594 ಕಿ.ಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಮೋದಿ: ಇದು ಉತ್ತರ ಪ್ರದೇಶದ ಜೀವನಪಥ ಎಂದ ಯೋಗಿ! Ganga Expressway

594 ಕಿ.ಮೀ ಉದ್ದದ 'ಗಂಗಾ ಎಕ್ಸ್‌ಪ್ರೆಸ್‌ವೇ' ಉದ್ಘಾಟಿಸಿದ ಪ್ರಧಾನಿ ಮೋದಿ
594 ಕಿ.ಮೀ ಉದ್ದದ 'ಗಂಗಾ ಎಕ್ಸ್‌ಪ್ರೆಸ್‌ವೇ' ಉದ್ಘಾಟಿಸಿದ ಪ್ರಧಾನಿ ಮೋದಿ
Published on

ಪ್ರಮುಖ ಮುಖ್ಯಾಂಶಗಳು

  • 594 ಕಿ.ಮೀ ಉದ್ದದ 'ಗಂಗಾ ಎಕ್ಸ್‌ಪ್ರೆಸ್‌ವೇ' ಉದ್ಘಾಟಿಸಿದ ಪ್ರಧಾನಿ ಮೋದಿ
  • ರಸ್ತೆ ಮೇಲೆ ಇಳಿಯಲಿವೆ ಯುದ್ಧ ವಿಮಾನಗಳು!
  • ಇದು ಉತ್ತರ ಪ್ರದೇಶದ ಜೀವನಪಥ: ಯೋಗಿ ಆದಿತ್ಯನಾಥ್
ಮೀರಟ್​: ಮೀರಟ್​ನಿಂದ ಪ್ರಯಾಗ್‌ರಾಜ್‌ವರೆಗೆ ಹರಡಿರುವ ದೇಶದ ಅತ್ಯಂತ ಉದ್ದದ ಹೈ-ಸ್ಪೀಡ್ ಕಾರಿಡಾರ್‌ಗಳಲ್ಲಿ ಒಂದಾದ ಗಂಗಾ ಎಕ್ಸ್‌ಪ್ರೆಸ್‌ವೇ (Ganga Expressway) ಅನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಏ.29) ಅಧಿಕೃತವಾಗಿ ಉದ್ಘಾಟಿಸಿದ್ದಾರೆ. ಸುಮಾರು 594 ಕಿಲೋಮೀಟರ್ ಉದ್ದದ ಈ ಬೃಹತ್ ರಸ್ತೆ ಯೋಜನೆ ಇಡೀ ಉತ್ತರ ಪ್ರದೇಶದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸಬಲ್ಲ ಜೀವನಪಥ ಎನ್ನಲಾಗುತ್ತಿದೆ.

ವೇಗಕ್ಕೆ ಮಿತಿ ಇಲ್ಲ, ದೂರಕ್ಕೆ ಜಾಗವಿಲ್ಲ!

ಈ ಎಕ್ಸ್‌ಪ್ರೆಸ್‌ವೇ ಸದ್ಯಕ್ಕೆ 6 ಪಥಗಳನ್ನು (6-Lane) ಹೊಂದಿದ್ದು, ಭವಿಷ್ಯದ ದೃಷ್ಟಿಯಿಂದ ಇದನ್ನು 8 ಪಥಗಳಿಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವೆಂದರೆ, ಇಲ್ಲಿ ವಾಹನಗಳು ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸಲು ವಿನ್ಯಾಸಗೊಳಿಸಲಾಗಿದೆ. ಅಂದರೆ ಪಶ್ಚಿಮ ಯುಪಿಯಿಂದ ಪೂರ್ವ ಯುಪಿಗೆ ಹೋಗಲು ಈಗ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡಬೇಕಿಲ್ಲ. ಜನರ ಪ್ರಯಾಣದ ಸಮಯ ಉಳಿಯುವುದಲ್ಲದೆ, ಸರಕು ಸಾಗಣೆ ಕೂಡ ಅತ್ಯಂತ ವೇಗವಾಗಿ ನಡೆಯಲಿದೆ.
12 ಜಿಲ್ಲೆಗಳ ಅಭಿವೃದ್ಧಿಗೆ ಬಲ
ಗಂಗಾ ಎಕ್ಸ್‌ಪ್ರೆಸ್‌ವೇ ಮೀರತ್‌ನಿಂದ ಆರಂಭವಾಗಿ ಹಾಪುರ್, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬದೌನ್, ಶಹಜಹಾನ್‌ಪುರ, ಹಾರ್ದೋಯ್, ಉನ್ನಾವ್, ರಾಯ್‌ಬರೇಲಿ, ಪ್ರತಾಪ್‌ಗಢ ಮಾರ್ಗವಾಗಿ ಪ್ರಯಾಗ್‌ರಾಜ್ ತಲುಪುತ್ತದೆ. ಈ 12 ಜಿಲ್ಲೆಗಳ ರೈತರು, ಉದ್ಯಮಿಗಳು ಮತ್ತು ಯುವಕರಿಗೆ ಈ ರಸ್ತೆ ಹೊಸ ಅವಕಾಶಗಳ ಬಾಗಿಲನ್ನು ತೆರೆಯಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಸ್ತೆ ಮೇಲೆ ಇಳಿಯಲಿವೆ ಯುದ್ಧ ವಿಮಾನಗಳು!

