

ಗ್ವಾಲಿಯರ್: ಇವತ್ತಿನ ಕಾಲಮಾನದಲ್ಲಿ ಮೊಬೈಲ್ ಫೋನ್ ಇಲ್ಲದೆ ಬದುಕುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಕೈಯಲ್ಲೇ ಇರೋ ಈ ಗ್ಯಾಜೆಟ್ ಯಾವಾಗ ಬಾಂಬ್ ರೀತಿ ಸಿಡಿಯುತ್ತೆ ಎಂದು ಹೇಳೋಕಾಗಲ್ಲ.
ಇದೀಗ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಅಂಥದ್ದೇ ಒಂದು ಎದೆ ನಡುಗಿಸುವ ಘಟನೆ ನಡೆದಿದೆ. ವೈದ್ಯರ ಕ್ಲಿನಿಕ್‌ಗೆ ಬಂದಿದ್ದ ರೋಗಿಯೊಬ್ಬರ ಕೈಯಲ್ಲಿದ್ದ ಮೊಬೈಲ್ ಫೋನ್ ನೋಡನೋಡುತ್ತಿದ್ದಂತೆ ಬೆಂಕಿಯುಂಡೆಯಂತೆ ಬ್ಲಾಸ್ಟ್ ಆಗಿದ್ದು, ಇಡೀ ಆಸ್ಪತ್ರೆಯನ್ನೇ ಬೆಚ್ಚಿಬೀಳಿಸಿದೆ.
ಗ್ವಾಲಿಯರ್‌ನ 'ದೃಷ್ಟಿ ಸ್ಕಿನ್ ಅಂಡ್ ಚೈಲ್ಡ್ ಕ್ಲಿನಿಕ್'ಗೆ ಎಂದಿನಂತೆ ರೋಗಿಗಳು ತಪಾಸಣೆಗೆ ಬಂದಿದ್ದರು. ಅಲ್ಲಿನ ಚರ್ಮ ಮತ್ತು ಮಕ್ಕಳ ತಜ್ಞ ಡಾ. ಅಶುತೋಷ್ ಶರ್ಮಾ ಅವರಲ್ಲಿ ಚಿಕಿತ್ಸೆಗಾಗಿ ಕಾಯುತ್ತಿದ್ದ ರೋಗಿಯೊಬ್ಬರು ಕೈಯಲ್ಲಿ ಫೋನ್ ಹಿಡಿದುಕೊಂಡು ಕುಳಿತಿದ್ದರು. ಇನ್ನೇನು ಡಾಕ್ಟರ್ ಕನ್ಸಲ್ಟೇಷನ್ ಮುಗಿಸಿಕೊಂಡು ಮನೆಗೆ ಹೋಗಬೇಕು ಅನ್ನುವಷ್ಟರಲ್ಲಿ ಅವರ ಕೈಯಲ್ಲಿದ್ದ ಸ್ಮಾರ್ಟ್ಫೋನ್ಲ್ಲಿ ವಿಚಿತ್ರವಾಗಿ ಹೊಗೆ ಬರಲ ಶುರುವಾಗಿ, ಕ್ಷಣಮಾತ್ರದಲ್ಲಿ ದಟ್ಟ ಬೆಂಕಿಯ ಜ್ವಾಲೆಯೊಂದಿಗೆ ದೊಡ್ಡ ಸದ್ದು ಮಾಡಿ ಸ್ಫೋಟಗೊಂಡಿದೆ.
ಇದೊಂದು ಪುಟ್ಟ ಮಕ್ಕಳ ಸ್ಪೆಷಲಿಸ್ಟ್ ಆಸ್ಪತ್ರೆ ಆಗಿದ್ದರಿಂದ ಆ ಸಮಯದಲ್ಲಿ ಕ್ಲಿನಿಕ್‌ನಲ್ಲಿ ಕೆಲವೇ ತಿಂಗಳ ಮುಗ್ಧ ನವಜಾತ ಶಿಶುಗಳು ಮತ್ತು ಗರ್ಭಿಣಿಯರು ಸೇರಿದಂತೆ ಹಲವು ರೋಗಿಗಳು ಹಾಜರಿದ್ದರು. ಸಡನ್ ಆಗಿ ಮೊಬೈಲ್ ಸ್ಫೋಟಗೊಂಡು ಬೆಂಕಿಯ ಕಿಡಿಗಳು ಚಿಮ್ಮುತ್ತಿದ್ದಂತೆ ಅಲ್ಲಿದ್ದವರೆಲ್ಲ ದಿಕ್ಕಾಪಾಲಾಗಿ ಓಡಲು ಶುರುಮಾಡಿದ್ದಾರೆ. ಹೊಗೆ ಇಡೀ ಕೊಠಡಿಯನ್ನು ಆವರಿಸುತ್ತಿದ್ದಂತೆ ಎಲ್ಲಿ ಆಸ್ಪತ್ರೆಗೆ ಬೆಂಕಿ ಹೊತ್ತಿಕೊಳ್ಳುತ್ತೋ? ತಮ್ಮ ಕಂದಮ್ಮಗಳಿಗೆ ಉಸಿರುಗಟ್ಟುತ್ತೋ? ಎಂಬ ಭೀತಿಯಲ್ಲಿ ಹೆತ್ತವರು ಮಕ್ಕಳನ್ನು ಎತ್ತಿಕೊಂಡು ಓಡಿದ್ದಾರೆ.
ಕ್ಲಿನಿಕ್ ಒಳಗೆ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಗಾಬರಿಯಾಗದೆ ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ಧೈರ್ಯದಿಂದ ಸ್ಥಳಕ್ಕೆ ಧಾವಿಸಿ ಉರಿಯುತ್ತಿದ್ದ ಮೊಬೈಲ್ ಮೇಲೆ ನೀರು ಸುರಿದು, ಬೆಂಕಿ ಅಕ್ಕಪಕ್ಕದ ಪೀಠೋಪಕರಣಗಳಿಗೆ ಹರಡದಂತೆ ಮಿಂಚಿನ ವೇಗದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅದೃಷ್ಟವಶಾತ್, ಸಿಬ್ಬಂದಿಯ ಈ ಸಮಯಪ್ರಜ್ಞೆಯಿಂದಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಮತ್ತು ಯಾರಿಗೂ ಸಣ್ಣಪುಟ್ಟ ಗಾಯಗಳೂ ಆಗಿಲ್ಲ. ರೋಗಿಯ ಕೈಯಿಂದ ಫೋನ್ ಜಾರಿ ಕೆಳಗೆ ಬಿದ್ದಿದ್ದರಿಂದ ಅವರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ.
ಮೊಬೈಲ್ ಬ್ಲಾಸ್ಟ್ ಆದ ಕ್ಷಣದಿಂದ ಹಿಡಿದು, ಬೆಂಕಿ ಉಂಡೆ ಮೇಲೆದ್ದು ಸಿಬ್ಬಂದಿ ಅದನ್ನು ನಂದಿಸಲು ಓಡಿಬಂದ ಸಂಪೂರ್ಣ ದೃಶ್ಯಗಳು ಕ್ಲಿನಿಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದೀಗ ಈ ರೋಮಂಚನಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಿಬ್ಬಂದಿಯ ಧೈರ್ಯಕ್ಕೆ ಭೇಷ್ ಎನ್ನುತ್ತಿದ್ದಾರೆ, (ಏಜೆನ್ಸೀಸ್).