ಆತಂಕ ಸೃಷ್ಟಿಸಿದ ಮಿಥೋಸ್

ಎಐ ಚಿತ್ರ
ಎಐ ಚಿತ್ರ
Published on

ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ‘ಮಿಥೋಸ್’ ಎಂಬ ಹೊಸ ಬಿರುಗಾಳಿ ಎದ್ದಿದೆ. ಆಂಥ್ರೋಪಿಕ್ ಸಂಸ್ಥೆಯ ಈ ನೂತನ ಎಐ ಟೂಲ್ ಅತ್ಯಾಧುನಿಕ ಸೈಬರ್ ದಾಳಿಯ ಅಸ್ತ್ರವಾಗುವ ಸಾಧ್ಯತೆ ದಟ್ಟವಾಗಿದೆ. ಕ್ಷಣಾರ್ಧದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ರಕ್ಷಣಾ ಕವಚಗಳನ್ನು ಭೇದಿಸುವ ಮತ್ತು ಇಡೀ ನೆಟ್​ವರ್ಕ್ ಅನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಇದರ ಅಸಾಧಾರಣ ಸಾಮರ್ಥ್ಯ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಬ್ರಿಟನ್ ಮತ್ತು ಅಮೆರಿಕದ ತಜ್ಞರ ಪರೀಕ್ಷೆಗಳಲ್ಲಿ ಮಿಥೋಸ್ ತೋರಿದ ಹ್ಯಾಕಿಂಗ್ ವೇಗ ಮನುಷ್ಯನ ಸಾಮರ್ಥ್ಯವನ್ನು ಮೀರಿಸಿದೆ. ಒಂದೆಡೆ, ಇದು ದೋಷಗಳನ್ನು ಸರಿಪಡಿಸುವ ಮಿತ್ರನಂತೆ ಕಂಡರೂ, ಇನ್ನೊಂದೆಡೆ ಸೈಬರ್ ದಾಳಿ ಸಂಘಟಿಸುವ ಶತ್ರುವಿನಂತೆ ವರ್ತಿಸುತ್ತದೆ. ಈ ‘ಎರಡಲಗಿನ ಕತ್ತಿ’ಯ ಬಗ್ಗೆ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಶುರುವಾಗಿದೆ.

ಮಿಥೋಸ್ ಎಐ ಟೂಲ್ ಸೈಬರ್ ಭದ್ರತೆಯ ಎರಡು ಆಯಾಮಗಳಲ್ಲಿ ಪ್ರಬಲವಾಗಿ ಕೆಲಸ ಮಾಡಬಲ್ಲದು. ಇದನ್ನು ರಕ್ಷಕನಾಗಿ ಬಳಸಿದರೆ ಸಾಫ್ಟ್​ವೇರ್ ದೋಷಗಳನ್ನೆಲ್ಲ ಕೆಲವೇ ನಿಮಿಷಗಳಲ್ಲಿ ಸರಿಪಡಿಸಬಲ್ಲದು. ಅದೇ ಹ್ಯಾಕರ್ ಆಗಿ ಬಳಸಿದರೆ ಕಂಪ್ಯೂಟರ್ ಸಿಸ್ಟಮ್ಳ ಮೇಲೆ ದಾಳಿ ಮಾಡಿ ಅಲ್ಲೋಲಕಲ್ಲೋಲ ಸೃಷ್ಟಿಸಬಲ್ಲದು. ಆಂಥ್ರೋಪಿಕ್ ಸಂಸ್ಥೆಯ ಪ್ರಕಾರ, ಮಿಥೋಸ್ ವಿಶ್ವದ ಪ್ರತಿಯೊಂದು ಕ್ಷೇತ್ರದ ಪ್ರಮುಖ ಆಪರೇಟಿಂಗ್ ಸಿಸ್ಟಮ್ (ಒಎಸ್) ಮತ್ತು ವೆಬ್ ಬ್ರೌಸರ್​ಗಳಲ್ಲಿ ಗಂಭೀರವಾದ ಭದ್ರತಾ ದೋಷಗಳನ್ನು ಪತ್ತೆ ಹಚ್ಚಿಕೊಡಬಲ್ಲದು. ಮೂರು ದಶಕಗಳಿಂದ ಯಾರಿಗೂ ತಿಳಿಯದಂತೆ ಹುದುಗಿಹೋಗಿದ್ದ ಅಪಾಯಕಾರಿ ದೋಷಗಳನ್ನು ಕೂಡ ಇದು ಪತ್ತೆಹಚ್ಚಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಸೈಬರ್ ದಾಳಿ ಮಾಡುವಲ್ಲಿ ಈ ಹಿಂದೆ ಇದ್ದ ಓಪಸ್ 4.6 ಮಾದರಿ ವಿಫಲವಾಗಿತ್ತು. ಆದರೆ ಮಿಥೋಸ್, ದೋಷಗಳನ್ನು ಪತ್ತೆ ಹಚ್ಚುವುದು ಮಾತ್ರವಲ್ಲದೆ ಅವುಗಳನ್ನು ಬಳಸಿಕೊಂಡು ಸಿಸ್ಟಮ್ ಅನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವಲ್ಲಿ ಅಸಾಧಾರಣ ಯಶಸ್ಸು ಕಂಡಿದೆ.

