ಮುಸ್ಲಿಂ ವಿದ್ಯಾರ್ಥಿಗಳ ಆಯ್ಕೆ ವಿವಾದ; ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನ ಮಾನ್ಯತೆ ರದ್ದುಗೊಳಿಸಿದ ಎನ್​ಎಂಸಿ | Medical College

 ಶ್ರೀ ವೈಷ್ಣೋ ಮಾತಾದೇವಿ ವೈದ್ಯಕೀಯ ಕಾಲೇಜು
ಶ್ರೀ ವೈಷ್ಣೋ ಮಾತಾದೇವಿ ವೈದ್ಯಕೀಯ ಕಾಲೇಜು
Published on
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಹೊಸದಾಗಿ ಆರಂಭವಾಗಿದ್ದ ಶ್ರೀ ವೈಷ್ಣೋ ಮಾತಾದೇವಿ ವೈದ್ಯಕೀಯ ಕಾಲೇಜಿನ(Medical College) ಮಾನ್ಯತೆಯನ್ನು ಕನಿಷ್ಠ ಗುಣಮಟ್ಟದಲ್ಲಿ ಗಂಭೀರ ಲೋಪಗಳಿವೆ ಎಂದು ಉಲ್ಲೇಖಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರದ್ದುಗೊಳಿಸಿದೆ ಎಂದು ಬುಧವಾರ(ಜ. 07) ವರದಿಯಾಗಿದೆ.
ಶ್ರೀ ಮಾತಾ ವೈಷ್ಣೋ ದೇವಾಲಯದ ಆಡಳಿತ ಮಂಡಳಿಯಿಂದ ನಡೆಸಲ್ಪಡುತ್ತಿದ್ದ ವೈದ್ಯಕೀಯ ಕಾಲೇಜಿಗೆ ಮೊದಲ ಬ್ಯಾಚ್​​​ ವಿದ್ಯಾರ್ಥಿಗಳ ಆಯ್ಕೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಮೊದಲ ಬ್ಯಾಚ್​ನ 50 ಸೀಟುಗಳಲ್ಲಿ 42 ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಓರ್ವ ಸಿಖ್ ಹಾಗೂ ಉಳಿದ 7 ವಿದ್ಯಾರ್ಥಿಗಳು ಹಿಂದೂಗಳು ಎನ್ನುವುದು ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು.
ಕಳೆದ ಎರಡು ತಿಂಗಳುಗಳಿಂದ ಜಮ್ಮುವಿನ ಬಿಜೆಪಿ ನಾಯಕರು, ಬಲಪಂಥೀಯ ಸಂಘಟನೆಗಳು ಮೊದಲ ಬ್ಯಾಚ್​ನ ಪ್ರವೇಶ ಪಟ್ಟಿಯನ್ನು ತೀವ್ರವಾಗಿ ವಿರೋಧಿಸಿದ್ದು, ಆಯ್ಕೆಯನ್ನು ತಕ್ಷಣ ರದ್ದು ಮಾಡುವಂತೆ ಒತ್ತಾಯಿಸಿದ್ದವು. ಕಾಲೇಜನ್ನು ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯು ನಡೆಸುತ್ತಿರುವುದರಿಂದ, ಪ್ರಾಥಮಿಕವಾಗಿ ಹಿಂದೂ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದವು.
ಈ ಹಿನ್ನೆಲೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಲೇಜಿನ ಗುಣಮಟ್ಟದ ಉಲ್ಲೇಖ ನೀಡಿದ ವೈದ್ಯಕೀಯ ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸಿದ್ದು,  ಆಯ್ಕೆಯಾದ 50 MBBS ವಿದ್ಯಾರ್ಥಿಗಳನ್ನು ಕೇಂದ್ರಾಡಳಿತ ಪ್ರದೇಶದ ಇತರ ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜುಗಳಿಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದೆ.
ಎನ್​ಎಂಸಿ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದೆ. ಈ ಕುರಿತು ಜಮ್ಮು-ಕಾಶ್ಮೀರದ ಬಿಜೆಪಿ ಶಾಸಕ ಆರ್‌.ಎಸ್.ಪಠಾನಿಯಾ ಮಾತನಾಡಿ, ಪ್ರಮಾಣಕ್ಕಿಂತ ಗುಣಮಟ್ಟದ ಅಗತ್ಯ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾದ ಕಾರಣ SMVDIME ನಲ್ಲಿ 50 MBBS ಸೀಟುಗಳಿಗೆ NMC ಅನುಮತಿಯನ್ನು ರದ್ದುಗೊಳಿಸಿದೆ. ಇದು ಗುಣಮಟ್ಟದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಇತರೆ ಕಾಲೇಜಿಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಿದ್ದಾರೆ.


