ನೆಹರೂ ದಾಖಲೆ ಮುರಿದ ನಮೋ: 21ನೇ ಶತಮಾನ ನರೇಂದ್ರ ಮೋದಿಯವರದ್ದು: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಶ್ಲಾಘನೆ | CM Chandrababu Naidu

ನೆಹರೂ ದಾಖಲೆ ಮುರಿದ ನಮೋ: 21ನೇ ಶತಮಾನ ನರೇಂದ್ರ ಮೋದಿಯವರದ್ದು: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಶ್ಲಾಘನೆ
ನೆಹರೂ ದಾಖಲೆ ಮುರಿದ ನಮೋ: 21ನೇ ಶತಮಾನ ನರೇಂದ್ರ ಮೋದಿಯವರದ್ದು: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಶ್ಲಾಘನೆ
Published on
ನವದೆಹಲಿ: ಇಡೀ ಜಗತ್ತು ಪ್ರಸ್ತುತ ಯುದ್ಧ, ಆರ್ಥಿಕ ಮಂದಗತಿ ಮತ್ತು ತೈಲ ಬಿಕ್ಕಟ್ಟಿನಿಂದ ತಲ್ಲಣಗೊಂಡು ಕತ್ತಲೆಯಲ್ಲಿ ಮುಳುಗಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಿಂದಾಗಿ ಭಾರತ ಮಾತ್ರ ಅತ್ಯಂತ ಸುರಕ್ಷಿತ ಹಾಗೂ ಸ್ಥಿರವಾಗಿದೆ. ಈ 21ನೇ ಶತಮಾನ ಸಂಪೂರ್ಣವಾಗಿ ನರೇಂದ್ರ ಮೋದಿಯವರಿಗೆ ಸೇರಿದ್ದು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಎನ್‌ಡಿಎ ಪ್ರಮುಖ ಮಿತ್ರಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು(CM Chandrababu Naidu) ಬಣ್ಣಿಸಿದ್ದಾರೆ.
ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಬುಧವಾರ ನಡೆದ ಎನ್‌ಡಿಎ (NDA) ಮೈತ್ರಿಕೂಟದ ಐತಿಹಾಸಿಕ ಮಹಾ ಸಮಾವೇಶದಲ್ಲಿ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ಮೋದಿಯವರನ್ನು ಶ್ಲಾಘಿಸಿ ಧನ್ಯವಾದ ಅರ್ಪಿಸುವ ವಿಶೇಷ ನಿರ್ಣಯವನ್ನು ಮಂಡಿಸಿದರು. ನರೇಂದ್ರ ಮೋದಿ ಅವರು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ದಾಖಲೆಯನ್ನು ಮೀರಿಸಿ, ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ದಿನ ಸತತವಾಗಿ ಆಡಳಿತ ನಡೆಸಿದ ಪ್ರಧಾನಿ ಎಂಬ ಮೈಲಿಗಲ್ಲು ನೆಟ್ಟ ಐತಿಹಾಸಿಕ ದಿನದಂದೇ ಈ ಸಮಾವೇಶ ನಡೆದಿರುವುದು ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ವಿಶ್ವವೇ ತಲ್ಲಣಗೊಂಡರೂ ಭಾರತ ನಡುಗಲಿಲ್ಲ: ನಾಯ್ಡು ವಿಶ್ಲೇಷಣೆ

ಎನ್‌ಡಿಎ ನಾಯಕರ ಸಭೆಯಲ್ಲಿ ಜಾಗತಿಕ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಚಂದ್ರಬಾಬು ನಾಯ್ಡು, ಇಂದು ವಿಶ್ವದಾದ್ಯಂತ ಯುದ್ಧಗಳು ನಡೆಯುತ್ತಿವೆ, ಜಾಗತಿಕ ಮಾರುಕಟ್ಟೆಗಳು ಕುಸಿದಿವೆ ಮತ್ತು ಪ್ರಮುಖ ಆರ್ಥಿಕತೆಗಳು ಮಂದಗತಿಯಲ್ಲಿ ಸಾಗುತ್ತಿವೆ. ಇದೇ ವರ್ಷ ಹೊರ್ಮುಜ್ ಜಲಸಂಧಿಯಲ್ಲಿ ಉಂಟಾದ ಭೀಕರ ಮಿಲಿಟರಿ ಘರ್ಷಣೆಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಬರೋಬ್ಬರಿ 144 ಡಾಲರ್‌ಗೆ ಜಿಗಿದಿತ್ತು. ಭಾರತವು ತನ್ನ ಶೇ. 85 ರಷ್ಟು ಕಚ್ಚಾ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಇಂತಹ ಭೀಕರ ಪರಿಸ್ಥಿತಿಯಲ್ಲೂ ಭಾರತದಲ್ಲಿ ಹಣದುಬ್ಬರ ಕೇವಲ ಶೇ 3.5 ರಷ್ಟಿದೆ ಎಂದರೆ ಅದಕ್ಕೆ ಮೋದಿಯವರ ಅಪ್ರತಿಮ ಆಡಳಿತವೇ ಕಾರಣ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ನರೇಂದ್ರ ಮೋದಿ ಅವರು ನಮಗೆ ಲಂಗರು ಮತ್ತು ಹೊಸತನದ ಆವಿಷ್ಕಾರಕ ಎರಡೂ ಆಗಿದ್ದಾರೆ. ಕಳೆದ 25 ವರ್ಷಗಳಿಂದ (2001 ರ ಸಿಎಂ ಅವಧಿಯಿಂದ) ಅವರು ಸತತವಾಗಿ ಜನರ ನಿರೀಕ್ಷೆಗಳನ್ನು ಹೇಗೆ ಹುಸಿಗೊಳಿಸದೆ ಮುನ್ನಡೆಯುತ್ತಿದ್ದಾರೆ ಎಂದು ನಾನೇ ಹಲವು ಬಾರಿ ಆತ್ಮಾವಲೋಕನ ಮಾಡಿಕೊಂಡಿದ್ದೇನೆ. ದೇಶವೇ ಮೊದಲು ಎನ್ನುವ ಒಂದೇ ಒಂದು ಅಜೆಂಡಾ ಇಟ್ಟುಕೊಂಡು ಅವರು ಕೆಲಸ ಮಾಡುತ್ತಿದ್ದಾರೆ. ಇಷ್ಟು ವರ್ಷಗಳಾದರೂ ಮೋದಿ ಎಂದಿಗೂ ಸುಸ್ತಾಗಿರುವುದನ್ನು ನಾನು ನೋಡಿಯೇ ಇಲ್ಲ. ಅವರು ಸದಾ ಎನರ್ಜಿಟಿಕ್ ಆಗಿ ಇರ ಲಷ್ಟೇ ಅಲ್ಲ, ನಮ್ಮಂತಹವರಿಗೂ ಹೊಸ ಚೈತನ್ಯ ತುಂಬುತ್ತಾರೆ ಎಂದು ನಾಯ್ಡು ಹೇಳಿದ್ದಾರೆ.

