3ನೇ ಅವಧಿಯ ಮೆಟ್ಟಿಲು: ನೆಹರು ದಾಖಲೆ ಹಿಂದಿಕ್ಕಲಿರುವ ನರೇಂದ್ರ ಮೋದಿ!

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on

ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿ, ಇಂದಿಗೆ ಎರಡು ವರ್ಷ (ಜೂನ್ 9) ಪೂರ್ಣಗೊಂಡಿದೆ. ಈ ಮೂಲಕ ಮೋದಿ ಸರ್ಕಾರ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿದ್ದು, 13ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. 

ಎರಡನೇ ಅವಧಿಯಲ್ಲಿ ಕೋವಿಡ್ ಬಿಕ್ಕಟ್ಟು ಮತ್ತು ಅದರಿಂದ ಸೃಷ್ಟಿಯಾದ ಆರ್ಥಿಕ ತಲ್ಲಣವನ್ನು ಯಶಸ್ವಿಯಾಗಿ ಎದುರಿಸಿದ್ದ ಸರ್ಕಾರ, ಮೂರನೇ ಅವಧಿಯಲ್ಲಿ ಮಧ್ಯಪ್ರಾಚ್ಯ ಸಂಘರ್ಷ ಸೃಷ್ಟಿಸಿರುವ ಸವಾಲುಗಳೊಂದಿಗೆ ಹೋರಾಡುತ್ತಿದೆ. ಕಳೆದ 12 ವರ್ಷಗಳಲ್ಲಿ ಅಭಿವೃದ್ಧಿ, ಆಡಳಿತದ ವಿಷಯದಲ್ಲಿ ಮೋದಿ ಸರ್ಕಾರ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಮಾತ್ರವಲ್ಲ, ದೇಶವನ್ನು ಅತಿ ದೀರ್ಘಾವಧಿಗೆ ಆಳಿದ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪ್ರಧಾನಿ ನರೇಂದ್ರ ಮೋದಿ ನಾಳೆ (ಜೂನ್ 10) ಪಾತ್ರರಾಗಲಿದ್ದಾರೆ. 2029ರ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಮುಂಬರುವ ಮೂರು ವರ್ಷಗಳಲ್ಲಿ ಸರ್ಕಾರದ ಹಾದಿ ಹೇಗಿರಲಿದೆ ಎಂಬುದು ಕುತೂಹಲಕರ.

ಕಳೆದೊಂದು ದಶಕದಲ್ಲಿ ಭಾರತ ಬದಲಾಗಿದೆ ಮತ್ತು ಅಭಿವೃದ್ಧಿಯಲ್ಲಿ ವೇಗದ ಹೆಜ್ಜೆಗಳನ್ನು ಇರಿಸುತ್ತಿದೆ ಎಂಬುದನ್ನು ಜಾಗತಿಕ ವಲಯವೂ ಒಪ್ಪಿಕೊಂಡು, ಭಾರತದ ಜತೆಗಿನ ಸ್ನೇಹ ಸಂಬಂಧವನ್ನು ಬಲಗೊಳಿಸುತ್ತಿದೆ. ಹೌದು, ಕಳೆದ ಹನ್ನೆರಡು ವರ್ಷಗಳಲ್ಲಿ (2014ರಿಂದ 2026ರವರೆಗೆ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಆರ್ಥಿಕ, ಸಾಮಾಜಿಕ, ಮೂಲಸೌಕರ್ಯ ಮತ್ತು ವಿದೇಶಾಂಗ ನೀತಿಗಳಲ್ಲಿ ಹಲವು ಪ್ರಮುಖ ಬದಲಾವಣೆ ಹಾಗೂ ಸಾಧನೆಗಳನ್ನು ಮಾಡಿದೆ. 