ಕಳವಳಕ್ಕೆ ಕಾರಣಗಳೇನು?

ಮೊಜಿಲ್ಲಾ ಫೈರ್​ಫಾಕ್ಸ್​ನಂತಹ ಬ್ರೌಸರ್ ಎಂಜಿನ್​ಗಳ ಮೇಲೆ ದಾಳಿ ಮಾಡಿ, ಇಡೀ ಕಂಪ್ಯೂಟರ್ ಮೇಲೆ ನಿಯಂತ್ರಣ ಸಾಧಿಸುವ ‘ಶೆಲ್ ಎಕ್ಸ್​ಪ್ಲಾಯಿಟ್ಸ್’ ಪ್ರಕ್ರಿಯೆಯಲ್ಲಿ ಮಿಥೋಸ್ ಭಾರಿ ಯಶಸ್ಸು ಸಾಧಿಸಿದೆ. ಈ ತಂತ್ರಜ್ಞಾನ ದುಷ್ಕರ್ವಿುಗಳ ಕೈಗೆ ಸಿಕ್ಕರೆ, ಜಾಗತಿಕ ಮಟ್ಟದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಗ್ರಾಹಕರ ಮತ್ತು ಬ್ಯಾಂಕುಗಳ ವೈಯಕ್ತಿಕ ಡೇಟಾ ದುಷ್ಕರ್ವಿುಗಳ ಪಾಲಾಗುತ್ತದೆ. ರಾಷ್ಟ್ರೀಯ ಭದ್ರತೆಗೂ ಇದರಿಂದ ದೊಡ್ಡ ಅಪಾಯ ಉಂಟಾಗಬಹುದು. ಸರಳವಾಗಿ ಹೇಳುವುದಾದರೆ, ಮಿಥೋಸ್ ಕೇವಲ ಬುದ್ಧಿವಂತ ಭಾಷಾ ಮಾದರಿಯಾಗಿ ಉಳಿಯದೆ, ಒಂದು ಅತ್ಯಾಧುನಿಕ ಡಿಜಿಟಲ್ ಅಸ್ತ್ರವಾಗಿ ಮಾರ್ಪಟ್ಟಿದೆ. ಇದೇ ಕಾರಣಕ್ಕೆ ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳ ಸರ್ಕಾರಗಳು ಈಗ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.

