿಗೆ 7.8 ಕೋಟಿ ರೂ. ಧೋಖಾ! ವಾಟ್ಸ್​ಆ್ಯಪ್​ ಮೆಸೇಜ್​, ಫೇಕ್​ ಅಕೌಂಟ್​ ಬಯಲು

ಮಾಜಿ ಪ್ರಧಾನಿಯ ಪುತ್ರನಿಗೆ ಸೈಬರ್ ವಂಚನೆ
ಮಾಜಿ ಪ್ರಧಾನಿಯ ಪುತ್ರನಿಗೆ ಸೈಬರ್ ವಂಚನೆ
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್ ಅವರ ಪುತ್ರನಿಗೆ ಧೋಖಾ
  • ಸೈಬರ್​ ಕ್ರಿಮಿನಲ್​ಗಳಿಂದ 7.8 ಕೋಟಿ ರೂ. ವಂಚನೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೈಬರ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್ ಅವರ ಪುತ್ರನಿಂದ ಸೈಬರ್​ ಕ್ರಿಮಿನಲ್​ಗಳು ಬರೋಬ್ಬರಿ 7.8 ಕೋಟಿ ರೂ. ಬಾಚಿಕೊಂಡಿದ್ದಾರೆ.
ಮಾಜಿ ರಾಜ್ಯಸಭಾ ಸದಸ್ಯ ನರೇಶ್ ಕುಮಾರ್ ಗುಜ್ರಾಲ್ ಅವರ ಸಿಬ್ಬಂದಿಯಿಂದ 7.80 ಕೋಟಿ ರೂ. ಹಣವನ್ನು ವರ್ಗಾಯಿಸಿಕೊಂಡಿರುವ ಖದೀಮರು, ಯಾವುದೇ ಬೆದರಿಕೆ ಅಥವಾ ಡಿಜಿಟಲ್ ಅರೆಸ್ಟ್​ ಮಾಡದೆ, ಕೇವಲ ನರೇಶ್​ ಅವರದ್ದೇ ಒಂದು ಫೋಟೋ ಮತ್ತು ನಕಲಿ ವ್ಯಾಟ್ಸ್​ಆ್ಯಪ್​ ಖಾತೆ ಮೂಲಕ ಹಣವನ್ನು ದೋಚಿದ್ದಾರೆ. ಈ ಘಟನೆಯ ಬೆನ್ನಲ್ಲೇ ದೆಹಲಿ ಪೊಲೀಸರು ಎಫ್ಐಆರ್​ ದಾಖಲಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸೈಬರ್ ಅಪರಾಧಿಗಳು ಈ ಹಗರಣವನ್ನು ಬಹಳ ಸಲೀಸಾಗಿ ಮಾಡಿ ಮುಗಿಸಿದ್ದಾರೆ. ವಂಚಕರು ನುಂಗಿದ ಹಣದ ಪೈಕಿ ಸದ್ಯ 4 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ತನಿಖೆಯ ಸಮಯದಲ್ಲಿ ಬಹಿರಂಗವಾದ ವಿವರಗಳನ್ನು ಗಮನಿಸಿದರೆ, ಆರೋಪಿಗಳು ನರೇಶ್ ಗುಜ್ರಾಲ್ ಅವರ ಫೋಟೋವನ್ನು ಬಳಸಿಕೊಂಡು ವ್ಯಾಟ್ಸ್​ಆ್ಯಪ್​ನಲ್ಲಿ ನಕಲಿ ಖಾತೆಯನ್ನು ಕ್ರಿಯೆಟ್​ ಮಾಡಿದ್ದರು. ಇದರ ಮುಖಾಂತರ, ಅವರ ಸಿಬ್ಬಂದಿಯನ್ನು ತಾನೇ ಆ ರಾಜಕಾರಣಿ ಎಂದು ನಂಬಿಸಿ, ಕೋಟಿಗಟ್ಟಲೇ ಹಣವನ್ನು ಟ್ರಾನ್ಸ್​ಫರ್​ ಮಾಡಿಸಿಕೊಂಡಿದ್ದಾರೆ.