ಮೋದಿ ಅವರ 12 ವರ್ಷದ ಅಧಿಕಾರಾವಧಿಯಲ್ಲಿ, ಉನ್ನತ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ಭಾರತವು ಗಮನಾರ್ಹ ವಿಸ್ತರಣೆಯನ್ನು ಕಂಡಿದೆ. 2014 ಮತ್ತು 2026ರ ನಡುವೆ ಐಐಟಿಗಳ ಸಂಖ್ಯೆ 16 ರಿಂದ 23ಕ್ಕೆ, ಐಐಎಂಗಳು 13 ರಿಂದ 21ಕ್ಕೆ ಮತ್ತು ಏಮ್ಸ್​ ಸಂಸ್ಥೆಗಳು 7 ರಿಂದ 23ಕ್ಕೆ ಏರಿಕೆಯಾಗಿವೆ. ದೇಶಾದ್ಯಂತ 50,000 ಕಿಲೋಮೀಟರ್​ಗಿಂತಲೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ವಿುಸಲಾಗಿದೆ. ಸೆಮಿ-ಹೈಸ್ಪೀಡ್ ‘ವಂದೇ ಭಾರತ್’ ರೈಲುಗಳ ಸಂಚಾರ ಮತ್ತು ರೈಲ್ವೆ ನಿಲ್ದಾಣಗಳ ಆಧುನೀಕರಣ ವೇಗವಾಗಿ ನಡೆದಿದೆ.

ಮೋದಿ ಪ್ರಮಾಣವಚನ

  • ಮೊದಲ ಬಾರಿ 2014ರ ಮೇ 26
  • ಎರಡನೇ ಬಾರಿ 2019ರ ಮೇ 30
  • ಮೂರನೇ ಬಾರಿ 2024ರ ಜೂನ್ 9

ಪ್ರಮುಖ ಸಾಂವಿಧಾನಿಕ ನಿರ್ಧಾರಗಳು

ಕಲಂ 370 ರದ್ದು: ಜಮ್ಮು ಮತ್ತು ಕಾಶ್ಮೀರಕ್ಕೆ ವಿಧಿ 370ರ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಆ ರಾಜ್ಯವನ್ನು ದೇಶದ ಮುಖ್ಯವಾಹಿನಿಗೆ ತರಲಾಯಿತು.

ಬ್ರಿಟಿಷ್ ಕಾಲದ ಕಾನೂನುಗಳ ಬದಲಾವಣೆ: ಐಪಿಸಿ, ಸಿಆರ್​ಪಿಸಿ ಮುಂತಾದ 150 ವರ್ಷಗಳಷ್ಟು ಹಳೆಯದಾದ ಬ್ರಿಟಿಷ್ ಕಾಲದ ಅಪರಾಧ ಕಾನೂನುಗಳನ್ನು ಬದಲಾಯಿಸಿ, ಭಾರತೀಯ ನ್ಯಾಯ ಸಂಹಿತೆ (ಬಿಎನ್​ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್​ಎಸ್​ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್​ಎ)ಗಳನ್ನು ಜಾರಿಗೆ ತರಲಾಗಿದೆ.

ತ್ರಿವಳಿ ತಲಾಖ್ ನಿಷೇಧ: ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ತ್ರಿವಳಿ ತಲಾಖ್ ಪದ್ಧತಿಯನ್ನು ಕಾನೂನುಬಾಹಿರಗೊಳಿಸಲಾಯಿತು.

ಬದಲಾವಣೆ ಸಾಕಾರಗೊಳಿಸಿದ ಯೋಜನೆಗಳು

ಪ್ರಧಾನಮಂತ್ರಿ ಜನಧನ್ ಯೋಜನೆ (ಪಿಎಂಜೆಡಿವೈ)

ಉದ್ದೇಶ: ಬ್ಯಾಂಕ್ ಖಾತೆ ಇಲ್ಲದ ಪ್ರತಿಯೊಬ್ಬರಿಗೂ ಖಾತೆ ತೆರೆಯುವುದು.

ಪರಿಣಾಮ: ದೇಶದಾದ್ಯಂತ 58 ಕೋಟಿಗೂ ಅಧಿಕ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದರಿಂದಾಗಿ ಸರ್ಕಾರದ ಸಬ್ಸಿಡಿಗಳು ಮತ್ತು ಆರ್ಥಿಕ ನೆರವು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರ ಖಾತೆಗೆ ತಲುಪುತ್ತಿವೆ. ಇದು ಭ್ರಷ್ಟಾಚಾರಕ್ಕೆ ದೊಡ್ಡ ಮಟ್ಟದಲ್ಲಿ ಕಡಿವಾಣ ಹಾಕಿದೆ.

