ಭಾರತದಲ್ಲಿ ಮಳೆ ಮೋಡಗಳೇ ನಾಪತ್ತೆ: ಉಪಗ್ರಹದಲ್ಲಿ ಸೆರೆಯಾಯ್ತು ಭೀಕರ ದೃಶ್ಯ, ಕರಗದ ವರುಣನ ಮುನಿಸು! Rain Clouds

ಭಾರತದಲ್ಲಿ ಮಳೆ ಮೋಡಗಳೇ ನಾಪತ್ತೆ: ಉಪಗ್ರಹದಲ್ಲಿ ಸೆರೆಯಾಯ್ತು ಭೀಕರ ದೃಶ್ಯ, ಕರಗದ ವರುಣನ ಮುನಿಸು! Rain Clouds
ಭಾರತದಲ್ಲಿ ಮಳೆ ಮೋಡಗಳೇ ನಾಪತ್ತೆ: ಉಪಗ್ರಹದಲ್ಲಿ ಸೆರೆಯಾಯ್ತು ಭೀಕರ ದೃಶ್ಯ, ಕರಗದ ವರುಣನ ಮುನಿಸು! Rain Clouds
Published on

ಪ್ರಮುಖ ಮುಖ್ಯಾಂಶಗಳು

  • ಉಪಗ್ರಹ ಚಿತ್ರ ನೋಡಿ ಆತಂಕಗೊಂಡ ಹವಾಮಾನ ತಜ್ಞರು!
  • ದೇಶಾದ್ಯಂತ ಮುಂಗಾರು ಮಳೆ ಭೀಕರ ಕೊರತೆ
  • ಪ್ರಮುಖ ರಾಜ್ಯಗಳಲ್ಲಿ ಮಳೆ ಮೋಡಗಳೇ ನಾಪತ್ತೆ
  • ಜೂನ್ ಮುಗಿಯುತ್ತಿದ್ದರೂ ಕರುಣೆ ತೋರದ ಮುಂಗಾರು
Rain Clouds : ಜೂನ್ ತಿಂಗಳು ಮುಗಿಯಲು ಕೇವಲ ನಾಲ್ಕೇ ದಿನಗಳು ಬಾಕಿ ಇವೆ. ಆದರೂ, ದೇಶದ ಯಾವುದೇ ರಾಜ್ಯದಲ್ಲೂ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಮತ್ತೊಂದೆಡೆ, ದೇಶದ ಅನ್ನದಾತ ಮುಂಗಾರು ಮಳೆಯ ಸಣ್ಣದೊಂದು ಸೂಚನೆಗಾಗಿಯೂ ಆಕಾಶದತ್ತ ಕಣ್ಣು ನೆಟ್ಟು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾನೆ. ಆದರೆ, ಪ್ರಕೃತಿ ಮಾತ್ರ ಇನ್ನೂ ಕರುಣೆ ತೋರಿಲ್ಲ. ಈ ಆತಂಕಕಾರಿ ಸನ್ನಿವೇಶದ ನಡುವೆಯೇ, ಕೆಲವು ಆಘಾತಕಾರಿ ವಿದ್ಯಮಾನಗಳು ಬೆಳಕಿಗೆ ಬಂದಿವೆ.
ಇತ್ತೀಚಿನ ಉಪಗ್ರಹ ಚಿತ್ರಗಳ ಪ್ರಕಾರ ದೇಶದ ಹಲವು ಭಾಗಗಳಲ್ಲಿ ಮಳೆ ಮೋಡಗಳೇ ಕಾಣಿಸುತ್ತಿಲ್ಲ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಜೂನ್ ಕೊನೆಯ ವಾರದಲ್ಲಿ ದಟ್ಟವಾಗಿರಬೇಕಾದ ಮಳೆ ಮೋಡಗಳು ಈ ಬಾರಿ ಮಧ್ಯ, ಪಶ್ಚಿಮ ಮತ್ತು ವಾಯುವ್ಯ ಭಾರತದ ಭಾಗಗಳಲ್ಲಿ ಪತ್ತೆಯಾಗಿಲ್ಲ.
