ಸಿಜೆಪಿ ಪ್ರತಿಭಟನೆ ವೇಳೆ ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ: ಪಾಕ್​ನ 400ಕ್ಕೂ ಹೆಚ್ಚು ಖಾತೆಗಳನ್ನು ಪತ್ತೆ ಹಚ್ಚಿದ ದೆಹಲಿ ಪೊಲೀಸರು! | Delhi Police

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ದೆಹಲಿಯ ಜಂತರ್ ಮಂತರ್​ನಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಪಾಕಿಸ್ತಾನ ಮೂಲದ 480 ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪತ್ತೆ ಹಚ್ಚಲಾಗಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿಯೂ ಇದೇ ಖಾತೆಗಳು ಸಕ್ರಿಯವಾಗಿದ್ದವು ಎಂದು ದೆಹಲಿ ಪೊಲೀಸರು(Delhi Police) ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ಪಾಕಿಸ್ತಾನ ಮೂಲದ ಹಲವು ಸಾಮಾಜಿಕ ಜಾಲತಾಣದ ಖಾತೆಗಳು ಜನರನ್ನು, ವಿಶೇಷವಾಗಿ ವಿದ್ಯಾರ್ಥಿಗಳನ್ನು ಪ್ರಚೋದಿಸುವ ಉದ್ದೇಶದಿಂದ ವದಂತಿಗಳು, ನಕಲಿ ಪೋಸ್ಟ್‌ಗಳು ಮತ್ತು ವೀಡಿಯೊಗಳನ್ನು ಹಂಚುತ್ತಿದ್ದು. ಪ್ರಸ್ತುತ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ನೋಡುತ್ತಿವೆ ಎಂದು ತಿಳಿಸಿದ್ದಾರೆ.
ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ತಪ್ಪು ಮಾಹಿತಿ ಹರಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇಲ್ಲಿಯವರೆಗೆ, ವದಂತಿಗಳನ್ನು ಹರಡಲು ಯತ್ನಿಸಿದ 480ಕ್ಕೂ ಹೆಚ್ಚು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗುರುತಿಸಿದ್ದೇವೆ. ಈ ಖಾತೆಗಳನ್ನು ನಿರ್ಬಂಧಿಸುತ್ತಿದ್ದೇವೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಸಕ್ರಿಯವಾಗಿದ್ದ ಖಾತೆಗಳು ಇವು ಎಂದಿದ್ದಾರೆ.
ಈ ಖಾತೆಗಳ ಪ್ರಾಥಮಿಕ ಉದ್ದೇಶವೆಂದರೆ ತಪ್ಪು ಮಾಹಿತಿಯನ್ನು ಹರಡುವುದು ಮತ್ತು ಜನರನ್ನು, ವಿಶೇಷವಾಗಿ ವಿದ್ಯಾರ್ಥಿಗಳನ್ನು, ದಾರಿತಪ್ಪಿಸುವ, ಅವರನ್ನು ಪ್ರಚೋದಿಸುವ ಗುರಿಯನ್ನು ಹೊಂದಿವೆ. ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ, ನಕಲಿ ಪೋಸ್ಟ್‌ಗಳು, ಸಂಪಾದಿತ ವೀಡಿಯೊಗಳು ಅಥವಾ ಅನಾಮಧೇಯ ಹ್ಯಾಂಡಲ್‌ಗಳಿಂದ ಬರುವ ಮಾಹಿತಿಯಿಂದ ಪ್ರಚೋದನೆಗೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಷಯವನ್ನು ಫಾರ್ವರ್ಡ್ ಮಾಡುವ ಅಥವಾ ಹಂಚಿಕೊಳ್ಳುವ ಮೊದಲು ಮಾಹಿತಿಯನ್ನು ಪರಿಶೀಲಿಸುವಂತೆ ಮತ್ತು ವದಂತಿಗಳನ್ನು ಹರಡುವುದನ್ನು ತಡೆಯುವಂತೆ ಕೋರಿದ್ದು, "ಯಾವುದೇ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೊದಲು, ದಯವಿಟ್ಟು ಸತ್ಯಗಳನ್ನು ಪರಿಶೀಲಿಸಿ. ವದಂತಿಗಳನ್ನು ಹರಡಬೇಡಿ ಮತ್ತು ಸಮಾಜ ವಿರೋಧಿ ಅಂಶಗಳು ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಬಿಡಬೇಡಿ. ದೆಹಲಿ ಪೊಲೀಸರು ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವ ನಾಗರಿಕರ ಹಕ್ಕನ್ನು ಗೌರವಿಸುತ್ತಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net