ದಿಗಿಲು ಹುಟ್ಟಿಸುವ ಸಾಮರ್ಥ್ಯ

ಸೈಬರ್ ದಾಳಿಗಳನ್ನು ಸಂಘಟಿಸುವಲ್ಲಿ ಆಂಥ್ರೋಪಿಕ್​ನ ಹಿಂದಿನ ಮಾದರಿ ಕೇವಲ 2 ಬಾರಿ ಯಶಸ್ವಿಯಾಗಿದ್ದರೆ, ಮಿಥೋಸ್ ಪ್ರಿವ್ಯೂ ಬರೋಬ್ಬರಿ 181 ಬಾರಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ಕಂಪ್ಯೂಟರ್​ನ ಮಿದುಳು ಎನಿಸಿಕೊಂಡಿರುವ ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್​ನ (ಸಿಪಿಯು) ವರ್ತನೆಯನ್ನೇ ನಿಯಂತ್ರಿಸುವ ಮಟ್ಟಕ್ಕೆ ಮಿಥೋಸ್ ಬೆಳೆದುನಿಂತಿದೆ. ಇದನ್ನು ಸಾಧಿಸುವಲ್ಲಿ ಅದು 29 ಬಾರಿ ಯಶಸ್ವಿಯಾಗಿದೆ! ಸೈಬರ್ ಭದ್ರತೆಯ ಬಗ್ಗೆ ಯಾವುದೇ ಜ್ಞಾನವಿಲ್ಲದ ಸಾಮಾನ್ಯ ಜನರು ಸಹ ಮಿಥೋಸ್ ಬಳಸಿಕೊಂಡು ಸಂಕೀರ್ಣವಾದ ತಾಂತ್ರಿಕ ದೋಷಗಳನ್ನು ಪತ್ತೆಹಚ್ಚಿ, ದಾಳಿ ನಡೆಸಲು ಸಾಧ್ಯವಿದೆ.

ಸೈಬರ್ ದಾಳಿ ಅಸ್ತ್ರ ರಾತ್ರೋರಾತ್ರಿ ರೆಡಿ!

ಸೈಬರ್ ಭದ್ರತೆಯ ತರಬೇತಿ ಇಲ್ಲದ ಆಂಥ್ರೋಪಿಕ್ ಸಂಸ್ಥೆಯ ಇಂಜಿನಿಯರ್​ಗಳೇ ಈ ಮಾದರಿಗೆ ರಿಮೋಟ್ ಕೋಡ್ ಎಕ್ಸಿಕ್ಯೂಶನ್ ದೋಷಗಳನ್ನು ಹುಡುಕುವಂತೆ ಸೂಚನೆ ನೀಡಿದ್ದರು. ಮಾರನೇ ದಿನ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ, ಮಿಥೋಸ್ ಪರಿಣಾಮಕಾರಿಯಾದ ದಾಳಿಯ ಸಂಪೂರ್ಣ ನೀಲಿನಕ್ಷೆಯನ್ನೇ ಸಿದ್ಧಪಡಿಸಿ ಇಟ್ಟಿತ್ತು!

ಆಂಥ್ರೋಪಿಕ್ ಸಂಸ್ಥೆ ಹೇಳೋದೇನು?

‘ನಾವು ಮಿಥೋಸ್​ಗೆ ಇಂತಹ ಹ್ಯಾಕಿಂಗ್ ಸಾಮರ್ಥ್ಯಗಳ ತರಬೇತಿ ನೀಡಿರಲಿಲ್ಲ. ಕೋಡಿಂಗ್ ಮತ್ತು ರೀಸನಿಂಗ್​ನ ಸಾಮಾನ್ಯ ಸುಧಾರಣೆಗಳನ್ನಷ್ಟೇ ಕಲಿಸಿದ್ದೆವು. ಆದರೆ ಉಪಉತ್ಪನ್ನವಾಗಿ ಈ ಅಪಾಯಕಾರಿ ಸಾಮರ್ಥ್ಯಗಳು ಮಿಥೋಸ್​ನಲ್ಲಿ ತಾವಾಗಿಯೇ ರೂಪುಗೊಂಡಿವೆ. ಸದ್ಯಕ್ಕೆ ಡಿಜಿಟಲ್ ಜಗತ್ತಿಗೆ ಮಿಥೋಸ್ ಒಂದು ದುಃಸ್ವಪ್ನದಂತೆ ಕಂಡರೂ, ಭವಿಷ್ಯದಲ್ಲಿ ಭದ್ರತಾ ಗೋಡೆಗಳನ್ನು ಗಟ್ಟಿಗೊಳಿಸುವ ಸಾಧನವಾಗಿಯೂ ಬಳಕೆಯಾಗಬಹುದು’ ಎಂದು ಆಂಥ್ರೋಪಿಕ್ ಸಂಸ್ಥೆ ಹೇಳಿದೆ.

