ಮೋದಿ ಸರ್ಕಾರದ ಶರಣಾಗತಿ ಒಪ್ಪಂದ: ಭಾರತದ ಹಿತಾಸಕ್ತಿ ಅಮೆರಿಕಕ್ಕೆ ಅಡವಿಟ್ಟರಾ ಪ್ರಧಾನಿ..? ಖರ್ಗೆ ಕೆಂಡಾಮಂಡಲ | Mallikarjun Kharge

ಮೋದಿ ಸರ್ಕಾರದ ಶರಣಾಗತಿ ಒಪ್ಪಂದ: ಭಾರತದ ಹಿತಾಸಕ್ತಿ ಅಮೆರಿಕಕ್ಕೆ ಅಡವಿಟ್ಟರಾ ಪ್ರಧಾನಿ..? ಖರ್ಗೆ ಕೆಂಡಾಮಂಡಲ
ಮೋದಿ ಸರ್ಕಾರದ ಶರಣಾಗತಿ ಒಪ್ಪಂದ: ಭಾರತದ ಹಿತಾಸಕ್ತಿ ಅಮೆರಿಕಕ್ಕೆ ಅಡವಿಟ್ಟರಾ ಪ್ರಧಾನಿ..? ಖರ್ಗೆ ಕೆಂಡಾಮಂಡಲ
Published on
ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಇತ್ತೀಚಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ದೇಶಕ್ಕೆ ಎಸಗಿದ ದ್ರೋಹ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕಾರ್ಯತಂತ್ರದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಅಡವಿಟ್ಟು ಅಮೆರಿಕಕ್ಕೆ ಶರಣಾಗಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸರೆಂಡರ್ ಡೀಲ್​ನ ಕರಾಳ ಸತ್ಯ..?

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಒಪ್ಪಂದದ ಸಣ್ಣ ಅಕ್ಷರಗಳಲ್ಲಿ ಅಡಗಿರುವ ಅಂಶಗಳು ಮೋದಿ ಸರ್ಕಾರದ ಅಸಲಿ ಮುಖವನ್ನು ಬಯಲು ಮಾಡಿವೆ ಎಂದು ಖರ್ಗೆ ಆರೋಪಿಸಿದ್ದಾರೆ. ಭಾರತದ ಸ್ವಾಯತ್ತತೆ ಮತ್ತು ಆರ್ಥಿಕ ಶಕ್ತಿಯನ್ನು ಈ ಒಪ್ಪಂದವು ಕುಗ್ಗಿಸಿದೆ. ಈ ಟ್ರಾಪ್ ಡೀಲ್​ನ ಸತ್ಯಾಂಶಗಳು ಈಗ ನಿಧಾನವಾಗಿ ಹೊರಬರುತ್ತಿವೆ ಎಂದು ಹೇಳಿದ್ದಾರೆ.
ರಷ್ಯಾ ತೈಲ ಖರೀದಿ ನಿಲುಗಡೆ: ಅಮೆರಿಕವು ವಿಧಿಸಿರುವ ಹೆಚ್ಚುವರಿ ಶೇ. 25 ರಷ್ಟು ಸುಂಕವನ್ನು ತೆಗೆದುಹಾಕಲು ಪ್ರತಿಯಾಗಿ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮೋದಿ ಸರ್ಕಾರ ಒಪ್ಪಿಕೊಂಡಿದೆ. ಇದು ಭಾರತದ ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಎಐಸಿಸಿ ಅಧ್ಯಕ್ಷ ಕಿಡಿಕಾರಿದ್ದಾರೆ.
ರೈತರಿಗೆ ಮತ್ತು ಹೈನುಗಾರಿಕೆಗೆ ದ್ರೋಹ: ಅಮೆರಿಕದ ಕೃಷಿ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯನ್ನು ಮುಕ್ತಗೊಳಿಸಿರುವುದು ಭಾರತೀಯ ರೈತರ ಬೆನ್ನಿಗೆ ಇರಿದಂತೆ. ಅಲ್ಲದೆ, ಅಮೆರಿಕದಿಂದ ತರಲಾಗುವ ತಳಿಪರಿವರ್ತಿತ ಮೇವನ್ನು ದನಗಳಿಗೆ ನೀಡುವುದರಿಂದ ಭಾರತದ ಹೈನುಗಾರಿಕೆ ಕ್ಷೇತ್ರ ಮತ್ತು ಹಾಲಿನ ಗುಣಮಟ್ಟ ನಾಶವಾಗಲಿದೆ ಎಂದು ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಕೌಶಲ್ಯದ ಮಾತು, ವಾಸ್ತವ ಶೂನ್ಯ: ಮೋದಿ ಸರ್ಕಾರವು ಅಮೆರಿಕದ ಸುಂಕವನ್ನು ಶೇ.18ಕ್ಕೆ ಇಳಿಸಿರುವುದನ್ನು ಐತಿಹಾಸಿಕ ಜಯ ಎಂದು ಪ್ರಚಾರ ಮಾಡುತ್ತಿದೆ. ಆದರೆ ಅಮೆರಿಕವು ಬಾಂಗ್ಲಾದೇಶಕ್ಕೆ ಶೂನ್ಯ ಸುಂಕದ ಅವಕಾಶ ನೀಡಿದೆ. ಇದು ಭಾರತದ ಜವಳಿ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ವಿಶ್ಲೇಷಿಸಿದ್ದಾರೆ.
ಸಂಸತ್ತಿಗೆ ಅವಮಾನ: ಸಂಸತ್ತಿನ ಅಧಿವೇಶನ ನಡೆಯುತ್ತಿದ್ದರೂ ಒಪ್ಪಂದದ ವಿವರಗಳನ್ನು ಅಮೆರಿಕದ ಅಧ್ಯಕ್ಷರೇ ಮೊದಲು ಪ್ರಕಟಿಸಿದರು. ಇದು ಭಾರತದ ಸಂಸತ್ತಿನ ಗೌರವಕ್ಕೆ ಧಕ್ಕೆ ತಂದಿದೆ ಎಂಬುದು ಖರ್ಗೆ ಮೋದಿ ಸರ್ಕಾರದ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ.

ರಾಜಕೀಯ ಸಂಚಲನ

ಬಜೆಟ್ ಅಧಿವೇಶನದ ನಡುವೆಯೇ ಖರ್ಗೆ ಅವರ ಈ ಹೇಳಿಕೆಯು ಸಂಸತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಮೆರಿಕದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದ ಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಇತ್ತೀಚೆಗಷ್ಟೇ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್ ಅವರು ನೀಡಿದ್ದ ಹೇಳಿಕೆಗಳ ಬೆನ್ನಲ್ಲೇ ಖರ್ಗೆ ಅವರ ಈ ವಾಗ್ದಾಳಿ ಕೇಂದ್ರ ಸರ್ಕಾರಕ್ಕೆ ಇಕ್ಕಟ್ಟು ತಂದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net