

ನವದೆಹಲಿ: ನಿಮ್ಮ ಮೊಬೈಲ್ಗೆ ಬರುವ ಬ್ಯಾಂಕ್ ಒಟಿಪಿ ಬೇರೆಯವರ ಕೈ ಸೇರಿದರೆ? ಬ್ಯಾಂಕ್ನಿಂದ ಬರುವ ಪರಿಶೀಲನಾ ಕರೆಗಳೂ ನಿಮಗೆ ತಿಳಿಯದಂತೆ ವಂಚಕರ ಸಂಖ್ಯೆಗೆ ವರ್ಗಾವಣೆಯಾದರೆ? ಇಂಥ ವಂಚನೆಗೆ ನೆರವಾಗುವ ಸೈಬರ್ ಅಪರಾಧಿಗಳ ಜಾಲವೊಂದು ಬೆಳಕಿಗೆ ಬಂದಿದೆ. ಮಿಸ್ಟರ್ ರೋಬಾಟ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಜಾಲವು ಭಾರತೀಯ ಬ್ಯಾಂಕ್ ಗ್ರಾಹಕರ ಮೊಬೈಲ್ಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಸೈಬರ್ ಭದ್ರತಾ ಸಂಸ್ಥೆ ಕ್ಲೌಡ್ಸೆಕ್ ಪತ್ತೆ ಹಚ್ಚಿದೆ.
ಈ ಜಾಲದ ವಿಶೇಷವೆಂದರೆ, ಇದು ತಾನು ವಂಚನೆ ಮಾಡುವುದಷ್ಟೇ ಅಲ್ಲ; ಇತರ ಸೈಬರ್ ವಂಚಕರಿಗೂ ಹಣ ದೋಚಲು ಬೇಕಾದ ತಂತ್ರಾಂಶಗಳನ್ನು ಬಾಡಿಗೆಗೆ ನೀಡುತ್ತದೆ! ಬ್ಯಾಂಕ್ಗಳ ಹೆಸರಿನಲ್ಲಿ ನಕಲಿ ಆಪ್ಗಳನ್ನು ಸೃಷ್ಟಿಸಿ, ಗ್ರಾಹಕರ ಮೊಬೈಲ್ಗೆ ಅವುಗಳನ್ನು ಸೇರಿಸುವುದು ಇದರ ಪ್ರಮುಖ ತಂತ್ರ.
ಗ್ರಾಹಕರ ಮೊಬೈಲ್ನಲ್ಲಿ ಆಪ್ ಅಳವಡಿಕೆಯಾದ ಬಳಿಕ ಅದರ ಐಕಾನ್ ಮಾಯವಾಗುತ್ತದೆ. ಆದರೆ, ಅದು ತನ್ನ ಕೆಲಸ ನಿಲ್ಲಿಸುವುದಿಲ್ಲ. ಮೊಬೈಲ್ಗೆ ಬರುವ ಸಂದೇಶಗಳನ್ನು ಓದಿ ಒಟಿಪಿಗಳನ್ನು ವಂಚಕರಿಗೆ ರವಾನಿಸುತ್ತದೆ. ಜತೆಗೆ, *21 ಕೋಡ್ ಬಳಸಿ ಬ್ಯಾಂಕ್ನಿಂದ ಬರುವ ಕರೆಗಳನ್ನು ಬೇರೆ ಸಂಖ್ಯೆಗೆ ವರ್ಗಾಯಿಸುವ ಮೂಲಕ ಗ್ರಾಹಕರಿಗೆ ಅನುಮಾನ ಬರದಂತೆ ನೋಡಿಕೊಳ್ಳುತ್ತದೆ!