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಅಂಕಿ-ಅಂಶಗಳ ಪ್ರಕಾರ, ಜೂನ್ 4 ರಿಂದ ಜೂನ್ 26 ರವರೆಗಿನ ಅವಧಿಯಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ. 45 ರಷ್ಟು ಮಳೆ ಕೊರತೆ ದಾಖಲಾಗಿದೆ. ಗುರುವಾರ ಮುಂಜಾನೆ ತೆಗೆಯಲಾದ 'ಇನ್‌ಸ್ಯಾಟ್-3ಡಿಆರ್' (INSAT-3DR) ಇನ್‌ಫ್ರಾರೆಡ್ ಉಪಗ್ರಹ ಚಿತ್ರಗಳಲ್ಲಿ ಈ ಭೀಕರ ಮಳೆ ಕೊರತೆಯ ಪರಿಸ್ಥಿತಿ ಸ್ಪಷ್ಟವಾಗಿ ಗೋಚರಿಸಿದೆ.
ಸದ್ಯದ ಉಪಗ್ರಹ ಚಿತ್ರಗಳ ಪ್ರಕಾರ, ಈಶಾನ್ಯ ರಾಜ್ಯಗಳು, ಬಂಗಾಳ ಕೊಲ್ಲಿಯ ಉತ್ತರ ಭಾಗ ಮತ್ತು ದಕ್ಷಿಣ ದ್ವೀಪಕಲ್ಪದ ಕೆಲವು ಭಾಗಗಳಲ್ಲಿ ಮಾತ್ರ ದಟ್ಟವಾದ ಮಳೆ ಮೋಡಗಳು ಕಂಡುಬಂದಿವೆ. ಆದರೆ, ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಉತ್ತಮ ಮಳೆ ಪಡೆಯಬೇಕಿದ್ದ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ದೆಹಲಿ-ಎನ್‌ಸಿಆರ್‌ನಂತಹ ಪ್ರಮುಖ ಹಾಗೂ ವಿಶಾಲವಾದ ಪ್ರದೇಶಗಳಲ್ಲಿ ಮಳೆ ಮೋಡಗಳೇ ಇಲ್ಲದೆ ಸಂಪೂರ್ಣ ಖಾಲಿಯಾಗಿರುವುದು ಆತಂಕ ಮೂಡಿಸಿದೆ.
ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ರಾಜ್ಯವಾರು ಮಳೆ ಅಂಕಿ-ಅಂಶಗಳ ಪ್ರಕಾರ, ಮಧ್ಯ ಮತ್ತು ಉತ್ತರ ಭಾರತದ ಹಲವು ರಾಜ್ಯಗಳು ಭೀಕರ ಮಳೆ ಕೊರತೆಯನ್ನು ಎದುರಿಸುತ್ತಿವೆ. ಮಧ್ಯಪ್ರದೇಶದಲ್ಲಿ ವಾಡಿಕೆಗಿಂತ ಕೇವಲ ಅರ್ಧದಷ್ಟು ಮಾತ್ರ ಮಳೆಯಾಗಿದ್ದರೆ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲೂ ಗಣನೀಯ ಪ್ರಮಾಣದ ಮಳೆ ಕೊರತೆ ದಾಖಲಾಗಿದೆ. ಅದರಲ್ಲೂ ವಿಶೇಷವಾಗಿ ಗುಜರಾತ್‌ನಲ್ಲಿ ಪರಿಸ್ಥಿತಿ ಮಿತಿಮೀರಿದ್ದು, ಅಲ್ಲಿ ವಾಡಿಕೆಗಿಂತ ಬರೋಬ್ಬರಿ ಶೇ. 84 ರಷ್ಟು ಕಡಿಮೆ ಮಳೆಯಾಗಿದೆ.

ಮಳೆ ಇಷ್ಟೊಂದು ಕುಂಠಿತಗೊಳ್ಳಲು ಕಾರಣವೇನು?

