ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಮುಹೂರ್ತ..? ಆಗಸ್ಟ್ 16-18 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರದ ಸಿದ್ಧತೆ! | Delimitation Bill

Delimitation Bill | ಆಗಸ್ಟ್ 16-18 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರದ ಸಿದ್ಧತೆ!
Delimitation Bill | ಆಗಸ್ಟ್ 16-18 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರದ ಸಿದ್ಧತೆ!
Published on

ಮುಂಬರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆ (Delimitation Bill) ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿಶೇಷ ಸಂಸತ್ ಅಧಿವೇಶನವನ್ನು ಕರೆಯಲು ಮುಂದಾಗಿದ್ದು, ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸಂಬಂಧಿಸಿದಂತೆ ಅಗತ್ಯ ಸಂವಿಧಾನ ತಿದ್ದುಪಡಿಗಳು, ಲೋಕಸಭಾ ಕ್ಷೇತ್ರಗಳ ಸಂಖ್ಯೆಯ ಪರಿಷ್ಕರಣೆ ಹಾಗೂ ಮಹಿಳಾ ಮೀಸಲಾತಿಯ ಜಾರಿಯಂತಹ ಪ್ರಮುಖ ವಿಷಯಗಳ ಕುರಿತು ಸಂಸತ್ತಿನಲ್ಲಿ ವಿಸ್ತೃತ ಚರ್ಚೆ ನಡೆಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ವರದಿಯಾಗಿದೆ.

ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲು ಅಗತ್ಯವಿರುವ ಮೂರನೇ ಎರಡರಷ್ಟು (2/3) ಬಹುಮತವನ್ನು ಕಾಯ್ದುಕೊಳ್ಳಲು ಕೇಂದ್ರದ ಮೋದಿ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದು, ಸದ್ಯ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲೇ ಈ ಮಹತ್ವದ ವಿಧೇಯಕವನ್ನು ಮರುಮಂಡಿಸಲು ಸರ್ಕಾರ ಉತ್ಸುಕವಾಗಿದೆ.
ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ಸಂಸದರ ಬೆಂಬಲ ಮತ್ತು ಸಂಖ್ಯಾಬಲ ಸ್ಪಷ್ಟವಾಗುತ್ತಿದ್ದಂತೆಯೇ, ಈ ತಿದ್ದುಪಡಿ ಮಸೂದೆಯನ್ನು ಕೈಗೆತ್ತಿಕೊಂಡು ಅಂಗೀಕರಿಸಲು ಕೇಂದ್ರ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವ ಸಾಧ್ಯತೆಯಿದೆ. ಕ್ಷೇತ್ರ ಪುನರ್ವಿಂಗಡಣೆ ಹಾಗೂ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿಗೆ 2/3 ರಷ್ಟು ವಿಶೇಷ ಬಹುಮತದ ಅಗತ್ಯವಿದ್ದು, ಅನೇಕ ಪ್ರತಿಪಕ್ಷಗಳ ಬೆಂಬಲವನ್ನು ಕ್ರೋಡೀಕರಿಸಲು ಕೇಂದ್ರ ಸರ್ಕಾರ ಕಸರತ್ತು ನಡೆಸುತ್ತಿದೆ.

ರಾಹುಲ್-ರಿಜಿಜು ಭೇಟಿ!...

ಸಂಸತ್ತಿನಲ್ಲಿ ಪ್ರಮುಖ ಮಸೂದೆಗಳನ್ನು ಚರ್ಚೆಗೆ ತಂದು ಅಂಗೀಕರಿಸುವ ಮುನ್ನ ಉಂಟಾಗಿರುವ ಸುದೀರ್ಘ ಗೊಂದಲ ಹಾಗೂ ಸಂಸತ್ ಕಲಾಪದ ಪ್ರತಿರೋಧವನ್ನು ಶಮನಗೊಳಿಸಲು ಕೇಂದ್ರ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದ್ದು, ಇದರ ಭಾಗವಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಂಸತ್ ಸಂಕೀರ್ಣದಲ್ಲಿರುವ ರಾಹುಲ್ ಕೊಠಡಿಯಲ್ಲಿ ಸುಮಾರು 50 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಈ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಭಾಗವಹಿಸಿದ್ದರು.
ಈ ಸಭೆಯ ಬಳಿಕ ಮಾತನಾಡಿದ ಕಿರಣ್ ರಿಜಿಜು, ಇದೊಂದು ಸೌಹಾರ್ದಯುತ ಭೇಟಿ ಎಂದು ಕರೆದಿದ್ದು, ಸಂಸತ್ತಿನ ಕಲಾಪ ಸ್ಥಗಿತ ಶೀಘ್ರದಲ್ಲೇ ಬಗೆಹರಿಯುವ ಭರವಸೆ ವ್ಯಕ್ತಪಡಿಸಿದರು. ಮೂಲಗಳ ಪ್ರಕಾರ, ಗೃಹ ಸಚಿವ ಅಮಿತ್ ಷಾ ರಾಜೀನಾಮೆಯನ್ನು ವಿರೋಧ ಪಕ್ಷಗಳು ಕೇಳುತ್ತಿಲ್ಲ, ಬದಲಾಗಿ ಇತ್ತೀಚಿನ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗ ಹಾಗೂ ಲಾಠಿಚಾರ್ಜ್ ನಡೆದಿದೆ ಎನ್ನಲಾದ ಆರೋಪದ ಕುರಿತು ಗೃಹಸಚಿವರು ಸಂಸತ್ತಿನಲ್ಲಿ ಅಧಿಕೃತ ಹೇಳಿಕೆ ನೀಡಬೇಕು ಎಂದು ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದಾರೆ.
ಸಮಾಜವಾದಿ ಪಕ್ಷ ಸೇರಿದಂತೆ ಇತರ ವಿಪಕ್ಷ ನಾಯಕರೊಂದಿಗೆ ಚರ್ಚಿಸಲು ಕೇಂದ್ರ ಸರ್ಕಾರವು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಪಿಯೂಷ್ ಗೋಯಲ್, ಅರ್ಜುನ್ ರಾಮ್ ಮೇಘವಾಲ್ ಮತ್ತು ಎಲ್. ಮುರುಗನ್ ಅವರಿಗೆ ಜವಾಬ್ದಾರಿ ನೀಡಿದೆ. ಈ ಸಚಿವರ ತಂಡವು ವಿವಿಧ ವಿಪಕ್ಷ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಅವರ ನಿಲುವುಗಳನ್ನು ಅರಿತುಕೊಂಡು ಸಂಸತ್ ಕಲಾಪವನ್ನು ಸುಗಮವಾಗಿ ನಡೆಸಲು ಸರ್ವಸಮ್ಮತಿ ಮೂಡಿಸಲು ಪ್ರಯತ್ನಿಸಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net