Murder Case: 80ರ ಅತ್ತೆಯ ಕತ್ತು ಸೀಳಿ ಕೊಲೆ ಮಾಡಿದ 60ರ ಸೊಸೆ!

Murder Case
Murder Case
Published on
ಮುಂಬೈ: ಮಹಾರಾಷ್ಟ್ರದ Pune ನಗರದಲ್ಲಿ ಕುಟುಂಬ ಕಲಹವೇ ಭೀಕರ ಹತ್ಯೆಗೆ ಕಾರಣವಾದ ಘಟನೆ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಮನೆ ಒಳಗಿನ ಜಗಳಗಳಿಂದ ಬೇಸತ್ತಿದ್ದ ಸೊಸೆ, ಕೊನೆಗೆ ತನ್ನ 80 ವರ್ಷದ ಅತ್ತೆಯನ್ನು ಚಾಕುವಿನಿಂದ ಕೊಂದು ಪೊಲೀಸರಿಗೆ ತಾನೇ ಕರೆ ಮಾಡಿ ಶರಣಾದ ಘಟನೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಅಂಬೇಗಾಂವ್ ಬುದ್ರುಕ್ ಪ್ರದೇಶದ ವಸತಿ ಸಮುಚ್ಚಯವೊಂದರಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ವೃದ್ಧೆಯನ್ನು ಸುಮನ್ ಅಣ್ಣಾಸಾಹೇಬ್ ಶಿಂಡೆ ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ 60 ವರ್ಷದ ಅನುಪಮಾ ಸಂಜಯ್ ಶಿಂಡೆ ಅವರನ್ನು ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಟುಂಬದ ಸದಸ್ಯರ ಹೇಳಿಕೆಯಂತೆ, ಕಳೆದ ಹಲವು ವರ್ಷಗಳಿಂದ ಅತ್ತೆ ಮತ್ತು ಸೊಸೆಯ ನಡುವೆ ಸಣ್ಣ-ಪುಟ್ಟ ವಿಚಾರಕ್ಕೂ ಜಗಳ ನಡೆಯುತ್ತಿತ್ತು. ಮನೆಯಲ್ಲಿದ್ದ ಇತರರು ಅನೇಕ ಬಾರಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದರೂ, ಪರಿಸ್ಥಿತಿ ಸುಧಾರಿಸಿರಲಿಲ್ಲ. ಕುಟುಂಬದೊಳಗಿನ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗಿತ್ತು ಎನ್ನಲಾಗಿದೆ.
ಮಂಗಳವಾರ ಮಧ್ಯಾಹ್ನ ಘಟನೆ ಸಂಭವಿಸಿದೆ. ಆ ಸಮಯದಲ್ಲಿ ಮನೆಯಲ್ಲಿ ಅನುಪಮಾ, ಅತ್ತೆ ಸುಮನ್ ಹಾಗೂ ಕುಟುಂಬದ ಇನ್ನೊಬ್ಬ ಸೊಸೆ ಇದ್ದರು. ಮಾತಿನ ಚಕಮಕಿ ತೀವ್ರವಾಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ವರದಿಗಳ ಪ್ರಕಾರ, ಅನುಪಮಾ ಮನೆಯ ಮತ್ತೊಬ್ಬ ಸೊಸೆಯನ್ನು ಕೋಣೆಯೊಳಗೆ ಬೀಗ ಹಾಕಿ ಬಂದಿಸಿದ್ದಾಳೆ. ನಂತರ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಅತ್ತೆಯ ಮೇಲೆ ದಾಳಿ ನಡೆಸಿದ್ದಾಳೆ.
ಆಕ್ರೋಶದ ನಡುವೆ ನಡೆದ ದಾಳಿಯಲ್ಲಿ ವೃದ್ಧೆಯ ಕತ್ತು, ಎದೆ ಮತ್ತು ಹೊಟ್ಟೆ ಭಾಗಗಳಿಗೆ ಅನೇಕ ಬಾರಿ ಇರಿದಿರುವ ಮಾಹಿತಿ ಹೊರಬಂದಿದೆ. ಗಂಭೀರ ಗಾಯಗಳಿಂದ ರಕ್ತಸ್ರಾವವಾಗಿ ಅತ್ತೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಮನೆಯಲ್ಲಿ ಗದ್ದಲ ಕೇಳಿ ಕುಟುಂಬದವರು ಆತಂಕಗೊಂಡಿದ್ದಾರೆ. ಒಳಗಿದ್ದವರು ಬಾಗಿಲು ತೆರೆಯುವಂತೆ ಮನವಿ ಮಾಡಿದರೂ ಅನುಪಮಾ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ. ಬಳಿಕ ಮನೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಅಚ್ಚರಿಯ ಸಂಗತಿ ಎಂದರೆ, ಅದಕ್ಕೂ ಮುನ್ನವೇ ಆರೋಪಿಯಾಗಿರುವ ಅನುಪಮಾ ತಾನೇ ಪೊಲೀಸರಿಗೆ ಕರೆ ಮಾಡಿ “ಅತ್ತೆಯನ್ನು ಕೊಂದಿದ್ದೇನೆ” ಎಂದು ಒಪ್ಪಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಹತ್ಯೆಗೆ ಬಳಸಿದ್ದ ಚಾಕುವನ್ನು ಜಪ್ತಿ ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕುಟುಂಬ ಹಿಂಸೆ, ಮಾನಸಿಕ ಕಿರುಕುಳ ಮತ್ತು ಸಂಬಂಧಗಳ ಸಂಘರ್ಷಗಳಿಂದ ಉಂಟಾಗುತ್ತಿರುವ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ತಜ್ಞರ ಪ್ರಕಾರ, ಕುಟುಂಬದೊಳಗಿನ ಸಮಸ್ಯೆಗಳನ್ನು ಸಂಭಾಷಣೆ ಮತ್ತು ಸಮಾಲೋಚನೆ ಮೂಲಕ ಪರಿಹರಿಸಿಕೊಳ್ಳುವ ಪ್ರಯತ್ನಗಳು ಅಗತ್ಯವಾಗಿವೆ. ಇಲ್ಲವಾದರೆ ಕೋಪ ಮತ್ತು ದ್ವೇಷದ ಮನಸ್ಥಿತಿ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಪೊಲೀಸರು ಇದೀಗ ಕುಟುಂಬ ಸದಸ್ಯರ ಹೇಳಿಕೆ ದಾಖಲಿಸಿಕೊಂಡು, ಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪ್ರಕರಣವು ಮಹಾರಾಷ್ಟ್ರದಲ್ಲಿ ಭಾರೀ ಸಂಚಲನ ಮೂಡಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net