ಹವಾಮಾನ ತಜ್ಞರ ಪ್ರಕಾರ, ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಈ ಬಾರಿ ಯಾವುದೇ ಪ್ರಬಲ ಕಡಿಮೆ ಒತ್ತಡದ ವಲಯಗಳು ಸೃಷ್ಟಿಯಾಗದಿರುವುದೇ ಈ ಭೀಕರ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆ. ಸಾಮಾನ್ಯವಾಗಿ ಇಂತಹ ವಾಯುಭಾರ ಕುಸಿತಗಳು ಭೂಭಾಗಕ್ಕೆ ಪ್ರವೇಶಿಸಿ ತೇವಾಂಶವನ್ನು ಹೊತ್ತು ತರುತ್ತವೆ. ಆದರೆ, ಪ್ರಸ್ತುತ ಅಂತಹ ಯಾವುದೇ ಬಲವಾದ ವ್ಯವಸ್ಥೆ ಇಲ್ಲದಿರುವುದರಿಂದ, ದೇಶದ ಒಳನಾಡಿಗೆ ತೇವಾಂಶದ ಪೂರೈಕೆ ಸ್ಥಗಿತಗೊಂಡು ವ್ಯಾಪಕ ಮಳೆಯಾಗುತ್ತಿಲ್ಲ.
ಆದರೆ, ಈ ಆತಂಕದ ನಡುವೆಯೂ ಸದ್ಯದಲ್ಲೇ ಪರಿಸ್ಥಿತಿ ಬದಲಾಗಲಿದೆ ಎಂದು ಹವಾಮಾನ ಇಲಾಖೆ ಆಶಾವಾದ ವ್ಯಕ್ತಪಡಿಸಿದೆ. ಸದ್ಯ ಭೂಮಧ್ಯರೇಖೆಯ ಉತ್ತರಕ್ಕೆ, ಪೂರ್ವ ಹಿಂದೂ ಮಹಾಸಾಗರದಲ್ಲಿ ವಿಶಾಲವಾದ ಉಷ್ಣವಲಯದ ಚಂಡಮಾರುತವೊಂದು ರೂಪುಗೊಳ್ಳುತ್ತಿದೆ. ಇದು ಮುಂದಿನ 4 ರಿಂದ 7 ದಿನಗಳಲ್ಲಿ ಬಂಗಾಳ ಕೊಲ್ಲಿಯನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಒಂದೊಮ್ಮೆ ಈ ವ್ಯವಸ್ಥೆಯು ಬಲಗೊಂಡರೆ, ಅದು ಮುಂಗಾರು ಮಾರುತಗಳಿಗೆ ಹೆಚ್ಚಿನ ತೇವಾಂಶವನ್ನು ಒದಗಿಸಲಿದೆ. ಇದು ಬಂಗಾಳ ಕೊಲ್ಲಿಯಲ್ಲಿ ಹೊಸದಾಗಿ ವಾಯುಭಾರ ಕುಸಿತ ಉಂಟಾಗಲು ಪೂರಕ ವಾತಾವರಣ ನಿರ್ಮಿಸಲಿದೆ. ಇದೇ ಅವಧಿಯಲ್ಲಿ ಪಶ್ಚಿಮ ಭಾರತದ ಮೇಲ್ಭಾಗದಲ್ಲಿ 'ಮಿಡಲ್ ಟ್ರೋಪೋಸ್ಫೆರಿಕ್ ವಾರ್ಟೆಕ್ಸ್' (MTV) ಸೃಷ್ಟಿಯಾಗುವ ಸಾಧ್ಯತೆಗಳೂ ದಟ್ಟವಾಗಿವೆ. ಈ ಎರಡೂ ಹವಾಮಾನ ಬದಲಾವಣೆಗಳು ನಿರೀಕ್ಷೆಯಂತೆ ನಡೆದರೆ, ಜುಲೈ ಮೊದಲ ವಾರದಲ್ಲಿ ಮುಂಗಾರು ಮತ್ತೆ ಚುರುಕುಗೊಂಡು ವಾಯುವ್ಯ ಭಾರತದಾದ್ಯಂತ ವ್ಯಾಪಿಸಲಿದೆ. ಆದರೆ ಇವುಗಳ ತೀವ್ರತೆ ಮತ್ತು ಚಲನೆಯ ಆಧಾರದ ಮೇಲೆಯೇ ಮಳೆಯ ಪ್ರಮಾಣ ನಿರ್ಧಾರವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net