ತಾಯಿ ಕಣ್ಣೀರು ಹಾಕುತ್ತಿದ್ದಾಳೆ, ಯುವಕರು ದಾರಿ ತಪ್ಪುತ್ತಿದ್ದಾರೆ..! ಮಮತಾ ಕೋಟೆಯಲ್ಲಿ ಮೋದಿ ಘರ್ಜನೆ | Narendra Modi

ತಾಯಿ ಕಣ್ಣೀರು ಹಾಕುತ್ತಿದ್ದಾಳೆ, ಯುವಕರು ದಾರಿ ತಪ್ಪುತ್ತಿದ್ದಾರೆ..! ಮಮತಾ ಕೋಟೆಯಲ್ಲಿ ಮೋದಿ ಘರ್ಜನೆ
ತಾಯಿ ಕಣ್ಣೀರು ಹಾಕುತ್ತಿದ್ದಾಳೆ, ಯುವಕರು ದಾರಿ ತಪ್ಪುತ್ತಿದ್ದಾರೆ..! ಮಮತಾ ಕೋಟೆಯಲ್ಲಿ ಮೋದಿ ಘರ್ಜನೆ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಂತಿಮ ಹಂತದ ಚುನಾವಣಾ ಪ್ರಚಾರದ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ವಿರುದ್ಧ ಹಿಂದೆಂದೂ ಕಾಣದ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಟಿಎಂಸಿಯ ಮೂಲ ಮಂತ್ರವಾಗಿದ್ದ ಮಾ, ಮಾಟಿ, ಮಾನುಷ್ ಇಂದು ಕೇವಲ ಭ್ರಷ್ಟಾಚಾರ ಮತ್ತು ದಬ್ಬಾಳಿಕೆಯ ಸಂಕೇತವಾಗಿ ಮಾರ್ಪಟ್ಟಿದೆ ಎಂದು ಮೋದಿ ಆಕ್ರೋಶ ಹೊರಹಾಕಿದ್ದಾರೆ.

'ಮಾ, ಮಾಟಿ, ಮಾನುಷ್' ಹಾದಿ ತಪ್ಪಿದ ಕಥೆ!

ಈ ಬಗ್ಗೆ ಉತ್ತರ 24 ಪರಗಣದಲ್ಲಿ ನಡೆದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ, 15 ವರ್ಷಗಳ ಹಿಂದೆ ಟಿಎಂಸಿ ಅಧಿಕಾರಕ್ಕೆ ಬಂದಾಗ ಇದೇ ಘೋಷಣೆಯನ್ನು ಕೂಗಿತ್ತು. ಆದರೆ ಇಂದು ಅವರು ಈ ಮಾತುಗಳನ್ನು ಆಡಲು ನಾಚಿಕೆಪಡುತ್ತಿದ್ದಾರೆ. ಯಾಕೆಂದರೆ ಆ ಮಾತುಗಳನ್ನು ಆಡಿದರೆ ಅವರ ಪಾಪದ ಕೊಡ ತುಂಬಿರುವುದು ಜಗತ್ತಿಗೆ ತಿಳಿಯುತ್ತದೆ ಎಂದು ಕುಟುಕಿದ್ದಾರೆ.

ಮೋದಿ ಅವರ ಭಾಷಣದ ಪ್ರಮುಖಾಂಶಗಳು:

ಮಾ (ತಾಯಿ): ಟಿಎಂಸಿಯ ಕ್ರೌರ್ಯದಿಂದಾಗಿ ಬಂಗಾಳದ ತಾಯಂದಿರು ಕಣ್ಣೀರು ಹಾಕುವಂತಾಗಿದೆ.
ಮಾಟಿ (ಮಣ್ಣು): ರಾಜ್ಯದ ಪವಿತ್ರ ಮಣ್ಣನ್ನು ಇಂದು 'ಸಿಂಡಿಕೇಟ್'ಗಳು ಮತ್ತು ವಿದೇಶಿ ನುಸುಳುಕೋರರಿಗೆ ಹಸ್ತಾಂತರಿಸಲಾಗಿದೆ.
ಮಾನುಷ್ (ಮನುಷ್ಯ): ಬಂಗಾಳದ ಮನುಷ್ಯ ಅಂದರೆ ಇಲ್ಲಿನ ಜನತೆ ಉದ್ಯೋಗ ಮತ್ತು ಭದ್ರತೆಯಿಲ್ಲದೆ ರಾಜ್ಯದಿಂದಲೇ ಪಲಾಯನ ಮಾಡುವಂತಾಗಿದೆ.

93% ಮತದಾನ: ಟಿಎಂಸಿ ಅಹಂಕಾರ ಉಡೀಸ್!

