ಪ್ರಜ್ಞೆ ತಪ್ಪಿಸಿ ಅನೇಕ ಗಂಡಸರಿಂದ ಅತ್ಯಾಚಾರ: ಮಾಡೆಲ್​ ವೇಷದಲ್ಲಿರೋ ಈ ಕಿರಾತಕಿಯರ ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ! Modeling

ಪ್ರಜ್ಞೆ ತಪ್ಪಿಸಿ ಅನೇಕ ಗಂಡಸರಿಂದ ಅತ್ಯಾಚಾರ: ಮಾಡೆಲ್​ ವೇಷದಲ್ಲಿರೋ ಈ ಕಿರಾತಕಿಯರ ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ! Modeling
ಪ್ರಜ್ಞೆ ತಪ್ಪಿಸಿ ಅನೇಕ ಗಂಡಸರಿಂದ ಅತ್ಯಾಚಾರ: ಮಾಡೆಲ್​ ವೇಷದಲ್ಲಿರೋ ಈ ಕಿರಾತಕಿಯರ ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ! Modeling
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗ ಮತ್ತು ಮಾಡೆಲಿಂಗ್ ಆಮಿಷವೊಡ್ಡಿ ಯುವತಿಯರನ್ನು ದುಬೈಗೆ ಸಾಗಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಜಾಲ ಪತ್ತೆ
  • ಸಂತ್ರಸ್ತೆಯರ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿ, ಆ ಫೋಟೋಗಳನ್ನು ಕುಟುಂಬಕ್ಕೆ ಕಳುಹಿಸಿ ಚಿತ್ರಹಿಂಸೆ ನೀಡುತ್ತಿದ್ದ ಪಾಪಿಗಳು
  • ಯುವತಿಯರನ್ನು ವಿದೇಶಕ್ಕೆ ಸಾಗಿಸುತ್ತಿದ್ದ ಜಾಲದ ಪ್ರಮುಖ ಸೂತ್ರಧಾರಿ ಸಿಂಧು ಎಂಬಾಕೆ ಮುಂಬೈ ಏರ್‌ಪೋರ್ಟ್‌ನಲ್ಲಿ ಅರೆಸ್ಟ್​
  • ಸ್ಥಳೀಯ ಕ್ರಿಮಿನಲ್ ಗ್ಯಾಂಗ್‌ಗಳ ಜತೆ ಸೇರಿ ಯುವತಿಯರನ್ನು ಈ ದಂಧೆಗೆ ಸೆಳೆಯುತ್ತಿದ್ದ ಎರಡನೇ ಆರೋಪಿ ಅಲೀನಾ ವಶಕ್ಕೆ
ಕೊಚ್ಚಿ: ಮಾಡೆಲಿಂಗ್ ( Modeling ) ಆಸೆ ತೋರಿಸಿ ಯುವತಿಯರನ್ನು ವಿದೇಶಕ್ಕೆ ಸಾಗಿಸುತ್ತಿದ್ದ ಭಯಾನಕ ಜಾಲದ ಕುರಿತು ಸಂತ್ರಸ್ತೆ ಬಿಚ್ಚಿಟ್ಟಿರುವ ಸತ್ಯಗಳು ತೀವ್ರ ಆಘಾತವನ್ನುಂಟು ಮಾಡಿವೆ. 
ಮಾಡೆಲಿಂಗ್ ನೆಪದಲ್ಲಿ ವಿದೇಶಕ್ಕೆ ಕರೆದೊಯ್ದ ಬಳಿಕ ನನ್ನನ್ನು ಅರೆಪ್ರಜ್ಞಾವಸ್ಥೆಗೆ ತಳ್ಳಿದರು. ಈ ವೇಳೆ ಹಲವರು ಪುರುಷರು ನನ್ನ ಮೇಲೆ ಅತ್ಯಂತ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರುದಾರೆ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ ನಂತರ ತನ್ನ ಬೆತ್ತಲೆ ಚಿತ್ರಗಳನ್ನು ತನ್ನ ಕುಟುಂಬದವರಿಗೂ ಕಳುಹಿಸಿ ವಿಕೃತಿ ಮೆರೆದಿದ್ದಾರೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.

