ಸೂಕ್ಷ್ಮ ವಿಷಯಗಳ ಬಗೆಗಿನ ನನ್ನ ಅಭಿಪ್ರಾಯ ಭಾರತದ ಪರ, ಅದನ್ನೇ ಬಿಜೆಪಿ ಪರ ಎನ್ನಬಾರದು: ಶಶಿ ತರೂರ್ | Shashi Tharoor

ಶಶಿ ತರೂರ್, ಎಐಸಿಸಿ ಅಧ್ಯಕ್ಷ ಖರ್ಗೆ, ರಾಹುಲ್ ಗಾಂಧಿ
ಶಶಿ ತರೂರ್, ಎಐಸಿಸಿ ಅಧ್ಯಕ್ಷ ಖರ್ಗೆ, ರಾಹುಲ್ ಗಾಂಧಿ
Published on
ನವದೆಹಲಿ: ದೇಶದ ಸೂಕ್ಷ್ಮ ವಿಷಯಗಳ ಬಗೆಗಿನ ತಮ್ಮ ವೈಯಕ್ತಿಕ ಅಭಿಪ್ರಾಯಗಳು ಭಾರತದ ಪರವಾಗಿರುತ್ತವೆ, ಅಂತಹ ಅಭಿಪ್ರಾಯಗಳನ್ನು ಹೇಳಿದ ತಕ್ಷಣ ನಾನು ಬಿಜೆಪಿ ಪರ ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಹಿರಿಯ ಕಾಂಗ್ರೆಸ್​ ನಾಯಕ ಮತ್ತು ಸಂಸದ ಶಶಿ ತರೂರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಆಯ್ದ ಅಂತರರಾಷ್ಟ್ರೀಯ ವಿಷಯಗಳಲ್ಲಿ, ಅವುಗಳನ್ನು ರಾಜಕೀಯಗೊಳಿಸುವ ಬದಲು ರಾಷ್ಟ್ರೀಯ ಹಿತಾಸಕ್ತಿಗಾಗಿ ಮಾತನಾಡಲು ಆದ್ಯತೆ ನೀಡುವುದಾಗಿ ನಾನು ಯಾವಾಗಲೂ ಹೇಳಿದ್ದೇನೆ. ಇದು ಹೊಸದಲ್ಲ. ಕೆಲವು ಅಂತರರಾಷ್ಟ್ರೀಯ ವಿಷಯಗಳಲ್ಲಿ ದೇಶಕ್ಕಾಗಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಆದ್ಯಾಗೂ ಪಹಲ್ಗಾಮ್ ದಾಳಿಯ ಬಳಿಕ, ಭಾರತ-ಪಾಕಿಸ್ತಾನ ಉದ್ವಿಗ್ನತೆ, ರಾಜತಾಂತ್ರಿಕ ಸಂಪರ್ಕ ಹಾಗೂ ಆಪರೇಷನ್ ಸಿಂಧೂರ ಕುರಿತಾದ ತಮ್ಮ ಹೇಳಿಕೆಗಳು ಮತ್ತು ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವಿಗಿಂತ ಭಿನ್ನವಾಗಿದ್ದನ್ನು ಒಪ್ಪಿಕೊಂಡ ಅವರು, ಪಕ್ಷದ ಸದಸ್ಯರ ನಿರೀಕ್ಷೆಗಳನ್ನು ನಾನು ಒಪ್ಪುತ್ತೇನೆ. ಪಕ್ಷದೊಳಗೆ ಶಿಸ್ತು ಮುಖ್ಯ. ನಾನು ಯಾವಾಗಲೂ ಸಂಸತ್​ನಲ್ಲಿ ಪಕ್ಷದೊಂದಿಗೆ ನಿಂತಿದ್ದೇನೆ. ಯಾವುದೇ ಗೊಂದಲಕ್ಕೆ ಕಾರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ್ದು, ನಾನು ಕಾಂಗ್ರೆಸ್‌ನಲ್ಲಿದ್ದೇನೆ ಮತ್ತು ನಾನು ಎಲ್ಲಿಗೂ ಹೋಗುವುದಿಲ್ಲ. ನಾನು ಕೇರಳ ಚುನಾವಣಾ ಪ್ರಚಾರದ ಭಾಗವಾಗಿರುತ್ತೇನೆ ಮತ್ತು ಯುಡಿಎಫ್‌ನ ಗೆಲುವಿಗಾಗಿ ಕೆಲಸ ಮಾಡುತ್ತೇನೆ. ಪದೇ ಪದೇ ನನ್ನ ಪಕ್ಷ ನಿಷ್ಠೆಯನ್ನು ಯಾಕೆ ಅನುಮಾನಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಅಸಾಮಾಧಾನದ ಕಾರಣದಿಂದ ಕಾಂಗ್ರೆಸ್​ ಹೈಕಮಾಂಡ್ ಮತ್ತು ಕೇರಳ ಕಾಂಗ್ರೆಸ್ ಘಟಕದಿಂದ ಶಶಿ ತರೂರ್ ದೂರವಾಗುತ್ತಿದ್ದಾರೆ ಎಂಬ ವರದಿಗಳ ನಡುವೆ, ಗುರುವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಬಳಿಕ ಎಲ್ಲವೂ ಚೆನ್ನಾಗಿದೆ, ಯಾವುದೇ ಅಸಾಮಾಧಾನ ಇಲ್ಲ ಎಂದಿದ್ದರು. 
ರಾಹುಲ್ ಗಾಂಧಿ ಅವರನ್ನು ಪ್ರಾಮಾಣಿಕ ನಾಯಕ ಮತ್ತು ಕೋಮುವಾದ, ದ್ವೇಷ ಮತ್ತು ವಿಭಜನೆಯ ವಿರುದ್ಧ ಬಲವಾದ ಧ್ವನಿ ಎಂದು ಹೊಗಳಿದ್ದರು. ನನಗೆ ಅವರ ಬಗ್ಗೆ ಬೇರೆ ಅಭಿಪ್ರಾಯವಿಲ್ಲ. ಅವರ ವಿರುದ್ಧ ಮಾಡಿದ ಯಾವುದೇ ತಪ್ಪು ಕಾಮೆಂಟ್‌ಗಳನ್ನು ನಾನು ಒಪ್ಪಲ್ಲ ಎಂದು ಹೇಳಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net