ಈ ಯೋಜನೆಯ ಅತ್ಯಂತ ರೋಚಕ ವಿಚಾರವೆಂದರೆ ಶಹಜಹಾನ್‌ಪುರ ಬಳಿ ನಿರ್ಮಿಸಲಾಗಿರುವ 3.2 ಕಿಲೋಮೀಟರ್ ಉದ್ದದ ವಾಯುನೆಲೆ (Airstrip). ತುರ್ತು ಸಂದರ್ಭಗಳಲ್ಲಿ ಅಥವಾ ಯುದ್ಧದಂತಹ ಪರಿಸ್ಥಿತಿ ಎದುರಾದಾಗ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಇಲ್ಲಿ ಸುಲಭವಾಗಿ ಲ್ಯಾಂಡ್ ಆಗಬಹುದು. ಇದು ದೇಶದ ಭದ್ರತೆಯ ದೃಷ್ಟಿಯಿಂದಲೂ ಅತ್ಯಂತ ಪ್ರಮುಖವಾಗಿದೆ.

ಹೈಟೆಕ್ ಸುರಕ್ಷತೆ ಮತ್ತು ಸೌಲಭ್ಯ

ಹೆದ್ದಾರಿಯಲ್ಲಿ ಕೇವಲ ವೇಗ ಮಾತ್ರವಲ್ಲ, ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಚಾರ ನಿರ್ವಹಣೆಗಾಗಿ ಅತ್ಯಾಧುನಿಕ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS) ಅಳವಡಿಸಲಾಗಿದೆ.
ಇಡೀ ರಸ್ತೆಯ ಮೇಲೆ ಸಿಸಿಟಿವಿ ಕ್ಯಾಮರಾಗಳ ಕಣ್ಣಿರುತ್ತದೆ. ಅಪಘಾತ ಅಥವಾ ತಾಂತ್ರಿಕ ತೊಂದರೆ ಉಂಟಾದಾಗ ನೆರವಾಗಲು ಪ್ರತಿ ಕೆಲವು ಕಿಲೋಮೀಟರ್‌ಗೆ ತುರ್ತು ಕರೆ ಪೆಟ್ಟಿಗೆಗಳು, ಆಂಬ್ಯುಲೆನ್ಸ್ ಮತ್ತು ಗಸ್ತು ವಾಹನಗಳ ಸೌಲಭ್ಯವಿದೆ.

ರೈತರಿಗೆ ಮತ್ತು ಉದ್ಯೋಗಿಗಳಿಗೆ ಬಂಪರ್ ಕೊಡುಗೆ

ಈ ಕಾರಿಡಾರ್ ಉದ್ದಕ್ಕೂ ಲಾಜಿಸ್ಟಿಕ್ಸ್ ಪಾರ್ಕ್‌ಗಳು, ಕೋಲ್ಡ್ ಸ್ಟೋರೇಜ್‌ಗಳು ಮತ್ತು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ರೈತರು ತಮ್ಮ ಬೆಳೆಗಳನ್ನು ವೇಗವಾಗಿ ಮಾರುಕಟ್ಟೆಗೆ ತಲುಪಿಸಬಹುದು. ಇನ್ನು ಉದ್ಯಮಿಗಳಿಗೆ ಹೊಸ ಹೂಡಿಕೆ ಮಾಡಲು ಇದು ಉತ್ತಮ ವೇದಿಕೆಯಾಗಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಇದು ಉತ್ತರ ಪ್ರದೇಶದ ಜೀವನಪಥ: ಯೋಗಿ ಆದಿತ್ಯನಾಥ್
ಉದ್ಘಾಟನೆಗೂ ಮುನ್ನ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಎಕ್ಸ್‌ಪ್ರೆಸ್‌ವೇ ಹಾರ್ದೋಯ್ ಸೇರಿದಂತೆ ಇಡೀ ರಾಜ್ಯದ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ. ಇದು ಹಳ್ಳಿಗಳು, ರೈತರು ಮತ್ತು ಯುವಕರನ್ನು ಸಂಪರ್ಕಿಸುವ ಜೀವನಪಥ ಎಂದು ಬಣ್ಣಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net