ಮೋದಿ ಇದ್ದರೆ ಎಲ್ಲವೂ ಸಾಧ್ಯ!...ಸಿಎಂ ಧಾಮಿ ಎದುರು ಬಾಲಕಿಯ ಗಾನ ವೈಭವ; ವೈರಲ್ ಆಯ್ತು ವಿಡಿಯೋ Modi Hai To Mumkin Hai

 Modi Hai To Mumkin Hai (ಚಿತ್ರ X)
Modi Hai To Mumkin Hai (ಚಿತ್ರ X)
Published on

ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ಶನಿವಾರ ಆಯೋಜಿಸಲಾಗಿದ್ದ 'ಯುವ ಶಕ್ತಿ ಸಂವಾದ' ಕಾರ್ಯಕ್ರಮದಲ್ಲಿ ವಿಶೇಷ ಸನ್ನಿವೇಶವೊಂದು ನಡೆದಿದೆ. ಆದಾಗ್ಯೂ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುಟಾಣಿ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಹಾಗೂ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆಡಳಿತ ವೈಖರಿಯನ್ನು ಶ್ಲಾಘಿಸಿ ಹಾಡೊಂದನ್ನು (Modi Hai To Mumkin Hai) ಹಾಡಿದ್ದಾಳೆ. ಬಾಲಕಿಯ ಈ ಗೀತೆಗೆ ಮಾರುಹೋದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವೇದಿಕೆಯ ಮೇಲಿಂದಲೇ ಚಪ್ಪಾಳೆ ತಟ್ಟುವ ಮೂಲಕ ಆಕೆಯ ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ.

ಬಾಲಕಿ ತನ್ನ ಹಾಡಿನಲ್ಲಿ "ಮೋದಿ ಹೈ ತೋ ಮುಮ್ಕಿನ್ ಹೈ" (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂಬ ಜನಪ್ರಿಯ ಸಾಲುಗಳೊಂದಿಗೆ, ಸಿಎಂ ಧಾಮಿ ಅವರ ನಾಯಕತ್ವ, ಸಾರ್ವಜನಿಕ ಸೇವೆ ಮತ್ತು ರಾಜ್ಯದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಸುರಕ್ಷತೆಯನ್ನು ಕೊಂಡಾಡಿದಳು. ಧಾಮಿ ಅವರ ಆಡಳಿತದಿಂದಾಗಿ ಸಮಸ್ಯೆಗಳು ನಿವಾರಣೆಯಾಗುತ್ತಿವೆ ಮತ್ತು ಮಹಿಳೆಯರು ಭಯವಿಲ್ಲದೆ ಸಂಚರಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ಹಾಡಿನ ಸಾಲುಗಳ ಮೂಲಕ ಬಣ್ಣಿಸಿದಳು.

ಜೆನ್-ಝಿ ತಲೆಮಾರೇ ವಿಕಸಿತ ಭಾರತದ ನೈಜ ಶಿಲ್ಪಿಗಳು!