ಎರಡು ಅಲಗಿನ ಕತ್ತಿ!

ಸಾಫ್ಟ್​ವೇರ್ ದೋಷ ಗಳನ್ನು ಸರಿಪಡಿಸಲು (ಪ್ಯಾಚಿಂಗ್) ಬಳಸುವ ತನ್ನ ಬುದ್ಧಿವಂತಿಕೆಯನ್ನು ಮಿಥೋಸ್, ಅಷ್ಟೇ ವೇಗವಾಗಿ ದೋಷಗಳನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೂ (ಎಕ್ಸ್​ಪ್ಲಾಯಿಟಿಂಗ್) ಬಳಸುತ್ತಿರುವುದು ಈ ಎಐ ಟೂಲ್ ಎರಡಲಗಿನ ಕತ್ತಿ ಎಂಬುದನ್ನು ಸಾಬೀತುಪಡಿಸಿದೆ.

ಬಿಡುಗಡೆಗೆ ತಡೆ

ಈ ಎಲ್ಲ ಬೆಳವಣಿಗೆಗಳಿಂದ, ಇದನ್ನು ತಯಾರಿಸಿರುವ ಆಂಥ್ರೋಪಿಕ್ ಸಂಸ್ಥೆಯೇ ಬೆಚ್ಚಿಬಿದ್ದಿದೆ. ಹಾಗಾಗಿ ಸದ್ಯಕ್ಕೆ ಮಾರುಕಟ್ಟೆಗೆ ಈ ಮಾಡೆಲ್ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದೆ. ಅಷ್ಟೇ ಅಲ್ಲ, ಇದರ ಅಪಾಯಗಳ ಬಗ್ಗೆ ಕಂಪನಿ ಯೇ ಅಧಿಕೃತವಾಗಿ ಜಗತ್ತಿಗೆ ಮಾಹಿತಿ ನೀಡಿ, ಇಂತಹ ಎಐ ಟೂಲ್​ಗಳ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದೆ.

