ಹೈದರಾಬಾದ್‌ನಲ್ಲಿ ದೇವಾಲಯ ಧ್ವಂಸ ಮಾಡಿದ ಕಿಡಿಗೇಡಿಗಳು; ಸ್ಥಳಕ್ಕೆ ಓವೈಸಿ ಭೇಟಿ, ಬಿಜೆಪಿ ಆಕ್ರೋಶ! Temple

ಹಾನಿಗೊಳಗಾದ ದೇವಸ್ಥಾನ, ಅಸಾದುದ್ದೀನ್ ಓವೈಸಿ
ಹಾನಿಗೊಳಗಾದ ದೇವಸ್ಥಾನ, ಅಸಾದುದ್ದೀನ್ ಓವೈಸಿ
Published on

ಪ್ರಮುಖ ಮುಖ್ಯಾಂಶಗಳು

  • ಹೈದರಾಬಾದ್‌ನ ಪುರಾನಪುಲ್ ದರ್ವಾಜಾದಲ್ಲಿ ದೇವಾಲಯವನ್ನು ಧ್ವಂಸ ಮಾಡಿದ ಕಿಡಿಗೇಡಿಗಳು
  • ಸ್ಥಳಕ್ಕೆ ಹೈದರಾಬಾದ್​ ಸಂಸದ ಅಸಾದುದ್ದೀನ್ ಓವೈಸಿ ಬೇಟಿ
  • ಕಾಂಗ್ರೆಸ್ ಸರ್ಕಾರ ಗಾಢ ನಿದ್ರೆಯಲ್ಲಿದ್ದಾಗ ಉಗ್ರಗಾಮಿಗಳು ತೆಲಂಗಾಣವನ್ನು ವಶಪಡಿಸಿಕೊಂಡಿದ್ದಾರೆ : ಬಿಜೆಪಿ
ಹೈದರಾಬಾದ್‌: ಹೈದರಾಬಾದ್‌ನ ಪುರಾನಪುಲ್ ದರ್ವಾಜಾದಲ್ಲಿ ಬುಧವಾರ (ಜ.14) ರಾತ್ರಿ ಅಪರಿಚಿತ ವ್ಯಕ್ತಿಗಳು ದೇವಾಲಯ(Temple)ವನ್ನು ಧ್ವಂಸ ಮಾಡಿದ ನಂತರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರಲ್ಲಿ ಆತಂಕ ಮತ್ತು ಭಯದ ವಾತಾವರಣವನ್ನು ಉಂಟುಮಾಡಿದೆ.
ಸಂಜೆ ತಡವಾಗಿ ಹಾನಿ ಕಂಡುಬಂದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿದ್ದು, ನಂತರ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಶೀಘ್ರದಲ್ಲೇ, ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದರು, ಅಷ್ಟರಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಲಾಗುತ್ತಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಪ್ರದೇಶದ ನಿವಾಸಿಗಳಿಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಭಯ ನೀಡಿ ಮತ್ತು ಹಾನಿಗೊಳಗಾದ ವಿಗ್ರಹದ ಪುನಃಸ್ಥಾಪನೆಯ ಭರವಸೆ ಕೊಟ್ಟಿದ್ದಾರೆ. ಯಾವುದೇ ಹೆಚ್ಚಿನ ತೊಂದರೆಯಾಗದಂತೆ ಪುರಾನಪುಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಇಂದು ಬೆಳಿಗ್ಗೆ, AIMIM ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ನಿವಾಸಿಗಳು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಜನರು ಶಾಂತವಾಗಿರಲು ಮತ್ತು ಅಧಿಕಾರಿಗಳೊಂದಿಗೆ ಸಹಕರಿಸಲು ಮನವಿ ಮಾಡಿದರು.
ಶಾಂತಿಯನ್ನು ಕಾಪಾಡಿಕೊಳ್ಳಬೇಕು ಮತ್ತು ಪೊಲೀಸರು ಈ ವಿಷಯವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು. ವಿಧ್ವಂಸಕ ಕೃತ್ಯದ ಹಿಂದೆ ಯಾರಿದ್ದಾರೆಂದು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಪ್ರದೇಶದಲ್ಲಿ ಶಾಂತಿ ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ವದಂತಿಗಳನ್ನು ನಂಬಬಾರದು ಮತ್ತು ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಆದರೆ, ಈ ವಿಷಯವು ರಾಜಕೀಯ ಬಣ್ಣಕ್ಕೆ ತಿರುಗಿ, ಬಿಜೆಪಿ, ಕಾಂಗ್ರೆಸ್ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದೆ.
ಹೈದರಾಬಾದ್‌ನ ಪುರನಪುಲ್‌ನಲ್ಲಿ ದೇವಿಯ ಮೂರ್ತಿ ಮತ್ತು ಶಿವಾಜಿ ಧ್ವಜವನ್ನು ಅಪವಿತ್ರಗೊಳಿಸಲಾಗಿದೆ. ತೆಲಂಗಾಣದಲ್ಲಿ ಹಿಂದೂ ದೇವಾಲಯಗಳ ಸಂಘಟಿತ ಮತ್ತು ವ್ಯವಸ್ಥಿತ ಅಪವಿತ್ರೀಕರಣ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರವು ತನ್ನ ಮತಬ್ಯಾಂಕ್​ನ್ನು ರಕ್ಷಿಸಲು ಈ ಉಗ್ರಗಾಮಿ ಶಕ್ತಿಗಳಿಗೆ ಬೆಂಬಲಕ್ಕೆ ನಿಂತಿದೆ ಎಂದು ಬಿಜೆಪಿ ತೆಲಂಗಾಣದ ಎಕ್ಸ್ ಹ್ಯಾಂಡಲ್ ಪೋಸ್ಟ್ ಮಾಡಿದೆ.
ತೆಲಂಗಾಣ ಬಿಜೆಪಿ ಮುಖ್ಯಸ್ಥ ಎನ್. ರಾಮಚಂದರ್ ರಾವ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಕಾಂಗ್ರೆಸ್ ಸರ್ಕಾರ ಗಾಢ ನಿದ್ರೆಯಲ್ಲಿರುವಾಗ ಉಗ್ರಗಾಮಿಗಳು ತೆಲಂಗಾಣವನ್ನು ವಶಪಡಿಸಿಕೊಂಡಿದ್ದಾರೆ. ಕಾಂಗ್ರೆಸ್ ತನ್ನ ಮತಬ್ಯಾಂಕ್ ವಿರುದ್ಧ ಎಂದಿಗೂ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅವರಿಗೂ ತಿಳಿದಿದೆ. ಬಿಜೆಪಿ ದೃಢನಿಶ್ಚಯದಿಂದ ನಿಂತು ನಮ್ಮ ದೇವಾಲಯಗಳನ್ನು ರಕ್ಷಿಸಲು ಹೋರಾಡುತ್ತದೆ ಎಂದು ಅವರು ಹೇಳಿದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net