ಸಂವಾದ ಕಾರ್ಯಕ್ರಮದಲ್ಲಿ ಯುವಜನರೊಂದಿಗೆ ಅತ್ಯಂತ ಉತ್ಸಾಹದಿಂದ ಸಂವಾದ ನಡೆಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಪ್ರಸ್ತುತ ಜನಾಂಗವಾದ 'ಜೆನ್-ಝಿ' (Gen-Z) ತಲೆಮಾರಿನ ಯುವಕರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಭಾರತವನ್ನು 'ವಿಕಸಿತ ಭಾರತ'ವನ್ನಾಗಿ ನಿರ್ಮಿಸುವ ಪ್ರಯಾಣದಲ್ಲಿ ಈ ಯುವಪಡೆಯೇ ಪ್ರಮುಖ ಚಾಲಕ ಶಕ್ತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಾವೇಶದ ನಂತರ ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಈ ಕುರಿತು ಪೋಸ್ಟ್​ ಹಂಚಿಕೊಂಡ ಸಿಎಂ ಇಂದಿನ ಯುವಜನರೊಂದಿಗೆ ಸಂವಾದ ನಡೆಸಿ ಅವರ ಅನುಭವಗಳು, ಭವಿಷ್ಯದ ಆಕಾಂಕ್ಷೆಗಳು ಹಾಗೂ ಸರ್ಕಾರದ ಮೇಲಿರುವ ಅವರ ನಿರೀಕ್ಷೆಗಳನ್ನು ಹತ್ತಿರದಿಂದ ತಿಳಿದುಕೊಳ್ಳುವುದು ನನಗೆ ಸಿಕ್ಕ ದೊಡ್ಡ ಅನುಭವ. ನಮ್ಮ ಯುವಪಡೆ ಇಂದು ದೇಶದ ವರ್ತಮಾನ ಮಾತ್ರವಲ್ಲ, ಬದಲಿಗೆ ಅಭಿವೃದ್ಧಿ ಹೊಂದಿದ ಭಾರತದ ಸುವರ್ಣ ಭವಿಷ್ಯವನ್ನು ರೂಪಿಸುವ ನಿಜವಾದ ಶಿಲ್ಪಿಗಳು. ಅವರಲ್ಲಿರುವ ಅಪ್ರತಿಮ ಉತ್ಸಾಹ, ಹೊಸ ಆಲೋಚನೆಗಳು ಮತ್ತು ಏನನ್ನಾದರೂ ಸಾಧಿಸಲೇಬೇಕೆಂಬ ದೃಢಸಂಕಲ್ಪವು ನಮಗೆ ಸದಾ ಸ್ಪೂರ್ತಿದಾಯಕ ಎಂದು ಬರೆದುಕೊಂಡಿದ್ದಾರೆ.

ಯುವ ಜನಸಂಖ್ಯೆಯೇ ಭಾರತದ ಅತಿದೊಡ್ಡ ಪ್ರಗತಿಯ ಮೂಲ

ಇದೇ ವೇಳೆ ಮಾತನಾಡಿದ ಧಾಮಿ, ಜಗತ್ತು ಇಂದು ಭಾರತವನ್ನು ಗೌರವ, ನಂಬಿಕೆ ಮತ್ತು ಭರವಸೆಯ ಕಣ್ಣುಗಳಿಂದ ನೋಡುತ್ತಿರುವುದಕ್ಕೆ ದೇಶದಲ್ಲಿರುವ ಅಪಾರ ಯುವ ಶಕ್ತಿಯೇ ಮುಖ್ಯ ಕಾರಣ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 65 ಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಈ ಯುವ ಜನಸಂಖ್ಯಾ ಬಲವೇ ದೇಶದ ಅತಿದೊಡ್ಡ ಶಕ್ತಿಯಾಗಿದೆ. ಇಂದಿನ 'ಜೆನ್-ಝಿ' ಪೀಳಿಗೆಯು ಕೇವಲ ಸುಂದರ ಕನಸುಗಳನ್ನು ಕಾಣುವ ತಲೆಮಾರಲ್ಲ, ಬದಲಿಗೆ ಆ ಕನಸುಗಳನ್ನು ವಾಸ್ತವಕ್ಕೆ ತರಲು ಶ್ರಮಿಸುವ ಶಕ್ತಿಯಾಗಿದೆ ಎಂದು ಬಣ್ಣಿಸಿದರು.
ಡೆಹ್ರಾಡೂನ್‌ನಲ್ಲಿ ನಡೆದಿದ್ದ 'ಯುವ ಅಗ್ನಿವೀರ ಸಂವಾದ'ದಲ್ಲೂ ತಾವು ಹೇಳಿದ್ದ ಮಾತುಗಳನ್ನು ಪುನರುಚ್ಚರಿಸಿದ ಮುಖ್ಯಮಂತ್ರಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ನಿರಂತರವಾಗಿ ಮುಂದುವರಿಯಲಿವೆ ಎಂದು ಜನತೆಗೆ ಭರವಸೆ ನೀಡಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net