ಮನುಷ್ಯರಿಗಿಂತ ಫಾಸ್ಟ್

ಬ್ರಿಟನ್ ಸಂಸ್ಥೆ ನಡೆಸಿದ ‘ದಿ ಲಾಸ್ಟ್ ಒನ್ಸ್’ ಎಂಬ ಕಠಿಣ ಪರೀಕ್ಷೆಯ ಫಲಿತಾಂಶ ಹೀಗಿದೆ. ಕಾರ್ಪೆರೇಟ್ ನೆಟ್​ವರ್ಕ್ ಒಂದರ ಮೇಲೆ ದಾಳಿ ನಡೆಸಿ, ಇಡೀ ನೆಟ್​ವರ್ಕ್ ಅನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ 32 ಹಂತಗಳ ಸಂಕೀರ್ಣ ಪ್ರಕ್ರಿಯೆ ಯನ್ನು ಮಿಥೋಸ್​ಗೆ ನೀಡಲಾಗಿತ್ತು. ಈ ಎಲ್ಲ ಹಂತಗಳನ್ನು ಆರಂಭದಿಂದ ಅಂತ್ಯದವರೆಗೆ ಪೂರ್ಣಗೊಳಿಸಿದ ಜಗತ್ತಿನ ಮೊದಲ ಎಐ ಮಾದರಿ ಎಂಬ ಕೀರ್ತಿಗೆ ಮಿಥೋಸ್ ಪಾತ್ರ ವಾಯಿತು. 10 ಪ್ರಯತ್ನಗಳಲ್ಲಿ 3 ಬಾರಿ ಇದು ಪೂರ್ಣ ಯಶಸ್ಸು ಕಂಡಿತು. ಒಬ್ಬ ಮನುಷ್ಯ ಇದೇ ಕೆಲಸವನ್ನು ಮಾಡಲು ಸುಮಾರು 20 ಗಂಟೆಗಳ ಸಮಯ ತೆಗೆದುಕೊಳ್ಳುತ್ತಾನೆ. ಆದರೆ ಮಿಥೋಸ್ ಇದನ್ನು ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸಿದೆ. ಹಾಗಾಗಿ ಇದು ಸೈಬರ್ ಜಗತ್ತಿನ ಅತಿ ದೊಡ್ಡ ಅಸ್ತ್ರವಾಗಿ ಬೆಳೆದು ನಿಂತಿದೆ. ಇದರಿಂದ ರಾಷ್ಟ್ರೀಯ ಭದ್ರತೆಗೆ ಮತ್ತು ದೊಡ್ಡ ಸಂಸ್ಥೆಗಳ ದತ್ತಾಂಶ ಸುರಕ್ಷತೆಗೆ ಸಂಚಕಾರ ಬರುವ ಸಾಧ್ಯತೆ ಇದೆ.

ಅಮೆರಿಕದಲ್ಲೂ ಆತಂಕ

ಮಿಥೋಸ್​ನಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆ ಅಮೆರಿಕದಲ್ಲೂ ಆತಂಕ ಮನೆ ಮಾಡಿದೆ. ಅಮೆರಿಕದ ಫೆಡರಲ್ ರಿಸರ್ವ್ ಚೇರ್ಮನ್ ಜೆರೋಮ್ ಪೊವೆಲ್ ಮತ್ತು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಇತ್ತೀಚೆಗೆ ಅಲ್ಲಿನ ಬ್ಯಾಂಕ್​ಗಳ ಸಿಇಒಗಳೊಂದಿಗೆ ತುರ್ತು ಸಭೆ ನಡೆಸಿ ರ್ಚಚಿಸಿದ್ದಾರೆ.

ಆಶ್ಚರ್ಯಕರ ಅಂಶಗಳು

  • ಸಂಕೀರ್ಣವಾದ ಸೈಬರ್ ಭದ್ರತಾ ಸವಾಲುಗಳಲ್ಲಿ (ಎಕ್ಸ್​ಪರ್ಟ್ ಲೆವೆಲ್ ಚಾಲೆಂಜ್​ಗಳು) ಮಿಥೋಸ್ ಶೇಕಡ 73ರಷ್ಟು ಯಶಸ್ಸು ಕಂಡಿದೆ. ಇದು ಈವರೆಗಿನ ಯಾವುದೇ ಎಐ ಮಾದರಿಗಿಂತ ಅತಿ ಹೆಚ್ಚಿನ ಸಾಧನೆ.
  • ಇದು ಕೇವಲ ಒಂದು ಟೂಲ್​ನಂತೆ ಕೆಲಸ ಮಾಡದೆ, ತಾನಾಗಿಯೇ ಒಂದು ದಾಳಿಯ ಹಂತಹಂತದ ನೀಲಿನಕ್ಷೆ ತಯಾರಿಸಿ ಅದನ್ನು ಕಾರ್ಯರೂಪಕ್ಕೆ ತರುತ್ತದೆ! ಅಂದರೆ, ಸೈಬರ್ ದಾಳಿಯ ಆರಂಭದಿಂದ ಅಂತ್ಯದವರೆಗೆ ಬೇಕಾದ ಅನೇಕ ಹಂತಗಳನ್ನು ಇದು ಏಕಕಾಲಕ್ಕೆ ಸಂಯೋಜಿಸಬಲ್ಲದು.
  • ಸೈಬರ್ ದಾಳಿ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದವರೂ ಮಿಥೋಸ್ ಅನ್ನು ಬಳಸಿ ಸಂಕೀರ್ಣವಾದ ಸೈಬರ್ ಕಾರ್ಯಾಚರಣೆಗಳನ್ನು ನಡೆಸುವ ಸಾಧ್ಯತೆ ದಟ್ಟವಾಗಿದೆ.

