Babri Masjid | ಹೊಸ ಬಾಬರಿ ಮಸೀದಿ ನಿರ್ಮಾಣಕ್ಕೆ ಮೂರೇ ದಿನದಲ್ಲಿ 2.85 ಕೋಟಿ ರೂ ಸಂಗ್ರಹ..!; ವಿದೇಶಿ ದಾನಿಗಳಿಂದಲೂ ದೇಣಿಗೆ

Babri Masjid |  ಟಿಎಂಸಿ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್
Babri Masjid | ಟಿಎಂಸಿ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್
Published on
ಕೊಲ್ಕತ್ತಾ: ಮೂರು ದಿನಗಳ ಹಿಂದೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಟಿಎಂಸಿ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್ ಶಿಲಾನ್ಯಾಸ ನೆರವೇರಿಸಿದ್ದ ಹೊಸ ಬಾಬರಿ ಮಸೀದಿಗೆ, ಮುಸ್ಲಿಂ ಸಮುದಾಯದ ಜನರು ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡುತ್ತಿದ್ದು, ಎರಡನೇ ದಿನವಾದ ಸೋಮವಾರ ಸುಮಾರು 2.85 ಕೋಟಿ ರೂ.ಗಳಿಗೂ ಹೆಚ್ಚು ಹಣ ದಾನದ ರೂಪದಲ್ಲಿ ಬಂದಿದೆ ಎಂದು ವರದಿಯಾಗಿದೆ.
ಸುಮಾರು 30 ಜನರನ್ನು ನಗದು ಎಣಿಸಲೆಂದೇ ನಿಯೋಜಿಸಲಾಗಿದ್ದು, ಮೊದಲ ದಿನ ಒಟ್ಟು 37.33 ಲಕ್ಷ ರೂ, ಎರಡನೇ ದಿನ 38.34 ಲಕ್ಷ ರೂಗಳನ್ನು ಎಣಿಕೆ ಮಾಡಿದೆ. ಇದರ ಜೊತೆಗೆ ಬ್ಯಾಂಕ್ ಖಾತೆಗಳ ಮೂಲಕವೂ ದೇಣಿಗೆ ನೀಡಲಾಗುತ್ತಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ಠೇವಣಿ 2.10 ಕೋಟಿ ರೂ.ಗಳನ್ನು ದಾಟಿದೆ ಎನ್ನಲಾಗಿದೆ.
ಬಾಬರಿ ಮಸೀದಿ ಶೈಲಿ ಕಟ್ಟಡ ನಿರ್ಮಾಣಕ್ಕೆ ಕೇವಲ ಎರಡು ದಿನಗಳಲ್ಲಿ 2.85 ಕೋಟಿ ರೂ.ಗಳಿಗೂ ಹೆಚ್ಚು ದೇಣಿಗೆ ಸಂಗ್ರಹಿಸಲಾಗಿದ್ದು. ಸೀಲ್ ಮಾಡಲಾದ ಏಳು ದೇಣಿಗೆ ಪೆಟ್ಟಿಗೆಗಳನ್ನು ಇನ್ನೂ ತೆರೆಯಬೇಕಾಗಿದೆ ಎಂದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಮುರ್ಷಿದಾಬಾದ್ ಬಾಬರಿ ಮಸೀದಿ ವಿವಾದ

