ಅಮೃತಸರದ ಹಲವು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ; ವಿದ್ಯಾರ್ಥಿಗಳ ಸ್ಥಳಾಂತರ, ಮುಂದುವರೆದ ತನಿಖೆ | Bomb Threats

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪಂಜಾಬ್‌ನ ಅಮೃತಸರದ ಹಲವು ಶಾಲೆಗಳಿಗೆ ಇಮೇಲ್​ ಮೂಲಕ ಹುಸಿ ಬಾಂಬ್​ ಬೆದರಿಕೆ
  • ಪ್ರತಿ ಶಾಲೆಯಲ್ಲಿ ಗೆಜೆಟೆಡ್ ಅಧಿಕಾರಿ ನಿಯೋಜನೆ
ಅಮೃತಸರ : ಶುಕ್ರವಾರ (ಡಿ.12) ಪಂಜಾಬ್‌ನ ಅಮೃತಸರದ ಹಲವಾರು ಶಾಲೆಗಳಿಗೆ ಇಮೇಲ್​ ಮೂಲಕ ಹುಸಿ ಬಾಂಬ್​ ಬೆದರಿಕೆ (Bomb Threats) ಬಂದ ಹಿನ್ನಲೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದು, ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಾದ್ಯಂತ ಕೆಲವು ಶಾಲೆಗಳಿಗೆ ಅನುಮಾನಾಸ್ಪದ ಇಮೇಲ್ ಬಂದಿದೆ. ಅಮೃತಸರದಾದ್ಯಂತದ ಎಲ್ಲಾ ಶಾಲೆಗಳನ್ನು ಮುಚ್ಚಲು ಜಿಲ್ಲಾಡಳಿತ ಆದೇಶಿಸಿದ್ದು, ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲೆಗಳಿಗೆ ಧಾವಿಸಿದ್ದಾರೆ. ಪ್ರತಿ ಶಾಲೆಯಲ್ಲಿ ಗೆಜೆಟೆಡ್ ಅಧಿಕಾರಿಯನ್ನು ನಿಯೋಜಿಸಲಾಗಿದೆ ಮತ್ತು ವಿಧ್ವಂಸಕ ಕೃತ್ಯಗಳ ವಿರುದ್ಧ ತಪಾಸಣೆ ನಡೆಯುತ್ತಿದೆ. ಸೈಬರ್ ಪೊಲೀಸ್ ಠಾಣೆಯು ಮೇಲ್‌ನ ಮೂಲವನ್ನು  ಪತ್ತೆಹಚ್ಚುತ್ತಿದೆ ಎಂದು ಅಮೃತಸರ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಮೃತಸರ ಜಿಲ್ಲೆಯ ಪಕ್ಕದ ಗ್ರಾಮೀಣ ಪ್ರದೇಶಗಳಲ್ಲಿ, ಅನೇಕ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬರುತ್ತಿವೆ. ಎಲ್ಲಾ ಶಾಲಾ ಕ್ಯಾಂಪಸ್‌ಗಳನ್ನು ಭದ್ರಪಡಿಸಲಾಗಿದೆ.ಇದಕ್ಕೆ ಪ್ರತಿಕ್ರಿಯೆಯಾಗಿ, ಹಲವಾರು ಅಗ್ನಿಶಾಮಕ ದಳಗಳು, ಬಾಂಬ್ ನಿಷ್ಕ್ರಿಯ ದಳಗಳು, ಶ್ವಾನ ದಳಗಳು ಮತ್ತು ಪೊಲೀಸ್ ತಂಡಗಳನ್ನು ಸ್ಥಳಕ್ಕೆ ರವಾನಿಸಲಾಯಿತು.  ಮುನ್ನೆಚ್ಚರಿಕೆಯ ಭಾಗವಾಗಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು  ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂದಿರುವ ಬೆದರಿಕೆಗಳು ಸುಳ್ಳೆಂದು ತಿಳಿದು ಬಂದಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಭುಲ್ಲರ್ ಹೇಳಿದರು.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net