ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ಚಿಕ್ಕ ಚಿಕ್ಕ ಹಳ್ಳಿಗಳನ್ನು ಒಳಗೊಂಡಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಒಂದು ಕಾಲದಲ್ಲಿ ಬಂಗಾಳದ ರಾಜಕೀಯವನ್ನು ವ್ಯಾಖ್ಯಾನಿಸಿದ ಚಳವಳಿಯ ಕೇಂದ್ರಬಿಂದುವಾಗಿತ್ತು. 2007ರಲ್ಲಿ ಭೂ ಸ್ವಾಧೀನದ ವಿರುದ್ಧ ನಡೆದ ಹೋರಾಟದಲ್ಲಿ 14 ಜನರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಇದರ ವಿರುದ್ಧ ಮಮತಾ ಬ್ಯಾನರ್ಜಿ ಹೋರಾಟ ನಡೆಸಿದ್ದು, ಅವರ ರಾಜಕೀಯ ಏಳಿಗೆಗೆ ಪ್ರಮುಖ ಕಾರಣವಾಗಿತ್ತು. 2011ರಿಂದ ಮುಖ್ಯಮಂತ್ರಿಯಾಗಿರುವ ದೀದಿ, ಕಳೆದ ಚುನಾವಣೆಯಲ್ಲಿ ತನ್ನ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ ವಿರುದ್ಧ ಸೋಲನುಭವಿಸಿದ್ದ ಕಾರಣ, ಈ ಬಾರಿ ಸುವೇಂದು ಆಪ್ತನನ್ನೇ ತಮ್ಮ ಪಕ್ಷದಿಂದ ಕಣಕ್ಕಿಳಿಸುವ ಮೂಲಕ ಹಿಂದಿನ ಚುನಾವಣೆಯಲ್ಲಾದ ಘಟನೆಗಳನ್ನು ಮರುಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ. ಸುವೇಂದು ಅಧಿಕಾರಿ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದು, ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದ್ದರೂ, ಶೇ. 50ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮುಸ್ಲಿಂ ಮತದಾರರ ತೀರ್ಮಾನ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.