ಈ ಪಯಣದಲ್ಲಿ ನಾನು ಯಾರನ್ನೂ ಕೈಬಿಡುವುದಿಲ್ಲ, ನಾವು ಮತ್ತೆ ಗೆದ್ದೇ ಗೆಲ್ಲುತ್ತೇವೆ: MK Stalin

MK Stalin
MK Stalin
Published on
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (DMK) ಅನಿರೀಕ್ಷಿತ ಸೋಲು ಅನುಭವಿಸಿ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ, ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್(MK Stalin) ಅವರು ಕಾರ್ಯಕರ್ತರು ಮತ್ತು ತಮಿಳು ಜನತೆಯನ್ನು ಉದ್ದೇಶಿಸಿ ಅತ್ಯಂತ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. "ನನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಕಾರ್ಯಕರ್ತರು ನನ್ನ ಜೊತೆಗಿರುವವರೆಗೆ ನನಗೇನು ಚಿಂತೆ? ಪ್ರಬಲ ವಿರೋಧ ಪಕ್ಷವಾಗಿ ನಾವು ಜನರ ಪರ ಹೋರಾಟ ಮುಂದುವರಿಸುತ್ತೇವೆ" ಎಂದು ಅವರು ಘೋಷಿಸಿದ್ದಾರೆ.
ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಅಣ್ಣಾ ಅರಿವಲಯಂಗೆ ಭೇಟಿ ನೀಡಿದ್ದ ಸ್ಟಾಲಿನ್, ಕಾರ್ಯಕರ್ತರ ಕಣ್ಣೀರು ಕಂಡು ತಾವೂ ಭಾವುಕರಾಗಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಸೋಲಿನ ನಡುವೆಯೂ ಅಂಕಿಅಂಶಗಳ ಸಮೇತ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಕೇವಲ 3.5% ಮತಗಳ ಅಂತರ

ತಮಗೆ ಮತ ಹಾಕಿದ 1.54 ಕೋಟಿ ಜನರಿಗೆ ಕೃತಜ್ಞತೆ ಸಲ್ಲಿಸಿರುವ ಸ್ಟಾಲಿನ್, "ನಮಗೆ ಮತ್ತು ಗೆದ್ದ ಪಕ್ಷದ ನಡುವಿನ ಮತಗಳ ವ್ಯತ್ಯಾಸ ಕೇವಲ 17.43 ಲಕ್ಷ ಮಾತ್ರ. ಶೇಕಡಾವಾರು ಲೆಕ್ಕದಲ್ಲಿ ಇದು ಕೇವಲ 3.52 ಪ್ರತಿಶತ. ಜನರು ನಮ್ಮ ಮೇಲಿಟ್ಟಿರುವ ಈ ನಂಬಿಕೆಯನ್ನು ನಾನು ಅತ್ಯಂತ ಅಮೂಲ್ಯವಾದ ಆಸ್ತಿ ಎಂದು ಪರಿಗಣಿಸುತ್ತೇನೆ. ಗೆದ್ದ ಅಭ್ಯರ್ಥಿಗಳು ಕೂಡಲೇ ಜನರ ಬಳಿಗೆ ಹೋಗಿ ಕೃತಜ್ಞತೆ ಸಲ್ಲಿಸಬೇಕು" ಎಂದು ಸೂಚಿಸಿದ್ದಾರೆ.

"ನಾವು ನೋಡದ ಗೆಲುವಿಲ್ಲ, ಅನುಭವಿಸದ ಸೋಲಿಲ್ಲ"

ಡಿಎಂಕೆ ಪಕ್ಷದ ಸುದೀರ್ಘ ಇತಿಹಾಸವನ್ನು ಸ್ಮರಿಸಿದ ಅವರು, "ನಮ್ಮ ಪಕ್ಷ ಆರು ಬಾರಿ ಅಧಿಕಾರ ನಡೆಸಿದೆ. ನಾವು ನೋಡದ ಗೆಲುವಿಲ್ಲ, ಎದುರಿಸದ ಸೋಲೂ ಇಲ್ಲ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ನಾಯಕ ಕಲೈನಾರ್ ನಮಗೆ ಕಲಿಸಿದ ಪಾಠ. ನೀವು ಈ ಚಳವಳಿಯ ರಕ್ತನಾಳಗಳು ಮತ್ತು ಬೇರುಗಳು. ನೀವು ನನ್ನನ್ನು ಸಾಂತ್ವನಗೊಳಿಸಲು ಸಂದೇಶ ಕಳುಹಿಸುತ್ತಿದ್ದೀರಿ, ಆದರೆ ನಿಮ್ಮ ಶಕ್ತಿಯೇ ನನಗೆ ದೊಡ್ಡ ಸಾಂತ್ವನ" ಎಂದಿದ್ದಾರೆ.

ವಿರೋಧ ಪಕ್ಷವಾಗಿ ಹೋರಾಟದ ಸಂಕಲ್ಪ

ಅಧಿಕಾರ ಕಳೆದುಕೊಂಡಿದ್ದಕ್ಕೆ ಎದೆಗುಂದದ ಸ್ಟಾಲಿನ್, ಮುಂದಿನ ಹಾದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ನಾವು ಆಡಳಿತ ಪಕ್ಷದಲ್ಲಿದ್ದರೆ ಜನರಿಗಾಗಿ ಯೋಜನೆ ರೂಪಿಸುತ್ತೇವೆ, ವಿರೋಧ ಪಕ್ಷದಲ್ಲಿದ್ದರೆ ಜನರ ಬೇಡಿಕೆಗಳಿಗಾಗಿ ಹೋರಾಡುತ್ತೇವೆ. ಪೆರಿಯಾರ್, ಅಣ್ಣಾ ಮತ್ತು ಕಲೈನಾರ್ ಅವರ ಹೆಜ್ಜೆಗುರುತುಗಳಲ್ಲಿ ದ್ರಾವಿಡ ತತ್ವಗಳನ್ನು ರಕ್ಷಿಸುವ ನಮ್ಮ ಪ್ರಯಾಣ ಮುಂದುವರಿಯುತ್ತದೆ. ನಮ್ಮ ಈ ಪಯಣದಲ್ಲಿ ನಾನು ಯಾರನ್ನೂ ಕೈಬಿಡುವುದಿಲ್ಲ. ನಾವು ಮತ್ತೆ ಗೆದ್ದೇ ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಭಾವುಕ ಪತ್ರವು ಸೋಲಿನಿಂದ ಕಂಗೆಟ್ಟಿದ್ದ ಡಿಎಂಕೆ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದ್ದು, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net