ನೆಹರೂ ಅವರ 4,398 ದಿನಗಳ ದಾಖಲೆ ಧೂಳೀಪಟ!

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಯಶಸ್ವಿಯಾಗಿ 12 ವರ್ಷಗಳ ಆಡಳಿತ ಪೂರೈಸಿದ ಸಂಭ್ರಮ ಹಾಗೂ ಮೋದಿ ಸತತ ಸುದೀರ್ಘ ಅವಧಿಯ ಪ್ರಧಾನಿಯಾದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದ ಈ ಸಮಾವೇಶದಲ್ಲಿ ಎನ್‌ಡಿಎ ಆಡಳಿತವಿರುವ 22 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಭಾಗವಹಿಸಿದ್ದರು.
ಪ್ರಧಾನಿ ಮೋದಿ ಅವರು ಇಂದು ನೆಹರೂ ಅವರ ಹೆಸರಲ್ಲಿದ್ದ 4,398 ದಿನಗಳ ಸತತ ಆಡಳಿತದ ದಾಖಲೆಯನ್ನು ಮುರಿದು 4,399ನೇ ದಿನಕ್ಕೆ ಕಾಲಿಟ್ಟಿದ್ದಾರೆ. ನೆಹರೂ ಅವರು 1947 ರಿಂದ 1952 ರವರೆಗೆ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದರು, ಆದರೆ 1952 ರ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಅವರ ಚುನಾಯಿತ ಆಡಳಿತದ ದಿನಗಳನ್ನು ಲೆಕ್ಕ ಹಾಕಿದರೆ ಮೋದಿ ಈಗ ಅವರನ್ನೂ ಮೀರಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 14 ವರ್ಷ ಪ್ರಧಾನಿಯಾಗಿದ್ದರೂ ಅವರ ಆಡಳಿತಾವಧಿ ಸತತವಾಗಿರಲಿಲ್ಲ. ಹೀಗಾಗಿ ಸತತವಾಗಿ ಚುನಾಯಿತರಾದ ಸುದೀರ್ಘ ಅವಧಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

ಕೇಂದ್ರ ಸಂಪುಟದಿಂದ ಎದ್ದು ನಿಂತು ಗೌರವ

ಇದಕ್ಕೂ ಮುನ್ನ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಮೋದಿಯವರ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿ ವಿಶೇಷ ನಿರ್ಣಯವನ್ನು ಅಂಗೀಕರಿಸಲಾಯಿತು. ಮೋದಿ ಸಭೆಗೆ ಆಗಮಿಸುತ್ತಿದ್ದಂತೆ ಕೇಂದ್ರ ಸಚಿವರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದರು.
2047 ರ ವೇಳೆಗೆ ಭಾರತವನ್ನು ವಿಕಸಿತ ಭಾರತ ಹಾಗೂ ಜಗತ್ತಿನ ನಂಬರ್ ಒನ್ ಆರ್ಥಿಕ ಶಕ್ತಿಯನ್ನಾಗಿ ಮಾಡುವ ಮೋದಿಯವರ ಸಂಕಲ್ಪಕ್ಕೆ ಇಡೀ ಸಂಪುಟ ಮತ್ತು ಎನ್‌ಡಿಎ ಮಿತ್ರಪಕ್ಷಗಳು ಸಂಪೂರ್ಣ ಬೆಂಬಲ ಘೋಷಿಸಿವೆ. ಇದು ಭಾರತದ ಸುವರ್ಣ ಯುಗದ ಆರಂಭ, ಎಂದು ಚಂದ್ರಬಾಬು ನಾಯ್ಡು ಹೆಮ್ಮೆಯಿಂದ ಸಾರಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net