ಡಿಜಿಟಲ್ ಇಂಡಿಯಾ ಮತ್ತು ಯುಪಿಐ

ಉದ್ದೇಶ: ದೇಶವನ್ನು ತಂತ್ರಜ್ಞಾನದ ಮೂಲಕ ಸಶಕ್ತಗೊಳಿಸುವುದು ಮತ್ತು ನಗದು ರಹಿತ ಆರ್ಥಿಕತೆಯನ್ನು ಉತ್ತೇಜಿಸುವುದು.

ಪರಿಣಾಮ: ಜಾಗತಿಕ ಮಟ್ಟದಲ್ಲೇ ಭಾರತ ಡಿಜಿಟಲ್ ಪಾವತಿಯಲ್ಲಿ ನಂಬರ್ 1 ಸ್ಥಾನಕ್ಕೇರಿದೆ. ರಸ್ತೆಬದಿಯ ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಮಾಲ್​ಗಳವರೆಗೆ ಶೇಕಡ 40ಕ್ಕೂ ಹೆಚ್ಚು ಜಾಗತಿಕ ನೈಜ-ಸಮಯದ (ರಿಯಲ್ ಟೈಮ್ ಡಿಜಿಟಲ್ ವಹಿವಾಟುಗಳು ಈಗ ಭಾರತದಲ್ಲೇ ನಡೆಯುತ್ತಿವೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ

ಉದ್ದೇಶ: ರೈತರಿಗೆ ನೇರ ಆರ್ಥಿಕ ನೆರವು ನೀಡುವುದು.

ಪರಿಣಾಮ: ದೇಶದ 11 ಕೋಟಿಗೂ ಹೆಚ್ಚು ರೈತರಿಗೆ ವಾರ್ಷಿಕ 6,000 ರೂ. ಹಣವನ್ನು ಮೂರು ಕಂತುಗಳಲ್ಲಿ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ಬಿತ್ತನೆ ಬೀಜ, ಗೊಬ್ಬರ ಖರೀದಿಸಲು ಸಣ್ಣ ರೈತರಿಗೆ ಇದು ದೊಡ್ಡ ಆಸರೆಯಾಗಿದೆ.

ಜಲ ಜೀವನ್ ಮಿಷನ್

ಉದ್ದೇಶ: ಪ್ರತಿ ಗ್ರಾಮೀಣ ಮನೆಗೂ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವುದು.

ಪರಿಣಾಮ: 2019ರಲ್ಲಿ ಕೇವಲ ಶೇಕಡ 17ರಷ್ಟಿದ್ದ ಗ್ರಾಮೀಣ ನಲ್ಲಿ ನೀರಿನ ಸಂಪರ್ಕ, ಇತ್ತೀಚಿನ ವರ್ಷಗಳಲ್ಲಿ ಶೇ.75ಕ್ಕೂ ಹೆಚ್ಚು ಮನೆಗಳನ್ನು ತಲುಪಿದೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರ ಶ್ರಮ ಕಡಿಮೆಯಾಗಿದ್ದು, ಕಲುಷಿತ ನೀರಿನಿಂದ ಬರುವ ಕಾಯಿಲೆಗಳು ನಿಯಂತ್ರಣಕ್ಕೆ ಬಂದಿವೆ.

ಸ್ವಚ್ಛ ಭಾರತ ಅಭಿಯಾನ

ಉದ್ದೇಶ: ದೇಶವನ್ನು ಬಯಲು ಶೌಚ ಮುಕ್ತಗೊಳಿಸುವುದು ಮತ್ತು ಸ್ವಚ್ಛತೆ ಕಾಪಾಡುವುದು.