ಈ ವಂಚನೆಯ ಜಾಲಕ್ಕೆ ಬಿಲ್ ಪಾವತಿಯೂ ಒಂದು ‘ಅಸ್ತ್ರ’ವಾಗಿದೆ. ಒಂಬತ್ತು ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳ ನಕಲಿ ಆಪ್ಗಳು ಸೇರಿದಂತೆ ಸುಮಾರು 36 ಆಪ್ಗಳನ್ನು ಈ ಜಾಲ ಹೊಂದಿದೆ. ಅನಿಲ, ನೀರು, ವಿದ್ಯುತ್ ಬಿಲ್ ಪಾವತಿ ಹಾಗೂ ವಾಹನ ಸಂಚಾರ ದಂಡ ಪಾವತಿಯ ಹೆಸರಿನಲ್ಲೂ ನಕಲಿ ಆಪ್ಗಳು ಮತ್ತು ಪುಟಗಳನ್ನು ಈ ಜಾಲ ರೂಪಿಸಿದೆ. ವಾಹನ ದಂಡ ಪಾವತಿಗೆ 9ರಿಂದ 10 ರೂ. ಶುಲ್ಕ ಕೇಳುವ ನೆಪದಲ್ಲಿ ಪ್ಯಾನ್ ಸಂಖ್ಯೆ ಸೇರಿದಂತೆ ವೈಯಕ್ತಿಕ ವಿವರಗಳನ್ನು ಕದಿಯಲಾಗುತ್ತದೆ. ಆಧಾರ್, ಪ್ಯಾನ್, ಬ್ಯಾಂಕ್ ಕಾರ್ಡ್ ಸಂಖ್ಯೆ, ಸಿವಿವಿ, ಎಟಿಎಂ ಪಿನ್, ಯುಪಿಐ ಪಿನ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಿವರಗಳನ್ನೂ ನಕಲಿ ಪುಟಗಳ ಮೂಲಕ ಸಂಗ್ರಹಿಸಲಾಗುತ್ತದೆ.
ಈ ತಂತ್ರಾಂಶವು ಕನಿಷ್ಠ 48 ಗಂಟೆಗಳ ಕಾಲ ನಿಷ್ಕ್ರಿಯವಾಗಿದ್ದು, ಬಳಿಕ ಕಾರ್ಯಾರಂಭ ಮಾಡುವಂತೆ ರೂಪಿಸಲಾಗಿದೆ. ಭದ್ರತಾ ವ್ಯವಸ್ಥೆಗಳ ಕಣ್ಣು ತಪ್ಪಿಸಲು ಹೀಗೆ ಮಾಡಲಾಗುತ್ತಿದೆ. ಎರಡು ವಂಚಕ ಗುಂಪುಗಳ ಮಾಹಿತಿಯಲ್ಲೇ 307 ಮೊಬೈಲ್ಗಳು ಇದರ ‘ಪ್ರಭಾವ’ಕ್ಕೆ ಒಳಗಾಗಿರುವುದು ಮತ್ತು 8,677 ಸಂದೇಶಗಳನ್ನು ಕದ್ದಿರುವುದು ಪತ್ತೆಯಾಗಿದೆ. ಈ ಪೈಕಿ ಶೇ. 58ರಷ್ಟು ಸಂತ್ರಸ್ತರ ಮೊಬೈಲ್ಗಳಲ್ಲಿ ಕಾಲ್ ಟ್ರಾನ್ಸ್ಫರ್ (ಕರೆ ವರ್ಗಾವಣೆ) ಸಕ್ರಿಯವಾಗಿತ್ತು ಎಂದು ಕ್ಲೌಡ್ಸೆಕ್ ತಿಳಿಸಿದೆ.
ಅಪರಿಚಿತ ಲಿಂಕ್ಗಳ ಮೂಲಕ ಬ್ಯಾಂಕ್ ಅಥವಾ ಬಿಲ್ ಪಾವತಿ ಆಪ್ಗಳನ್ನು ಡೌನ್ಲೋಡ್ ಮಾಡಬೇಡಿ. ಆಪ್ನ ಅಧಿಕೃತತೆಯನ್ನು ಪರಿಶೀಲಿಸಿ. ಅನುಮಾನಾಸ್ಪದ ಆಪ್ಗಳಿಗೆ ವೈಯಕ್ತಿಕ ಮಾಹಿತಿ, ಪಿನ್ ಅಥವಾ ಬ್ಯಾಂಕ್ ವಿವರಗಳನ್ನು ನೀಡಬೇಡಿ.