ಶಾಸಕರ ನಕಲಿ ಸಹಿ ಸಂಗ್ರಹ ಪ್ರಕರಣ: ಮಮತಾ ಬ್ಯಾನರ್ಜಿ ಮನೆ ಮೇಲೆ ಸಿಐಡಿ ದಾಳಿ: ಸ್ಥಳದಲ್ಲಿ ಕಾರ್ಯಕರ್ತರ ಹೈಡ್ರಾಮ | Mamata Banerjee

ಮಾಜಿ ಸಿಎಂ ಮಮತಾ ಬ್ಯಾನರ್ಜಿ
ಮಾಜಿ ಸಿಎಂ ಮಮತಾ ಬ್ಯಾನರ್ಜಿ
Published on
ಕೋಲ್ಕತ್ತಾ: ಶಾಸಕರ ಸಹಿಯನ್ನು ನಕಲಿ ಮಾಡಿದ ಆರೋಪ ಪ್ರಕರಣದ ತನಿಖೆ ಭಾಗವಾಗಿ ಸಿಐಡಿ ಅಧಿಕಾರಿಗಳು ಮಂಗಳವಾರ(ಜೂ. 09) ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಮಾಜಿ ಸಿಎಂ ಮಮತಾ ಬ್ಯಾನರ್ಜಿ(Mamata Banerjee) ಅವರ ನಿವಾಸ ಮತ್ತು ಕಚೇರಿಯಲ್ಲಿ ಶೋಧ ನಡೆಸಲು ತೆರಳಿದ್ದರು. ಆದರೆ ಒಳಗೆ ಬಿಡದೇ ಟಿಎಂಸಿ ಕಾರ್ಯಕರ್ತರು ಭಾರಿ ಹೈಡ್ರಾಮ ಮಾಡಿದ್ದು, ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ಒಳ ಪ್ರವೇಶಿಸಿ ಶೋಧ ನಡೆಸಿದ್ದಾರೆ.
ಕೋಲ್ಕತ್ತಾದ ಖಾಲಿಘಾಟ್​ನಲ್ಲಿರುವ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಸಿಐಡಿ ತಂಡವು ಪೊಲೀಸ್ ಸಿಬ್ಬಂದಿಯೊಂದಿಗೆ ಟಿಎಂಸಿ ಕಚೇರಿಗೆ ತೆರಳಿತ್ತು. ಈ ವೇಳೆ ಮಾಜಿ ಸಂಸದ ಮತ್ತು ಪಕ್ಷದ ಖಜಾಂಚಿ ಸುಭಾಷಿಶ್ ಚಕ್ರವರ್ತಿ ಸಿಐಡಿ ಅಧಿಕಾರಿಗಳನ್ನು ತಡೆದಿದ್ದು, ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಮನೆಯಲ್ಲಿ ಇಲ್ಲ, ದೆಹಲಿಗೆ ತೆರಳಿದ್ದಾರೆ. ಹೀಗಾಗಿ ಶೋಧ ನಡೆಸಲು ಬಿಡಲ್ಲ ಎಂದಿದ್ದಾರೆ.
ಆದರೆ ಸಿಐಡಿ ಅಧಿಕಾರಿಗಳು ತನಿಖೆಯ ಭಾಗವಾಗಿ ಬಂದಿದ್ದೇವೆ. ಮತ್ತು ಸಂಬಂಧಪಟ್ಟ ಯಾರೂ ಹಾಜರಿರಬಾರದು ಎಂದು ಹೇಳಿದ್ದು, ಅಭಿಷೇಕ್‌ಗೆ ನೀಡಲಾದ ನೋಟಿಸ್ ಅನ್ನು ತೋರಿಸಿ, ಶೋಧ ಕಾರ್ಯಾಚರಣೆಯಲ್ಲಿ ಸಹಕರಿಸುವಂತೆ ಕೇಳಿದ್ದಾರೆ. ಈ ವೇಳೆ ಪಕ್ಷದ ಕಾರ್ಯಕರ್ತರು ಮತ್ತು ಸಿಐಡಿ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ.
ನಕಲಿ ಸಹಿ ಪ್ರಕರಣದಲ್ಲಿ ಪೊಲೀಸ್ ತನಿಖೆಗೆ ಸಹಾಯ ಮಾಡುತ್ತಿರುವ ಸಿಐಡಿ ತಂಡವು ಮೇ 30ರಂದು ಮೊದಲು ಅಭಿಷೇಕ್ ಅವರ ಖಲೀಘಾಟ್ ನಿವಾಸಕ್ಕೆ ಭೇಟಿ ನೀಡಿತ್ತು. ಜೂನ್ 1ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಆದಾಗ್ಯೂ, ಅಭಿಷೇಕ್ ಹಾಜರಾಗಲು 14 ದಿನಗಳ ಕಾಲಾವಕಾಶ ಕೋರಿದ್ದರು. ಸಿಐಡಿ ಅವರ ವಿನಂತಿಯನ್ನು ತಿರಸ್ಕರಿಸಿ ವಾರದೊಳಗೆ ತಮ್ಮ ಮುಂದೆ ಹಾಜರಾಗುವಂತೆ ಅವರು ಹೊಸ ನೋಟಿಸ್ ಜಾರಿಗೊಳಿಸಿತ್ತು.
ಸೋಮವಾರ ನೋಟಿಸ್ ಗಡುವು ಮುಗಿದಿದ್ದರೂ, ಅಭಿಷೇಕ್ ಸಿಐಡಿ ವಿಚಾರಣೆಗೆ ಹಾಜರಾಗಲಿಲ್ಲ. ಅವರು ಮಮತಾ ಬ್ಯಾನರ್ಜಿಯವರ ಜೊತೆ ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ್ದರು.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಶೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ, ಅಸಿಮಾ ಪಾತ್ರ ಮತ್ತು ನೈನಾ ಬಂಡೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ಉಪ ನಾಯಕರನ್ನಾಗಿ ಮತ್ತು ಫಿರ್ಹಾದ್ ಹಕೀಮ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸುವ ಕುರಿತು ವಿಧಾನಸಭೆಗೆ ಸಲ್ಲಿಸಲಾದ ದಾಖಲೆಗಳ ಮೇಲೆ ಹಲವಾರು ಟಿಎಂಸಿ ಶಾಸಕರ ಸಹಿಗಳನ್ನು ನಕಲಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಪ್ರಕರಣದ ತನಿಖೆ ನಡೆಯುತ್ತಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net