ಪರಿಣಾಮ: ದೇಶಾದ್ಯಂತ 11 ಕೋಟಿಗೂ ಹೆಚ್ಚು ಗ್ರಾಮೀಣ ಶೌಚಗೃಹಗಳನ್ನು ನಿರ್ವಿುಸಲಾಗಿದೆ. ಇದರಿಂದಾಗಿ ಭಾರತವು ‘ಬಯಲು ಶೌಚ ಮುಕ್ತ’ ದೇಶವಾಗಿ ಹೊರಹೊಮ್ಮಿದೆ. ಇದು ಪ್ರಮುಖವಾಗಿ ಗ್ರಾಮೀಣ ಮಹಿಳೆಯರ ಸುರಕ್ಷತೆ ಮತ್ತು ಘನತೆಯನ್ನು ಹೆಚ್ಚಿಸಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ

ಉದ್ದೇಶ: ‘ಎಲ್ಲರಿಗೂ ಮನೆ’ ಯೋಜನೆಯಡಿ ಬಡವರಿಗೆ ಪಕ್ಕಾ ಮನೆ ನಿರ್ವಿುಸಿಕೊಡುವುದು.

ಪರಿಣಾಮ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಒಟ್ಟಾಗಿ 4 ಕೋಟಿಗೂ ಹೆಚ್ಚು ಸುಸಜ್ಜಿತ ಮನೆಗಳನ್ನು ನಿರ್ವಿುಸಿಕೊಡಲಾಗಿದೆ. ಈ ಮನೆಗಳ ಮಾಲೀಕತ್ವವನ್ನು ಮಹಿಳೆಯರ ಹೆಸರಿಗೆ ನೀಡಿರುವುದರಿಂದ ಮಹಿಳಾ ಸಬಲೀಕರಣಕ್ಕೂ ಇದು ಕಾರಣವಾಗಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ

ಉದ್ದೇಶ: ಬಡ ಮಹಿಳೆಯರಿಗೆ ಉಚಿತ ಎಲ್​ಪಿಜಿ ಗ್ಯಾಸ್ ಸಂಪರ್ಕ ನೀಡುವುದು.

ಪರಿಣಾಮ: 10 ಕೋಟಿಗೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಒದಗಿಸಲಾಗಿದೆ. ಒಲೆ ಹೊಗೆಯಿಂದಾಗಿ ಮಹಿಳೆಯರಿಗೆ ಬರುತ್ತಿದ್ದ ಶ್ವಾಸಕೋಶದ ಕಾಯಿಲೆಗಳು ತಪ್ಪಿವೆ ಮತ್ತು ಪರಿಸರ ಮಾಲಿನ್ಯವೂ ಕಡಿಮೆಯಾಗಿದೆ.

ನಮೋ ದಾಖಲೆಗಳು

  • ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ಅತಿ ಹೆಚ್ಚು ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಜೂನ್ 10ರಂದು ಪಾತ್ರವಾಗಲಿದ್ದಾರೆ. ಈ ಮೂಲಕ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ದಾಖಲೆಯನ್ನು ಹಿಂದಿಕ್ಕಲಿದ್ದಾರೆ. 2014ರ ಮೇ 26ರಂದು ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2026ರ ಜೂನ್ 10ರಂದು ಅವರು ಪ್ರಧಾನಿಯಾಗಿ 4,399 ಸತತ ದಿನಗಳನ್ನು ಪೂರೈಸಲಿದ್ದಾರೆ. ನೆಹರು 1952ರ ಮೇ 13ರಂದು ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರು 1964ರ ಮೇ 27ರಂದು ನಿಧನರಾಗುವವರೆಗೆ 4398 ದಿನಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದರು.
  • ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಅತಿ ದೀರ್ಘಾವಧಿಯ ನಿರಂತರ ಅಧಿಕಾರಾವಧಿಯನ್ನು (4,077 ದಿನಗಳು) ಪ್ರಧಾನಿ ನರೇಂದ್ರ ಮೋದಿ 2025ರ ಜುಲೈ 25ರಂದು ಹಿಂದಿಕ್ಕಿದ್ದಾರೆ.
  • ಸತತ ಎರಡು ಬಾರಿ ಪೂರ್ಣ ಅವಧಿಯನ್ನು ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಪ್ರಧಾನಿ ಮತ್ತು ಸತತ ಮೂರು ಲೋಕಸಭಾ ಚುನಾವಣೆಗಳನ್ನು ಗೆದ್ದ ನೆಹರು ನಂತರದ ಮೊದಲ ಪ್ರಧಾನಿ ಕೂಡ ಮೋದಿ ಆಗಿದ್ದಾರೆ.
  • ಈ ವರ್ಷದ ಆರಂಭದಲ್ಲಿ, ಗುಜರಾತ್ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿ ಮೋದಿ ಅವರ ಸಂಯೋಜಿತ ಅಧಿಕಾರಾವಧಿಯು 8,930 ದಿನಗಳನ್ನು ದಾಟಿದಾಗ, ಅವರು ಭಾರತದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಸರ್ಕಾರದ ಮುಖ್ಯಸ್ಥರು ಎಂಬ ದಾಖಲೆ ಬರೆದರು.