ಮಾನ್ಯತೆ ರದ್ದುಗೊಳಿಸಲು ಹೇಳಿದ್ದ ಸಿಎಂ ಓಮರ್ ಅಬ್ದುಲ್ಲಾ

ಮೊದಲ ಬ್ಯಾಚ್​ನಲ್ಲಿ ಅತಿ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಕ್ಕೆ ಬಿಜೆಪಿ & ಹಿಂದೂಪರ ಸಂಘಟನೆಗಳು ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ, ನಮಗೆ ಈ ಕಾಲೇಜು ಅಗತ್ಯವಿಲ್ಲ. ಇದು ವೈದ್ಯಕೀಯ ಕಾಲೇಜಾಗಿರುವುದಕ್ಕೆ ಯೋಗ್ಯವಲ್ಲ. ಸಂಸ್ಥೆಯನ್ನು ಮುಚ್ಚಿ ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

ನೀಟ್ ಪರೀಕ್ಷೆ ಮೂಲಕ ಆಯ್ಕೆಯಾಗಿದ್ದ ವಿದ್ಯಾರ್ಥಿಗಳು

ಜಮ್ಮು ಮತ್ತು ಕಾಶ್ಮೀರದಲ್ಲಿ 13 ವೈದ್ಯಕೀಯ ಕಾಲೇಜುಗಳಿದ್ದು, ವೈಷ್ಣೋ ದೇವಿ ವೈದ್ಯಕೀಯ ಕಾಲೇಜು ಅನ್ನು ಈ ವರ್ಷ ತನ್ನ ಮೊದಲ ಬ್ಯಾಚ್ ಅನ್ನು ಪ್ರಾರಂಭಿಸಿದೆ. ಪ್ರವೇಶವು ನೀಟ್ ಪರೀಕ್ಷೆಯ ಮೆರಿಟ್ ಪಟ್ಟಿಯನ್ನು ಆಧರಿಸಿತ್ತು. ಶೇಕಡಾ 85 ರಷ್ಟು ಸೀಟುಗಳನ್ನು ಸ್ಥಳೀಯರಿಗೆ ಮೀಸಲಿಡಲಾಗಿತ್ತು. ಈ ಹಿನ್ನೆಲೆ 50 ಸೀಟುಗಳ ಮೊದಲ ಬ್ಯಾಚ್​ನಲ್ಲಿ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳು ಸೇರಿ 42 ಮುಸ್ಲಿಮರು ಆಯ್ಕೆಯಾಗಿದ್ರೆ, ಓರ್ವ ಸಿಖ್ ವಿದ್ಯಾರ್ಥಿ ಸೇರಿ 8 ಹಿಂದೂ ಸಮುದಾಯದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು.
ಆರಂಭದಲ್ಲಿ ವಿದ್ಯಾರ್ಥಿಗಳ ಮೆರಿಟ್ ಪಟ್ಟಿಯನ್ನು ರದ್ದುಗೊಳಿಸುವಂತೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದವು. ಕಾಲೇಜು ಆಡಳಿತ ಮಂಡಳಿಯೂ ಕೇಂದ್ರವನ್ನು ಕೋರಿತ್ತು. ಆದರೆ ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆ (ನೀಟ್) ಪಟ್ಟಿಯ ಪ್ರಕಾರ ಪ್ರವೇಶ ನೀಡಲಾಗಿದೆ. ಕಾನೂನುಬದ್ಧವಾಗಿ ರದ್ದುಗೊಳಿಸಲಾಗಲ್ಲ ಎಂದಾಗ ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸಿ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net