ರಾಜೀನಾಮೆ ನೀಡಿ ಐದು ತಿಂಗಳಾದರೂ ಸಿಗುತ್ತಿಲ್ಲ ಮನೆ.. ಫಾರ್ಮ್‌ಹೌಸ್‌ನಲ್ಲೇ ಕಾಲ ಕಳೆಯುತ್ತಿದ್ದಾರಂತೆ ಮಾಜಿ ಉಪರಾಷ್ಟ್ರಪತಿ ! | Jagdeep Dhankhar

Jagdeep Dhankhar |  ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್
Jagdeep Dhankhar | ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್
Published on
ದೆಹಲಿ: ಜುಲೈನಲ್ಲಿಯೇ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜಗದೀಪ್ ಧನಕರ್ ಅವರಿಗೆ ಇನ್ನೂ ಅಧಿಕೃತ ನಿವಾಸವನ್ನು ಒದಗಿಸಲಾಗಿಲ್ಲ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ತಮ್ಮ ಹುದ್ದೆಯನ್ನು ತೊರೆದ ಧನಕರ್​, ಸೆಪ್ಟೆಂಬರ್‌ನಲ್ಲಿ ಉಪರಾಷ್ಟ್ರಪತಿಗಳ ಅಧಿಕೃತ ನಿವಾಸವಾದ ಎನ್‌ಕ್ಲೇವ್​ನ್ನು ಖಾಲಿ ಮಾಡಿ, ದಕ್ಷಿಣ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿರುವ ಖಾಸಗಿ ತೋಟದ ಮನೆಗೆ ತೆರಳಿದ್ದು, ಐಎನ್‌ಎಲ್‌ಡಿ (INLD) ನಾಯಕ ಅಭಯ್ ಚೌಟಾಲಾ ಅವರಿಗೆ ಸೇರಿದ ಖಾಸಗಿ ಫಾರ್ಮ್‌ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ.
ಆಗಸ್ಟ್ 22 ರಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಧನಕರ್​, ತಮಗೆ ಅರ್ಹವಾದ ಅಧಿಕೃತ ನಿವಾಸವನ್ನು ನೀಡುವಂತೆ ಮನವಿ ಮಾಡಿದ್ದರು. ಆದರೆ ಇಲ್ಲಿಯವರೆಗೆ, ಅವರಿಗೆ ಸೂಕ್ತವಾದ ವಸತಿ ಸೌಕರ್ಯವನ್ನು ಒದಗಿಸಲಾಗಿಲ್ಲ ಎಂದು ಅವರ ಆಪ್ತರೊಬ್ಬರು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮಾಜಿ ಉಪರಾಷ್ಟ್ರಪತಿಯಾಗಿ ಧನಕರ್​ ಅವರಿಗೆ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಬಂಗಲೆಯನ್ನು ಮಂಜೂರು ಮಾಡಲಾಗಿದೆ ಎಂದು ವರದಿಯಾಗಿದ್ದರೂ, ಅದರ ನವೀಕರಣ (Renovation) ಮತ್ತು ದುರಸ್ತಿ ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಅವರು ಅಲ್ಲಿಗೆ ಸ್ಥಳಾಂತರಗೊಳ್ಳಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮಾಜಿ ಉಪರಾಷ್ಟ್ರಪತಿಗಳಾಗಿರುವವರಿಗೆ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿ ಪಿಂಚಣಿ, VIII ನೇ ವಿಧದ ಬಂಗಲೆ, ಒಬ್ಬ ವೈಯಕ್ತಿಕ ಕಾರ್ಯದರ್ಶಿ, ಒಬ್ಬ ಹೆಚ್ಚುವರಿ ವೈಯಕ್ತಿಕ ಕಾರ್ಯದರ್ಶಿ, ಒಬ್ಬ ವೈಯಕ್ತಿಕ ಸಹಾಯಕ, ಒಬ್ಬ ವೈದ್ಯರು, ಒಬ್ಬ ನರ್ಸಿಂಗ್ ಅಧಿಕಾರಿ ಮತ್ತು ನಾಲ್ವರು ವೈಯಕ್ತಿಕ ಸಹಾಯಕರನ್ನು ನೀಡಬೇಕು ಎನ್ನುವ ನಿಯಮವಿದ್ದು, ಅವರ ನಿಧನದ ಬಳಿಕ ಅವರ ಪತ್ನಿ ಸಣ್ಣ ವಿಧದ VII ಮನೆಗೆ ಅರ್ಹರಾಗಿರುತ್ತಾರೆ ಎಂದು ವರದಿಯಾಗಿದೆ.

ರಾಜೀನಾಮೆ ಪ್ರಸಂಗ..

ಅನಾರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ಧನಕರ್ ಜುಲೈ 21 ರಂದು ನಡೆದ ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ರಾಜೀನಾಮೆಯ ಹಿಂದೆ ರಾಜಕೀಯ ಕಾರಣಗಳೂ ಇವೆ ಎಂದು ಅನೇಕರು ಆರೋಪಿಸಿದ್ದಾರೆ.
ನ್ಯಾಯಾಧೀಶರೊಬ್ಬರ ವಿರುದ್ಧದ ವಿರೋಧ ಪಕ್ಷಗಳ ನಿರ್ಣಯವನ್ನು ಅಂಗೀಕರಿಸಿದ ಕಾರಣಕ್ಕಾಗಿ ಕೇಂದ್ರ ಸರ್ಕಾರ ಮತ್ತು ಧನಕರ್​ ಮಧ್ಯೆ ಮನಸ್ಥಾಪ ಉಂಟಾಗಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಸದ್ಯ ತೆರವಾಗಿರುವ ಸ್ಥಾನಕ್ಕೆ ಸಿ.ಪಿ. ರಾಧಾಕೃಷ್ಣನ್ ಅವರು ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net