ಆಯುಷ್ಮಾನ್ ಭಾರತ್

ಉದ್ದೇಶ: ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ಆರೋಗ್ಯ ವಿಮೆ ಒದಗಿಸುವುದು.

ಪರಿಣಾಮ: ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಎನಿಸಿಕೊಂಡಿರುವ ಇದರಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ -ಠಿ;5 ಲಕ್ಷದವರೆಗೆ ಉಚಿತ ನಗದು ರಹಿತ ಚಿಕಿತ್ಸೆ ಸಿಗುತ್ತಿದೆ. ಇದುವರೆಗೆ 7 ಕೋಟಿಗೂ ಹೆಚ್ಚು ಜನ ಆಸ್ಪತ್ರೆ ವೆಚ್ಚದಿಂದ ಮುಕ್ತಿ ಪಡೆದಿದ್ದಾರೆ. ಇತ್ತೀಚೆಗೆ ಇದನ್ನು 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೂ ವಿಸ್ತರಿಸಲಾಗಿದೆ.

ಪ್ರಧಾನಮಂತ್ರಿ ಮುದ್ರಾ ಯೋಜನೆ

ಉದ್ದೇಶ: ಸಣ್ಣ ಉದ್ಯಮಿಗಳು ಮತ್ತು ಸ್ವಯಂ ಉದ್ಯೋಗ ಆಕಾಂಕ್ಷಿಗಳಿಗೆ ಗ್ಯಾರಂಟಿ ಇಲ್ಲದೆ ಸಾಲ ನೀಡುವುದು.

ಪರಿಣಾಮ: 10 ಲಕ್ಷ ರೂ.ವರೆಗೆ ನೀಡಲಾಗುವ ಈ ಸಾಲದ ಯೋಜನೆಯಡಿ 40 ಕೋಟಿಗೂ ಅಧಿಕ ಸಾಲಗಳನ್ನು ವಿತರಿಸಲಾಗಿದೆ. ವಿಶೇಷವೆಂದರೆ, ಇದರಲ್ಲಿ ಶೇ.70ರಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದು, ಸ್ಥಳೀಯ ಮಟ್ಟದಲ್ಲಿ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ.

ಮೇಕ್ ಇನ್ ಇಂಡಿಯಾ ಮತ್ತು ಪಿಎಲ್​ಐ ಯೋಜನೆ

ಉದ್ದೇಶ: ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು.

ಪರಿಣಾಮ: ಉತ್ಪಾದನೆ ಆಧಾರಿತ ಪೋ›ತ್ಸಾಹಕ (ಪಿಎಲ್​ಐ) ಯೋಜನೆಯಿಂದಾಗಿ ಭಾರತವು ಮೊಬೈಲ್ ಫೋನ್ ಉತ್ಪಾದನೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನಕ್ಕೇರಿದೆ (ಉದಾಹರಣೆಗೆ ಆಪಲ್ ಐಫೋನ್ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ಉತ್ಪಾದನೆಯಾಗುತ್ತಿದೆ). ರಕ್ಷಣಾ ಶಸ್ತ್ರಾಸ್ತ್ರಗಳ ದೇಶೀಯ ಉತ್ಪಾದನೆ ಮತ್ತು ರಫ್ತು ಕೂಡ ದಾಖಲೆ ಮಟ್ಟಕ್ಕೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net