ಸಂತ್ರಸ್ತೆಯ ಬಗ್ಗೆ ಅಪಪ್ರಚಾರ

ಹಣದ ಆಸೆ ಹುಟ್ಟಿಸಿ ನನ್ನನ್ನು ದುಬೈಗೆ ಕರೆದೊಯ್ದರು. ಅಲ್ಲಿ ನಾನು ಕುಡಿಯುವ ಪಾನೀಯಗಳಿಗೆ ಮತ್ತು ನೀರಿಗೆ ಬಿಳಿ ಬಣ್ಣದ ಪುಡಿಯನ್ನು ಬೆರೆಸಿ ಬಲವಂತವಾಗಿ ಕುಡಿಸುತ್ತಿದ್ದರು. ಅದನ್ನು ಕುಡಿದು ನಾನು ಪ್ರಜ್ಞೆ ಕಳೆದುಕೊಂಡಾಗ ನನ್ನ ಮೇಲೆ ವಿಪರೀತ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಅಷ್ಟೇ ಅಲ್ಲದೆ, ನನ್ನ ನಗ್ನ ಚಿತ್ರಗಳನ್ನು ತೆಗೆದು ಕುಟುಂಬದವರಿಗೆ ಕಳುಹಿಸಿದ್ದರು. ನನ್ನ ಮನೆಗೆ ಫೋನ್ ಮಾಡಿ, ನಾನು ಇಲ್ಲಿ ಅನೈತಿಕವಾಗಿ ಬದುಕುತ್ತಿದ್ದೇನೆ ಮತ್ತು ಪುರುಷರು ಬಂದು ಹೋಗುತ್ತಿದ್ದಾರೆ ಎಂದು ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದಲ್ಲದೆ, ನನ್ನನ್ನು ಮನೆಯಿಂದ ಹೊರಹಾಕುವಂತೆ ಕುಟುಂಬದವರಿಗೆ ತಿಳಿಸಿದ್ದರು ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ತನ್ನ ಹುಟ್ಟೂರಿನಿಂದ ದುಬೈಗೆ ಕರೆದೊಯ್ದ ಬಳಿಕ ಅಲ್ಲಿನ ಫ್ಲಾಟ್‌ ಒಂದರಲ್ಲಿ ಕೂಡಿಹಾಕಲಾಗಿತ್ತು ಎಂದು ತಿಳಿಸಿರುವ ದೂರುದಾರೆ, ಅಲ್ಲಿ ತನ್ನಂತೆ ಸಿಲುಕಿಕೊಂಡಿದ್ದ ಬೇರೆ ಎಂಟು ಮಂದಿ ಯುವತಿಯರನ್ನು ಭೇಟಿಯಾಗಿದ್ದಾಗಿ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ನನ್ನ ಮಗುವನ್ನು ಕೊಲ್ಲುವುದಾಗಿಯೂ ಆರೋಪಿಗಳು ತನಗೆ ಬೆದರಿಕೆ ಹಾಕಿದ್ದರು ಎಂದು ತಿಳಿಸಿರುವ ಅವರು, ಕೊನೆಗೆ ಸಂಬಂಧಿಕರೊಬ್ಬರ ಸಮಯೋಚಿತ ಸಹಾಯದಿಂದಾಗಿ ಹೇಗೋ ತಪ್ಪಿಸಿಕೊಂಡು ತಮ್ಮ ಹುಟ್ಟೂರನ್ನು ತಲುಪಲು ಸಾಧ್ಯವಾಯಿತು ಎಂದು ಘೋರ ಅನುಭವವನ್ನು ಹಂಚಿಕೊಂಡಿದ್ದಾರೆ.

