ಜನಗಣತಿ ತರಬೇತಿ ಕಾರ್ಯಾಗಾರಕ್ಕೆ ಅತಿಥಿಯಾಗಿ ಎಂಟ್ರಿ ಕೊಟ್ಟ ಕೋತಿ! ವೈರಲ್​ಆಯ್ತು ವಿಡಿಯೋ ...Census Training

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಅಹಮದಾಬಾದ್: 2026ರ ಜನಗಣತಿ ಸಿದ್ಧತೆಗಳ ಭಾಗವಾಗಿ ಗುಜರಾತ್‌ನಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ತರಬೇತಿ ಕಾರ್ಯಾಗಾರವೊಂದು (Census Training) ಅನಿರೀಕ್ಷಿತ ಘಟನೆಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಗಂಭೀರ ವಾತಾವರಣದಲ್ಲಿ ನಡೆಯುವ ಈ ತರಬೇತಿ ಕಾರ್ಯಕ್ರಮಕ್ಕೆ ಕಾಡು ಕೋತಿಯೊಂದು ಆಕಸ್ಮಿಕವಾಗಿ ಪ್ರವೇಶಿಸಿದ್ದು, ಕೆಲಕಾಲ ಸಭಾಂಗಣದ ಕೇಂದ್ರಬಿಂದುವಾಗಿ ಪರಿಣಮಿಸಿದೆ.
ಕಾರ್ಯಾಗಾರದಲ್ಲಿ ಶಿಕ್ಷಕರು, ನಾಗರಿಕ ಸಿಬ್ಬಂದಿ ಮತ್ತು ಸರ್ಕಾರಿ ನೌಕರರು ಭಾಗವಹಿಸಿದ್ದು, ಅವರಿಗೆ ಮುಂಬರುವ ಜನಗಣತಿ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡುತ್ತಿದ್ದರು. ಈ ಸಂದರ್ಭದಲ್ಲಿ ಕೋತಿ ಸದ್ದಿಲ್ಲದೇ ತುಂಬಿದ್ದ ಸಭಾಂಗಣದೊಳಗೆ ಪ್ರವೇಶಿಸಿತು.

ಕಿಕ್ಕಿರಿದ ಸಭಾಂಗಣದಲ್ಲಿ ಮಹಿಳೆಯ ಪಕ್ಕದಲ್ಲಿ ಕೂತ ಕೋತಿ!

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಕೋತಿಯು ಮಹಿಳಾ ಭಾಗವಹಿಸುವವರೊಬ್ಬರು ಕುಳಿತಿದ್ದ ಕುರ್ಚಿಯ ತಲೆಯ ಮೇಲೆ ಶಾಂತವಾಗಿ ಕುಳಿತಿರುವುದು ಕಂಡುಬರುತ್ತದೆ. ಆದಾಗ್ಯೂ, ಪ್ರಾಣಿ ಮೈ ಮೇಲೆ ಹಾರದಂತೆ ತಡೆಯಲು ಮಹಿಳೆಯು ಯಾವುದೇ ಚಲನೆಯಿಲ್ಲದೆ ಕುಳಿತಿದ್ದರೆ, ಹತ್ತಿರದ ಇತರರು ಎಚ್ಚರಿಕೆಯಿಂದ ವೀಕ್ಷಿಸುತ್ತಿದ್ದರು.
ಮತ್ತೊಂದು ವಿಡಿಯೋದಲ್ಲಿ ಕುರ್ಚಿಯ ಆರ್ಮ್​ರೆಸ್ಟ್​ ಮೇಲೆ ಆರಾಮವಾಗಿ ಕುಳಿತಿರುವುದನ್ನು ಕಾಣಬಹುದು. ಇಲ್ಲಿ ಭಾಗವಹಿಸಿದ್ದವರು ನೇರ ಕಣ್ಣಿನ ಸಂಪರ್ಕವನ್ನು ತಪ್ಪಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿದರು. ಕೋತಿಯ ಚಲನವಲನಗಳಿಂದ ಗಂಭೀರ ತರಬೇತಿ ನಡೆಯುತ್ತಿದ್ದ ಸಭಾಂಗಣದಲ್ಲಿ ವಾತಾವರಣ ಕ್ಷಣಾರ್ಧದಲ್ಲಿ ಆತಂಕ, ಕುತೂಹಲ ಮತ್ತು ನಗುವಿನ ಮಿಶ್ರಣವಾಗಿ ಮಾರ್ಪಟ್ಟಿತು.

ಘಟನೆಯ ಸಮಯದಲ್ಲಿ ಅಧಿಕಾರಿಯ ಹೇಳಿಕೆ

ಜನಗಣತಿ ಸಿಬ್ಬಂದಿ ಮನೆ-ಮನೆ ಸಮೀಕ್ಷೆ ಅಥವಾ ಕ್ಷೇತ್ರ ಭೇಟಿಗಳ ಸಂದರ್ಭದಲ್ಲಿ ಕೋತಿಗಳು ಸೇರಿದಂತೆ ವಿವಿಧ ಪ್ರಾಣಿಗಳೊಂದಿಗೆ ಇಂತಹ ಮುಖಾಮುಖಿಗಳನ್ನು ಎದುರಿಸಬೇಕಾಗಬಹುದು ಎಂದು ತಮಾಷೆ ಮಾಡಿದ್ದಾರೆ. ಈ ಹೇಳಿಕೆಯು ಸಭಾಂಗಣದಲ್ಲಿದ್ದ ಎಲ್ಲರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು.

ನೆಟ್ಟಿಗರ ಪ್ರತಿಕ್ರಿಯೆ

ಈ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಕೋತಿ ತನ್ನ ಜನಗಣತಿ ದಾಖಲೆ ಪರಿಶೀಲಿಸಲು ಬಂದಿರಬಹುದು” ಎಂದು ತಮಾಷೆ ಮಾಡಿದರೆ, ಇನ್ನೂ ಕೆಲವರು 2026ರ ಜನಗಣತಿ ತರಬೇತಿಯಲ್ಲಿ ಭಾಗವಹಿಸಲು ಕೋತಿಯೂ ಆಸಕ್ತಿ ತೋರಿದೆ ಎಂದು ಕಾಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net