ಸೋರಿಕೆಯಾದ ಅಸ್ತ್ರ

ಆಂಥ್ರೋಪಿಕ್ ಸಂಸ್ಥೆ ಮಿಥೋಸ್ ಮಾದರಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದಿದ್ದರೂ, ಅದು ಸೋರಿಕೆಯಾಗಿರುವುದು ಈಗ ಜಾಗತಿಕ ಮಟ್ಟದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ. ಮಿಥೋಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡುವ ಮೊದಲು, ಆಂಥ್ರೋಪಿಕ್ ತನ್ನ ‘ಪ್ರಾಜೆಕ್ಟ್ ಗ್ಲಾಸ್​ವಿಂಗ್’ ಬಿಡುಗಡೆ ಮಾಡಿತು. ಇದು ವಿವಿಧ ಕಂಪನಿಗಳು ತಮ್ಮ ಸೈಬರ್ ಭದ್ರತೆ ಬಲಪಡಿಸಿಕೊಳ್ಳಲು ಸಹಾಯ ಮಾಡುವ ಟೂಲ್. ಇದರಲ್ಲಿ ಆಪಲ್, ಎನ್ವಿಡಿಯಾ, ಲಿನಕ್ಸ್ ಫೌಂಡೇಶನ್, ಕ್ಲೌಡ್​ಸ್ಟ್ರೈಕ್, ಗೂಗಲ್ ಮುಂತಾದ ಪ್ರಮುಖ ಸಂಸ್ಥೆಗಳು ಭಾಗಿಯಾಗಿದ್ದವು. ಇಷ್ಟೆಲ್ಲ ಎಚ್ಚರಿಕೆಯ ನಡುವೆಯೂ, ಚಾಟ್ ಗ್ರೂಪ್ ಒಂದರಲ್ಲಿ ಕೆಲವು ಬಳಕೆದಾರರಿಗೆ ಮಿಥೋಸ್ ಆಕ್ಸೆಸ್ ಸಿಕ್ಕಿದೆ ಎಂದು ಬ್ಲೂಮ್​ಗ್ ವರದಿ ಮಾಡಿದೆ. ಈ ಸುದ್ದಿಯೇ ಈಗ ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ.

ಕೇಂದ್ರ ಸರ್ಕಾರದ ನಿಲುವು

ಕೇಂದ್ರ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಏಪ್ರಿಲ್ 23ರಂದು ಬ್ಯಾಂಕರ್​ಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಬ್ಯಾಂಕುಗಳು ಮಿಥೋಸ್​ನ ಅಪಾಯಗಳನ್ನು ಎದುರಿಸಲು ಹೆಚ್ಚಿನ ಜಾಗರೂಕತೆ ವಹಿಸಬೇಕು. ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರ ಅಮೆರಿಕದಲ್ಲಿರುವ ಆಂಥ್ರೋಪಿಕ್ ಸಂಸ್ಥೆಯ ಹಿರಿಯ ಪದಾಧಿಕಾರಿಗಳ ಜತೆ ಈಗಾಗಲೇ ಮಾತುಕತೆ ಪ್ರಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net