ಮಾಡೆಲಿಂಗ್​ ಕರಾಳತೆ ಬಯಲು

ಅಂದಹಾಗೆ, ಮಾಡೆಲಿಂಗ್ ಹಾಗೂ ವಿದೇಶಗಳಲ್ಲಿ ಉನ್ನತ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯರನ್ನು ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಕಿರುಕುಳಕ್ಕೆ ದೂಡುತ್ತಿದ್ದ ಜಾಲದ ಭೀಕರ ಕೃತ್ಯಗಳು ಬೆಳಕಿಗೆ ಬಂದಿವೆ. ಸಂತ್ರಸ್ತ ಯುವತಿಯರನ್ನು ದುಬೈಗೆ ಕರೆದೊಯ್ದು ಅಲ್ಲಿನ ಹೋಟೆಲ್‌ಗಳಲ್ಲಿ ಕೂಡಿಹಾಕಿ, ಸಾಫ್ಟ್ ಡ್ರಿಂಕ್ಸ್‌ಗಳಲ್ಲಿ ಮಾದಕ ದ್ರವ್ಯಗಳನ್ನು ಬೆರೆಸಿ ಬಲವಂತವಾಗಿ ಕುಡಿಸಿ ಪ್ರಜ್ಞೆ ತಪ್ಪಿಸಲಾಗುತ್ತಿತ್ತು, ಆನಂತರ ಅವರನ್ನು ಅಪರಿಚಿತ ಪುರುಷರ ಮುಂದೆ ಪ್ರದರ್ಶಿಸಿ, ಅವರ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಬಳಿಕ ಅದೇ ವಿಡಿಯೋ-ಫೋಟೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಾ, ಯುವತಿಯರ ಮೇಲೆ ನಿರಂತರವಾಗಿ ಕ್ರೂರ ದೌರ್ಜನ್ಯ ಎಸಗಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಕೇರಳ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮೂವರು ಮಹಿಳೆಯರು ದೂರು ದಾಖಲಿಸಿದ್ದು, ಐವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ ಹಾಗೂ ಅವರಲ್ಲಿ ಮೂವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ವರದಿಯಾಗಿದೆ. ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಮೊದಲ ಆರೋಪಿ ಸಿಂಧು ಎಂಬಾಕೆಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದ್ದರೆ, ಎರಡನೇ ಆರೋಪಿ ಅಲೀನಾ ಎಂಬಾಕೆಯ ಕೊಚ್ಚಿ ಗ್ಯಾಂಗ್‌ಗಳೊಂದಿಗಿನ ಲಿಂಕ್ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 
ಪ್ರಕರಣದ ಮೊದಲನೇ ಆರೋಪಿ (A1) ಸಿಂಧು. ಈಕೆ ಯುವತಿಯರನ್ನು ನಂಬಿಸಿ ವಿದೇಶಕ್ಕೆ ಸಾಗಿಸುವ ಜಾಲದ ಸೂತ್ರಧಾರಿಯಾಗಿದ್ದು, ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ. ಪ್ರಕರಣದ ಎರಡನೇ ಆರೋಪಿ (A2) ಅಲೀನಾ. ಈಕೆ ಕೊಚ್ಚಿಯ ಸ್ಥಳೀಯ ಕ್ರಿಮಿನಲ್ ಗ್ಯಾಂಗ್‌ಗಳೊಂದಿಗೆ ಸಂಪರ್ಕ ಹೊಂದಿದ್ದು, ಮಾಡೆಲಿಂಗ್ ಮತ್ತು ವಿದೇಶಿ ಉದ್ಯೋಗದ ಆಮಿಷವೊಡ್ಡಿ ಅಮಾಯಕ ಯುವತಿಯರನ್ನು ಸೆಳೆಯುವ ಜವಾಬ್ದಾರಿ ಹೊತ್ತಿದ್ದಳು ಎನ್ನಲಾಗಿದೆ.
ಇದೇ ವೇಳೆ ಪ್ರಕರಣದಲ್ಲಿ ಮತ್ತಷ್ಟು ದೂರುಗಳು ಬರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ತನಿಖೆಗಾಗಿ ಡಿಸಿಪಿ ಅಶ್ವತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net