ಟೇಬಲ್​ ಕುಟ್ಟಿ ನನ್ನನ್ನೇ... ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ 4ನೇ ಬಾರಿ ಟ್ರಾನ್ಸ್​ಫರ್​ ಆದ ಐಎಎಸ್ ಅಧಿಕಾರಿ​​ ನೇಹಾ ಅಳಲು | IAS Neha Marvya

ಐಎಎಸ್ ಅಧಿಕಾರಿ ನೇಹಾ ಮಾರ್ವ್ಯಾ
ಐಎಎಸ್ ಅಧಿಕಾರಿ ನೇಹಾ ಮಾರ್ವ್ಯಾ
Published on: 

ಪ್ರಮುಖ ಮುಖ್ಯಾಂಶಗಳು

  • ಐಎಎಸ್ ಅಧಿಕಾರಿ ನೇಹಾ ಮಾರ್ವ್ಯಾ (Neha Marvya) ಶನಿವಾರ ಮತ್ತೆ ವರ್ಗಾವಣೆ
  • ಐಎಎಸ್ ಅಧಿಕಾರಿಗಳ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಬಹಿರಂಗವಾಗಿ ಸೀನಿಯರ್​ ಅಧಿಕಾರಿಗಳನ್ನು ದುಃಖ ತೋಡಿಕೊಂಡ ನೇಹಾ
  • ಒಂದೇ ವರ್ಷಕ್ಕೆ 4 ಬಾರಿ ವರ್ಗಾವಣೆಯನ್ನು ಸಹಿಸಲು ಸಾಧ್ಯವಿಲ್ಲ
ಭೋಪಾಲ್: ಐಎಎಸ್ ಅಧಿಕಾರಿ ನೇಹಾ ಮಾರ್ವ್ಯಾ (Neha Marvya) ಶನಿವಾರ ಮತ್ತೆ ವರ್ಗಾವಣೆ ಮಾಡಲಾಗಿದ್ದು, ಇದರಿಂದ ತೀವ್ರ ಸಿಡಿಮಿಡಿಗೊಂಡ ಅವರು, ಐಎಎಸ್ ಅಧಿಕಾರಿಗಳ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಬಹಿರಂಗವಾಗಿ ಸೀನಿಯರ್​ ಅಧಿಕಾರಿಗಳನ್ನು ಮನಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದೇ ವರ್ಷಕ್ಕೆ 4 ಬಾರಿ ವರ್ಗಾವಣೆ

ಇತ್ತೀಚಿನ ವರ್ಗಾವಣೆ ಪಟ್ಟಿಯ ಪ್ರಕಾರ, ನೇಹಾರನ್ನು 'ಆದಿವಾಸಿ ಪ್ರದೇಶ ಅಭಿವೃದ್ಧಿ ಯೋಜನೆಗಳು' ಮತ್ತು 'ಮ್ಯಾಪ್‌ಸೆಟ್' (MAPSET) ನಿರ್ದೇಶಕಿ ಹುದ್ದೆಯಿಂದ ತೆಗೆದುಹಾಕಲಾಗಿದ್ದು, ಈಗ 'ಪರಿಶಿಷ್ಟ ಪಂಗಡಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ'ದ ನಿರ್ದೇಶಕಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಅದು ಕೂಡ ದಿಢೀರ್​ ಎಂಬಂತೆ. ಇದನ್ನು ಸಹಿಸಲಾಗದೆ, ಗ್ರೂಪ್‌ನಲ್ಲಿ ದೊಡ್ಡ ಮೆಸೇಜ್ ಹಾಕಿರುವ ನೇಹಾ, "ನನ್ನನ್ನು ಕೇವಲ 50 ದಿನಗಳಲ್ಲಿ ಮತ್ತೆ ವರ್ಗಾವಣೆ ಮಾಡಿರುವುದುನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಕೆಳಹಂತದ ಸಿಬ್ಬಂದಿಯಿಂದ ಬೆದರಿಕೆ

ಐಎಎಸ್ ಅಸೋಸಿಯೇಷನ್ ಗ್ರೂಪ್ ಕೇವಲ ಯಾರದ್ದೋ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಮಾತ್ರವಿಲ್ಲ. ಹೀಗಾಗಿಯೇ, ಇಲ್ಲಿ ನಾನು ನನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದೇನೆ. ಒಂದೇ ವರ್ಷದಲ್ಲಿ ನಾಲ್ಕು ಬಾರಿ ನನ್ನನ್ನು ಟ್ರಾನ್ಸ್​ಫರ್​ ಮಾಡಿದ್ದಾರೆ. ಹೀಗೆ ಮಾಡಿದ್ರೆ ಕೆಲಸ ಮಾಡೋದು ಹೇಗೆ? ನನ್ನ ಕೆಳಗೆ ಕೆಲಸ ಮಾಡುತ್ತಿರುವ ಒಂದಷ್ಟು ಸಿಬ್ಬಂದಿಗಳು ನನ್ನ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಸಿಬ್ಬಂದಿಗಳು ನನ್ನ ಟೇಬಲ್ ಕುಟ್ಟಿ,, ನಿಮ್ಮನ್ನು ವರ್ಗಾವಣೆ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಹಿರಿಯ ಐಎಎಸ್ ಅಧಿಕಾರಿಗಳ ಬೆಂಬಲ

ನೇಹಾ ಅವರ ದೀರ್ಘ ಮೆಸೇಜ್‌ಗೆ ಗ್ರೂಪ್‌ನಲ್ಲಿ ಪ್ರತಿಕ್ರಿಯಿಸಿರುವ ಹಿರಿಯ ಹಾಗೂ ನಿವೃತ್ತ ಐಎಎಸ್ ಅಧಿಕಾರಿಗಳು, ಯುವ ಅಧಿಕಾರಿಯ ಬೆನ್ನಿಗೆ ನಿಂತಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಸತ್ಯಾನಂದ ಮಿಶ್ರಾ, 'ನಿಮ್ಮ ನೋವು ನಮಗೆ ಅರ್ಥವಾಗುತ್ತೆ. ಒಬ್ಬ ಅಧಿಕಾರಿಗೆ ಇಷ್ಟೊಂದು ಕಡಿಮೆ ಅವಧಿಯಲ್ಲಿ ವರ್ಗಾವಣೆಯಾಗುವುದು ನೋವಿನ ಸಂಗತಿ' ಎನ್ನುತ್ತಲೇ, ಸಹೋದ್ಯೋಗಿಗಳು ಮತ್ತು ಕಿರಿಯ ಸಿಬ್ಬಂದಿಯೊಂದಿಗೆ ಹೇಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬಹುದು ಎಂಬುದರತ್ತ ಗಮನಹರಿಸಲು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಸವಾಲುಗಳನ್ನು ಎದುರಿಸಲು ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯನ್ನು ಬೆಳೆಸಿಕೊಳ್ಳುವಂತೆ ಕಿವಿಮಾತು ನೀಡಿದ್ದಾರೆ,(ಏಜೆನ್ಸೀಸ್).