ನರೇಶ್​ ಅವರನ್ನೇ ಹೋಲುವ ಫೇಕ್ ಅಕೌಂಟ್​ ರಚಿಸಿ, ಅದರಿಂದ ಆರ್‌ಟಿಜಿಎಸ್ ಮೂಲಕ ನಾನು ಕಳುಹಿಸುವ ಬ್ಯಾಂಕ್ ಖಾತೆಗೆ ಈಗಲೇ ಹಣವನ್ನು ವರ್ಗಾಯಿಸಲು ಸೂಚಿಸಲಾಗಿದೆ. ಇದನ್ನು ನೋಡಿದ ಸಿಬ್ಬಂದಿ, ನಮ್ಮ ಸರ್​ ಅಲ್ಲವೇ ಎಂದು ಹಿಂದೆ-ಮುಂದೆ ಯೋಚಿಸದೆ, ಕ್ಷಣಮಾತ್ರದಲ್ಲಿ ಕೋಟ್ಯಂತರ ರೂ. ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ.
ದೂರು ನೀಡಿರುವ ನರೇಶ್ ಗುಜ್ರಾಲ್, ಅಂತಹ ಯಾವುದೇ ಸೂಚನೆಗಳನ್ನು ನಾನು ಕೊಟ್ಟಿಲ್ಲ. ಕುಟುಂಬದ ಸದಸ್ಯರು ಸೈಬರ್ ವಂಚನೆಗೆ ಸಿಲುಕಿದ್ದೇವೆ ಎಂದರು. ಈ ಘಟನೆಯ ಬಗ್ಗೆ ನರೇಶ್ ಅವರ ಪುತ್ರಿ ದೀಕ್ಷಾ ಗುಜ್ರಾಲ್, ರಾಷ್ಟ್ರೀಯ ಸೈಬರ್ ವಂಚನೆ ಸಹಾಯವಾಣಿ ಸಂಖ್ಯೆ 1930ಗೆ ಮಾಹಿತಿ ನೀಡಿ, ದೂರು ಸಲ್ಲಿಸಿದರು. ಅದೇ ರೀತಿ, ಇ-ಎಫ್‌ಐಆರ್ ಸಹ ದಾಖಲಾಗಿದೆ. ಮಾಹಿತಿ ಪಡೆದ ಸೈಬರ್ ಅಪರಾಧ ಅಧಿಕಾರಿಗಳು ತಕ್ಷಣಕ್ಕೆ ಪ್ರತಿಕ್ರಿಯಿಸಿ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಹಣ ವರ್ಗಾವಣೆಯನ್ನು ಪತ್ತೆಹಚ್ಚಿದ್ದಾರೆ.
ಹಣ ಯಾವ ಖಾತೆಗಳಿಗೆ ಹೋಗಿದೆ? ಈ ವಂಚನೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ನಕಲಿ ವಾಟ್ಸಾಪ್ ಖಾತೆ ಎಲ್ಲಿಂದ ಬಂತು? ಎಂಬ ಸಮಗ್ರ ತನಿಖೆ ಮುಂದುವರೆದಿದೆ. ವಂಚಕರನ್ನು ಗುರುತಿಸಲು ಮತ್ತು ಹಣವನ್ನು ಪೂರ್ತಿಯಾಗಿ ವಾಪಾಸ್​ ಪಡೆಯಲು ಅಧಿಕಾರಿಗಳು ಜಾಲ ಬೆನ್ನತ್ತಿದ್ದಾರೆ. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನರೇಶ್ ಗುಜ್ರಾಲ್, ಶಿರೋಮಣಿ ಅಕಾಲಿ ದಳ ಪಕ್ಷದ ಹಿರಿಯ ನಾಯಕ.
2007ರಿಂದ 2022 ರವರೆಗೆ ಪಂಜಾಬ್ ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. 2004ರ ಲೋಕಸಭಾ ಚುನಾವಣೆಯಲ್ಲಿ ಜಲಂಧರ್ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ, ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ನರೇಶ್ ಗುಜ್ರಾಲ್ ಭಾರತದ ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್ ಅವರ ಪುತ್ರನಾಗಿದ್ದು, ​ಇಂದರ್ ಕುಮಾರ್ ಗುಜ್ರಾಲ್ 1997ರಿಂದ 1998 ರವರೆಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net