ಎಕ್ಸ್​ನಿಂದ 600ಕ್ಕೂ ಹೆಚ್ಚು ಖಾತೆ ಡಿಲೀಟ್ | X Accounts

X Accounts
X Accounts
Published on
ನವದೆಹಲಿ: ಎಐ ಚಾಟ್ಬಾಟ್ ಗ್ರೋಕ್ ವಿರುದ್ಧ ಕೇಳಿ ಬಂದ ಅಶ್ಲೀಲತೆ ದೂರಿನ ಹಿನ್ನೆಲೆಯಲ್ಲಿ ಲೋಪವನ್ನು ಒಪ್ಪಿಕೊಂಡಿರುವ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್, 3500ಕ್ಕೂ ಹೆಚ್ಚು ಕಂಟೆಂಟ್ಗಳನ್ನು ಬ್ಲಾಕ್ ಮಾಡಿ 600ಕ್ಕೂ ಅಧಿಕ ಖಾತೆಗಳನ್ನು ಡಿಲೀಟ್ ಮಾಡಿದ್ದು, ಭಾರತದ ಕಾನೂನಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದಾಗಿ ಆಶ್ವಾಸನೆ ನೀಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 
ಗ್ರೋಕ್ ಬಳಸಿಕೊಂಡು ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಲಾಗುತ್ತಿದೆಯೆಂದು ವ್ಯಾಪಕ ಕಳವಳ ವ್ಯಕ್ತವಾಗಿರುವುದರಿಂದ ಎಲಾನ್ ಮಸ್ಕ್ ಮಾಲೀಕತ್ವದ ಕಂಪನಿ ಈ ಕ್ರಮಗಳನ್ನು ಕೈಗೊಂಡಿದೆ. ಭವಿಷ್ಯದಲ್ಲಿ ಇಂಥ ಕಂಟೆಂಟ್​ಗಳಿಗೆ ವೇದಿಕೆ ಅವಕಾಶ ಕಲ್ಪಿಸುವುದಿಲ್ಲವೆಂದೂ ಎಕ್ಸ್ ಭರವಸೆ ನೀಡಿದೆ. ಭಾರತೀಯ ಕಾನೂನಿನ ನಿಯಮಗಳ ಪರಿಪಾಲನೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ತನ್ನ ಕಂಟೆಂಟ್ ಬದಲಾವಣೆ ಪ್ರಕ್ರಿಯೆಗಳನ್ನು ಬಲಪಡಿಸಲು ಕೂಡ ಒಪ್ಪಿಕೊಂಡಿದೆ.
ಐಟಿ ಸಚಿವಾಲಯ ಕಳವಳ: ಗ್ರೋಕ್​ನಂತಹ ಎಐ ಸೇವೆಗಳ ಮುಖಾಂತರ ಅಸಭ್ಯ ಮತ್ತು ಲೈಂಗಿಕ ಕಂಟೆಂಟ್​​ಗಳನ್ನು ಸೃಷ್ಟಿಸಿ ಹಂಚಿಕೊಳ್ಳಲಾಗುತ್ತಿರುವುದಕ್ಕೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತೀವ್ರ ಕಳವಳ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಸಾವಿರಾರು ಖಾತೆಗಳ ವಿರುದ್ಧ ಕಠಿಣ ಕ್ರಮಕ್ಕೆ ಎಕ್ಸ್ ಮುಂದಾಗಿದೆ.
ವಿಶೇಷವಾಗಿ ಗ್ರೋಕ್ ಮೂಲಕ ಸೃಷ್ಟಿಸಲಾದ ಎಲ್ಲ ಅಶ್ಲೀಲ, ಅಸಭ್ಯ ಮತ್ತು ಕಾನೂನುಬಾಹಿರ ಅಂಶಗಳನ್ನು ತೆಗೆದು ಹಾಕುವಂತೆ ಐಟಿ ಸಚಿವಾಲಯ ಜ. 2ರಂದು ಎಕ್ಸ್​ಗೆ ಆದೇಶಿಸಿತ್ತು. ತಪ್ಪಿದರೆ, ಐಟಿ ಕಾನೂನು ಹಾಗೂ ಇತರ ಸೂಕ್ತ ಕಾಯಿದೆಗಳಡಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿತ್ತು. ಕ್ರಮ ಕೈಗೊಂಡ ವರದಿಯನ್ನು (ಆಕ್ಷನ್ ಟೇಕನ್ ರಿಪೋರ್ಟ್- ಎಟಿಆರ್) 72 ಗಂಟೆಯೊಳಗೆ ಸಲ್ಲಿಸುವಂತೆಯೂ ನಿರ್ದೇಶಿಸಿತ್ತು.

ಮಹಿಳೆಯರಿಗೆ ಕಿರುಕುಳ

ನಕಲಿ ಪ್ರೊಫೈಲ್​​ಗಳ ಸೃಷ್ಟಿ ಮಾತ್ರವಲ್ಲದೆ ಚಿತ್ರ ಅಥವಾ ವಿಡಿಯೋಗಳಲ್ಲಿ ಕಂಡುಬಂದ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲು ಕೂಡ ಗ್ರೋಕ್ ಅನ್ನು ಬಳಸಲಾಗುತ್ತಿದೆ ಎಂದು ಸಚಿವಾಲಯ ಹೇಳಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net