ಏಪ್ರಿಲ್ 23 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆಯ ಶೇ.93 ಮತದಾನವಾಗಿರುವುದನ್ನು ಉಲ್ಲೇಖಿಸಿದ ಮೋದಿ, ಇದು ಬದಲಾವಣೆಯ ಸಂಕೇತ ಎಂದರು. ಮೊದಲ ಹಂತದ ಮತದಾನದ ಫಲಿತಾಂಶವು ಟಿಎಂಸಿಯ ಸೊಕ್ಕನ್ನು ಅಡಗಿಸಿದೆ. ಈಗ ಎರಡನೇ ಹಂತದಲ್ಲಿ ಬಿಜೆಪಿಯ ಭರ್ಜರಿ ಜಯ ಮತ್ತು ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದು ಸೂರ್ಯನಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವಶಕ್ತಿಯ ಸೃಜನಶೀಲತೆ ಮತ್ತು ಬಿಜೆಪಿ ಭರವಸೆ

ಬಂಗಾಳದ ಯುವಕರ ಪ್ರತಿಭೆಯನ್ನು ಕೊಂಡಾಡಿದ ಮೋದಿ, ಟಿಎಂಸಿ ಸರ್ಕಾರವು ಇಲ್ಲಿನ ಯುವಜನಾಂಗವನ್ನು ಉದ್ಯೋಗದ ಬದಲು ಅಮಲು ಪದಾರ್ಥಗಳ ದಾಸರನ್ನಾಗಿ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಬಂಗಾಳದ ಮಕ್ಕಳು ಸೃಜನಶೀಲತೆಯಲ್ಲಿ ಸಿದ್ಧಹಸ್ತರು. ಸಾಮಾಜಿಕ ಜಾಲತಾಣಗಳಲ್ಲಿ ಅವರು ಮಾಡುವ ವಿಡಿಯೋಗಳು, ರೀಲ್‌ಗಳು ಅದ್ಭುತವಾಗಿವೆ. 'ಝಲ್ ಮುರಿ' ಮಾರುವವರಿಂದ ಹಿಡಿದು ಕಂಟೆಂಟ್ ಕ್ರಿಯೇಟರ್‌ಗಳವರೆಗೆ ಎಲ್ಲರಿಗೂ ಬಿಜೆಪಿ ಶಕ್ತಿ ತುಂಬಲಿದೆ. ನಾವು ಬಂಗಾಳವನ್ನು 'ಕಂಟೆಂಟ್ ಕ್ರಿಯೇಷನ್' ಮತ್ತು ಆರ್ಥಿಕತೆಯ ಕೇಂದ್ರವನ್ನಾಗಿ ಮಾಡುತ್ತೇವೆ ಎಂದು ಮೋದಿ ಹೇಳಿದ್ದಾರೆ.

ಬಂಗಾಳದ ಕ್ರೀಡಾ ಸಂಸ್ಕೃತಿಗೆ ಕುತ್ತು ತಂದ 'ಜಂಗಲ್ ರಾಜ್'

ಕೆಲವು ತಿಂಗಳ ಹಿಂದೆ ಕೋಲ್ಕತ್ತಾದಲ್ಲಿ ನಡೆದ ಫುಟ್ಬಾಲ್ ಕ್ರೀಡಾಕೂಟದ ವೇಳೆ ನಡೆದ ಅಹಿತಕರ ಘಟನೆಗಳನ್ನು ಸ್ಮರಿಸಿದ ಪ್ರಧಾನಿ, ಟಿಎಂಸಿಯ ಸಿಂಡಿಕೇಟ್ ರಾಜ್ ಕ್ರೀಡಾ ವ್ಯವಸ್ಥೆಯನ್ನು ಕುಸಿದುಬೀಳುವಂತೆ ಮಾಡಿದೆ ಎಂದರು. ಖೆಲೋ ಇಂಡಿಯಾ ಅಭಿಯಾನದ ಮೂಲಕ ಬಂಗಾಳದ ಕ್ರೀಡಾಪಟುಗಳಿಗೆ ಹೊಸ ಭವಿಷ್ಯ ನೀಡುವುದಾಗಿ ಮೋದಿ ಭರವಸೆ ನೀಡಿದ್ದಾರೆ.

ತೀವ್ರಗೊಂಡ ಚುನಾವಣಾ ಕಣ

ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಪ್ರಧಾನಿ ಮೋದಿ ಅವರ ಸತತ ರ‍್ಯಾಲಿಗಳಿಂದಾಗಿ ಬಂಗಾಳದಲ್ಲಿ ಈಗ ಬಿಜೆಪಿಯ ಅಲೆ ಎದ್ದಿದೆ. ಉಳಿದಿರುವ 142 ಕ್ಷೇತ್ರಗಳಿಗೆ ಏಪ್ರಿಲ್ 29 ರಂದು ಮತದಾನ ನಡೆಯಲಿದ್ದು, ಬಂಗಾಳದ ಗದ್ದುಗೆ ಯಾರ ಪಾಲಾಗಲಿದೆ ಎಂಬುದು ಇಡೀ ದೇಶದ ಕುತೂಹಲವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net