ಶನಿವಾರ ಭಾರೀ ಭದ್ರತೆಯಲ್ಲಿ ರೆಜಿನಗರ ಮಸೀದಿಗೆ ಕಬೀರ್ ಶಿಲಾನ್ಯಾಸ ನೆರವೇರಿಸಿದರು. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವ ದಿನವಾದ ಡಿಸೆಂಬರ್ 6 ರಂದು ಉದ್ದೇಶಪೂರ್ವಕವಾಗಿಯೇ ಆಯ್ಕೆ ಮಾಡಿಕೊಂಡಿದ್ದು. ಶಾಸಕ ಕಬೀರ್​ರ ಈ ನಡುವೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬಂಗಾಳದಲ್ಲಿ ಹೊಸ ವಿವಾದವನ್ನು ಹುಟ್ಟು ಹಾಕಿದೆ. 2012 ರಲ್ಲಿ ಕಾಂಗ್ರೆಸ್​ ಪಕ್ಷ ತೊರೆದು ಟಿಎಂಸಿ ಸೇರ್ಪಡೆಗೊಂಡಿದ್ದ ಕಬೀರ್ ಬಿಜೆಪಿಗೂ ಕಾಲಿಟ್ಟು, 2020ರಲ್ಲಿ ಮತ್ತೆ ಸಿಎಂ ಮಮತಾ ನೇತೃತ್ವದ ಟಿಎಂಸಿಗೆ ಜಿಗಿದಿದ್ದರು.
ಶಿಲಾನ್ಯಾಸ ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಸುಮಾರು 40 ಸಾವಿರ ಜನರಿಗಾಗುವಷ್ಟು ಶಾಹಿ ಬಿರಿಯಾನಿ ತಯಾರಿಸಲಾಗಿತ್ತು. ಆ ದಿನ ಕಾರ್ಯಕ್ರಮದ ಸ್ಥಳದಲ್ಲಿ ಹನ್ನೊಂದು ದೊಡ್ಡ ಸ್ಟೇನ್‌ಲೆಸ್ ಸ್ಟೀಲ್ ದೇಣಿಗೆ ಪೆಟ್ಟಿಗೆಗಳನ್ನು ಇರಿಸಿ, ಮಸೀದಿಯ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಕಬೀರ್​ ಜನರಲ್ಲಿ ಮನವಿ ಮಾಡಿದ್ದರು.

ದೇಣಿಗೆಗಳು..

ಭಾನುವಾರ ಸಂಜೆ 7 ಗಂಟೆಯಿಂದ ದೆಣಿಗೆ ಬಂದಿರುವ ಹಣ ಎಣಿಸಲು ಪ್ರಾರಂಭಿಸಲಾಗಿದ್ದು, ಇದು ಮಧ್ಯರಾತ್ರಿಯವರೆಗೆ ಮುಂದುವರೆದಿದೆ. ವಿಶೇಷ ಎಣಿಕೆ ಯಂತ್ರಗಳನ್ನು ಬಳಸಿಕೊಂಡು 30 ಜನರ ತಂಡವು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು. ಉಳಿದ ಪೆಟ್ಟಿಗೆಗಳನ್ನು ಸೋಮವಾರ ಸಂಜೆ 5 ಗಂಟೆಗೆ ತೆರೆಯಲಾಗಿದೆ.
ಹಣದ ವಿಷಯದಲ್ಲಿ ಪಾರದರ್ಶಕತೆ ಮುಖ್ಯ ಎನ್ನುವ ಸಲುವಾಗಿ ಎಣಿಕೆ ಕಾರ್ಯಕ್ಕೆ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿದೆ ಎಂದಿರುವ ಶಾಸಕ ಕಬೀರ್, ತಮ್ಮ ನಿರೀಕ್ಷೆಗೆ ಮೀರಿ ಜನರು ದೇಣಿಗೆ ನೀಡುತ್ತಿದ್ದಾರೆ, ಭಾರತದ ಹೊರಗಿನಿಂದಲೂ ದಾನಿಗಳು ಮುಂದೆ ಬಂದಿದ್ದು, ಕೆಲಸದಲ್ಲಿ ತೊಡಗಿರುವ ಅಧಿಕಾರಿಗಳು, ಸಂಗ್ರಹಿಸಿದ ಹಣವನ್ನು ಸಿಸಿಟಿವಿ ಕಣ್ಗಾವಲು ಅಳವಡಿಸಲಾದ ಸುರಕ್ಷಿತ ಕೋಣೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಮತ್ತು ಅದರ ಸುರಕ್ಷಿತ ನಿರ್ವಹಣೆಯ ಕುರಿತು ಬ್ಯಾಂಕ್‌ಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net