

ನವದೆಹಲಿ: ಉತ್ತರ ಪ್ರದೇಶದ ಚುನಾವಣೆಗೂ ಮುನ್ನ ಎನ್ಡಿಎ ಮತ್ತು ಇಂಡಿಯಾ ಕೂಟದ ಹೊರತಾಗಿ ಮೂರನೇ ಮೈತ್ರಿಕೈಟವನ್ನು ಘೋಷಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಶುಕ್ರವಾರ(ನ. 13) ಜಾತ್ಯತೀತ ಹೆಸರಿನ ಪಕ್ಷಗಳು ಮುಸ್ಲಿಮರನ್ನು ಹಕ್ಕುಗಳನ್ನು ಹೊಂದಿರುವ ನಾಗರಿಕರಾಗಿ ನೋಡುವುದಿಲ್ಲ, ಮತದಾರರಾಗಿ ಮಾತ್ರ ನೋಡುತ್ತವೆ ಎಂದು ಕಾಂಗ್ರೆಸ್, ಎಸ್‌ಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸದ ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ ಪಕ್ಷದೊಂದಿಗೆ ತಮ್ಮ ಪಕ್ಷದ ಮೈತ್ರಿಯನ್ನು ಘೋಷಿಸಿದ ಬಳಿಕ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವುದು ತಮ್ಮ ಪ್ರಾಥಮಿಕ ಗುರಿಯಾಗಿದೆ ಎಂದು ಹೇಳಿದ್ದಾರೆ.
ದಲಿತ-ಮುಸ್ಲಿಂ ಐಕ್ಯತೆಯು ಏಕೈಕ ಉದ್ದೇಶವಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ. ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸಿರುವ ಬಿಜೆಪಿಯ ವಿರುದ್ಧ ನಾವು ಪ್ರಬಲ ಹೋರಾಟ ನಡೆಸಲು ಬಯಸುತ್ತೇವೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ನಾಯಕತ್ವದ ಕೊರತೆಯಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಸ್ಲಿಮರು ಬುಲ್ಡೋಜರ್ ಆಡಳಿತದ ಕ್ರಮಕ್ಕೆ ಬಲಿಯಾಗಿದ್ದಾರೆ. ಮತ್ತು ಶಿಕ್ಷಣ, ಉದ್ಯೋಗದಲ್ಲಿ ಹಿಂದುಳಿದಿದ್ದಾರೆ. ಸಮುದಾಯದ ಈ ದುಸ್ಥಿತಿಗೆ ಜಾತ್ಯತೀತ ಪಕ್ಷಗಳೆಂದು ಹೇಳಿಕೊಳ್ಳುವ ಪಕ್ಷಗಳೇ ಕಾರಣ. ಮುಸ್ಲಿಮರನ್ನು ಹಕ್ಕುಗಳನ್ನು ಹೊಂದಿರುವ ನಾಗರಿಕರಾಗಿ ನೋಡದೆ, ಮತಗಳಿಗಾಗಿ ಬಳಸಲಾಗುತ್ತದೆ. ಜಾತ್ಯತೀತ ಪಕ್ಷಗಳ ಸುಳ್ಳುಗಳು ಚುನಾವಣೆಯ ನಂತರ ಚುನಾವಣೆಗೆ ಪುನರಾವರ್ತನೆಯಾಗುತ್ತವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಆಜಾದ್ ಜೊತೆಗಿನ ಮೈತ್ರಿ ಬಿಜೆಪಿಗೆ ಲಾಭವಾಗಲಿದೆ ಎಂಬ ಟೀಕೆಗಳನ್ನು ತಿರಸ್ಕರಿಸಿದ ಓವೈಸಿ, ಕಾಶ್ಮೀರದಲ್ಲಿ ಎಸ್‌ಪಿ ಯಾಕೆ ಸ್ಪರ್ಧಿಸಿತು? ಮಹಾರಾಷ್ಟ್ರದಲ್ಲಿ ನಮ್ಮ ಅಭ್ಯರ್ಥಿ ಇಮ್ತಿಯಾಜ್ ಜಲೀಲ್ ಅವರ ಸೋಲಿಗೆ ಯಾರು ಕಾರಣ? ಕಾಂಗ್ರೆಸ್ ನೋಡಿ, ಅದು ಪಂಜಾಬ್‌ನಲ್ಲಿ ಎಎಪಿ ವಿರುದ್ಧ ಹೋರಾಡುತ್ತಿದೆ. ಎಎಪಿಯನ್ನು ಬಿಜೆಪಿಯ ಬಿ ತಂಡ ಎಂದು ಕರೆಯುತ್ತಿದೆ. ಸುತ್ತಲೂ ಸಾಕಷ್ಟು ವಿರೋಧಾಭಾಸ ಮತ್ತು ಬೂಟಾಟಿಕೆ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್)